ಗಣಿಯಲ್ಲಿ ಸ್ಫೋಟ ಸಂಭವಿಸಿ 14 ಮಂದಿ ಕಾರ್ಮಿಕರ ಸಾವು

ಬೀಜಿಂಗ್, ಡಿ.17-ಗಣಿಯಲ್ಲಿ ಸ್ಫೋಟ ಸಂಭವಿಸಿ 14 ಮಂದಿ ಕಾರ್ಮಿಕರು ಬಲಿಯಾಗಿರುವ ಘಟನೆ ಆಗ್ನೇಯ ಚೀನಾದಲ್ಲಿ ಆಂಗ್ಲಾನ್ ರಾಜ್ಯದ ಗ್ಲೌಲಾಂಗ್ ಗಣಿ ಪ್ರದೇಶದಲ್ಲಿ ನಡೆದಿದೆ.

ಸ್ಥಳೀಯ ಸಮಯದ ಪ್ರಕಾರ ಮುಂಜಾನೆ 1.30ರಲ್ಲಿ ಈ ದುರ್ಘಟನೆ ಸಂಭವಿಸಿದೆ ಎಂದು ಜಿಂಗ್ಯೂ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಸುಮಾರು 23 ಕಾರ್ಮಿಕರು ಕೆಲಸ ಮಾಡುತ್ತಿದ್ದರು. ಈ ವೇಳೆ ಸ್ಫೋಟ ಸಂಭವಿಸಿದೆ ಎಂದು ಮೂಲಗಳು ತಿಳಿಸಿವೆ. 7 ಮಂದಿ ಕಾರ್ಮಿಕರನ್ನು ತುರ್ತು ಕಾರ್ಯಪಡೆ ರಕ್ಷಿಸಿದ್ದು, ಇನ್ನೂ ಇಬ್ಬರು ಒಳಗೆ ಸಿಲುಕಿಕೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇಡೀ ವಿಶ್ವದಲ್ಲೇ ಅತಿ ಹೆಚ್ಚು ಕಲ್ಲಿದ್ದಲು ಉತ್ಪಾದಿಸುವ ದೇಶವಾದ ಚೀನಾದಲ್ಲಿ ಗಣಿ ದುರಂತಗಳು ಸಾಮಾನ್ಯವಾಗಿದ್ದರೂ ಇತ್ತೀಚಿನ ದಿನಗಳಲ್ಲಿ ಕೈಗೊಂಡ ಕೆಲವೊಂದು ಸುರಕ್ಷತಾ ಕ್ರಮಗಳಿಂದಾಗಿ ಸಾವು-ನೋವು ಕಡಿಮೆಯಾಗಿತ್ತು ಎಂದು ವರದಿ ತಿಳಿಸಿದೆ.

ಕಳೆದ ನವೆಂಬರ್‍ನಲ್ಲಿ ಶ್ಯಾಂಗೈ ಪ್ರದೇಶದಲ್ಲಿ ಇದೇ ರೀತಿ ಗಣಿಯಲ್ಲಿ ಸ್ಫೋಟ ಸಂಭವಿಸಿ 15 ಮಂದಿ ಕಾರ್ಮಿಕರು ಮೃತಪಟ್ಟಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ.
ಇಂದು ಮುಂಜಾನೆ ನಡೆದಿರುವ ದುರಂತಕ್ಕೆ ಸಂಬಂಧಿಸಿದಂತೆ ತನಿಖೆ ಆದೇಶಿಸಲಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ