ಕಾಂಗ್ರೆಸ್ನಲ್ಲಿ ಚುರುಕುಗೊಂಡ ರಾಜಕೀಯ ಚಟುವಟಿಕೆಗಳು

ಬೆಂಗಳೂರು,ಡಿ.10- ರಾಜ್ಯದ ಕಾಂಗ್ರೆಸ್ ನಲ್ಲಿ ರಾಜಕೀಯ ವಿದ್ಯಾಮಾನಗಳು ಚುರುಕುಗೊಂಡಿವೆ. ಉಪ ಚುನಾವಣೆಯಲ್ಲಿ ಭಾರಿ ಸೋಲಿನ ಹೊಣೆ ಹೊತ್ತು ಕಾಂಗ್ರೆಸ್ ನ ಮಾಜಿ ಸಿಎಂ ಸಿದ್ದರಾಮಯ್ಯ, ಪ್ರತಿಪಕ್ಷ ಸ್ಥಾನಕ್ಕೆ, ಶಾಸಕಾಂಗ ಪಕ್ಷದ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದರು. ಇವರ ನಂತ್ರ ದಿನೇಶ್ ಗುಂಡೂರಾವ್ ಕೂಡ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿ ಹೊರ ನಡೆದಿದ್ದರು. ಇಂತಹ ತೆರವಾದ ಸ್ಥಾನಗಳಿಗೆ ರಾಜ್ಯ ಕಾಂಗ್ರೆಸ್ ನಲ್ಲಿ ಲಾಬಿ ಶುರುವಾಗಿದ್ದು, ಬಿಕೆ ಹರಿಪ್ರಸಾದ್, ಚಂದ್ರಶೇಖರ್ ಸೇರಿದಂತೆ ಇತರರು ದಿಲ್ಲಿಗೆ ದೌಡಾಯಿಸಿ ತಮ್ಮ ಲಾಬಿಯನ್ನು ಮುಂದುವರೆಸಿದ್ದಾರೆ.

ದಿಢೀರ್ ದೆಹಲಿಗೆ ತೆರಳಿರುವ ಬಿಕೆ ಹರಿಪ್ರಸಾದ್, ಚಂದ್ರಶೇಖರ್ ಹಾಗೂ ಮತ್ತೋರ್ವರು ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಮತ್ತಷ್ಟು ಸ್ಥಾನಗಳನ್ನು ಗೆಲ್ಲಬಹುದಾಗಿತ್ತು. ಆದ್ರೇ ಸೋಲಿಗೆ ಸಿದ್ದರಾಮಯ್ಯ, ದಿನೇಶ್ ಗುಂಡೂರಾವ್ ಅವರೇ ಕಾರಣವೆಂದು ಸೋನಿಯಾ ಗಾಂಧಿಯವರಿಗೆ ದೂರಿದ್ದಾರೆ. ಅಲ್ಲದೇ ಕೆಪಿಸಿಸಿ ಅಧ್ಯಕ್ಷರು ಹಾಗೂ ವಿರೋಧ ಪಕ್ಷದ ನಾಯಕರು, ಶಾಸಕಾಂಗ ಪಕ್ಷದ ನಾಯಕರ ಹುದ್ದೆಯ ಲಾಬಿಯಲ್ಲಿ ತೊಡಗಿದ್ದಾರೆ.

ಆದ್ರೇ ಕಾಂಗ್ರೆಸ್ ಹೈಕಮಾಂಡ್ ಯಾರಿಗೆ ಕೆಪಿಸಿಸಿ ಅಧ್ಯಕ್ಷರ ಪಟ್ಟ, ಯಾರಿಗೆ ಶಾಸಕಾಂಗ ಪಕ್ಷದ ನಾಯಕ, ವಿರೋಧ ಪಕ್ಷದ ನಾಯಕನ ಪಟ್ಟ ಕಟ್ಟಲಿದೆ ಎಂಬುದೇ ತೀವ್ರ ಕುತೂಹಲ ಮೂಡಿದೆ. ಇಂತಹ ಸ್ಥಾನಕ್ಕೆ ಏರುವ ಪಟ್ಟಿಯಲ್ಲಿ ಮಾತ್ರ ಮೂಲ ಕಾಂಗ್ರೆಸಿಗರಾಗಿರುಪ ಹಿರಿಯ ಮುಖಂಡ ಹೆಚ್ ಕೆ ಪಾಟೀಲ್, ಕನಕಪುರದ ಬಂಡೆ ಡಿಕೆ ಶಿವಕುಮಾರ್, ಮಾಡಿ ಡಿಸಿಎಂ ಡಾ.ಜಿ.ಪರಮೇಶ್ವರ್ ಅವರ ಹೆಸರುಗಳು ಮಾತ್ರ ಮುಂಚೂಣಿಯಲ್ಲಿ ಕೇಳಿ ಬರುತ್ತಿವೆ. ಈ ಬಗ್ಗೆ ಮುಂದಿನ ದಿನಗಳಲ್ಲಿ ಮತ್ತಷ್ಟು ಮಾಹಿತಿ ಲಭ್ಯವಾಗಬೇಕಿದೆ.

ಈ ಪೈಕಿ ಎಂಬಿ ಪಾಟೀಲ್ ಅವರು ನಾನು ರೇಸಿನಲ್ಲಿಲ್ಲ ಕಳೆದ ಬಾರಿಯೇ ಹೇಳಿದ್ದಾರೆ. ಅಲ್ಲದೆ ಸಿದ್ದರಾಮಯ್ಯ ಹೆಸರು ಸೇರ್ಪಡೆಯಾದರೆ ಬೆಂಬಲಕ್ಕೆ ನಿಲ್ಲಲು ನಿರ್ಧರಿಸಿದ್ದಾರೆ. ಎಸ್ ಆರ್ ಪಾಟೀಲ್ ಅವರು ವಯಸ್ಸಿನ ಕಾರಣ ಹಿಂದೆ ಸರಿಯುವ ಸಾಧ್ಯತೆಯಿದೆ. ಕೊನೆಗೆ ಮುನಿಯಪ್ಪ ಹಾಗೂ ಶಿವಕುಮಾರ್ ನಡುವೆ ಪೈಪೋಟಿ ಬರಲಿದ್ದು, ಡಿಕೆಶಿ ಅವರು ಅಧ್ಯಕ್ಷ ಸ್ಥಾನಕ್ಕೇರುವ ಲಕ್ಷಣಗಳಿವೆ ಎಂಬ ಸುದ್ದಿಯಿದೆ.

ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ವಿಚಾರಣೆ ಎದುರಿಸುತ್ತಿರುವ ಡಿಕೆ ಶಿವಕುಮಾರ್ ಅವರಿಗೆ ಜಾಮೀನು ಮಂಜೂರಾಗುತ್ತಿದ್ದಂತೆಯೇ ರಾಜ್ಯ ಕಾಂಗ್ರೆಸ್‍ನಲ್ಲಿ ಚಟುವಟಿಕೆಗಳು ಗರಿಗೆದರಿತ್ತು. ಇನ್ನೇನು ಕೆಪಿಸಿಸಿ ಅಧ್ಯಕ್ಷ ಸ್ಥಾನ ಖಾತ್ರಿ ಎಂದು ಎರೆಡೆರಡು ಬಾರಿ ಸುದ್ದಿ ಹಬ್ಬಿತ್ತು. ಈಗಲೂ ಡಿಕೆ ಶಿವಕುಮಾರ್ ಅವರೇ ಕೆಪಿಸಿಸಿ ಅಧ್ಯಕ್ಷ ಎಂದು ಸುದ್ದಿ ಹಬ್ಬಿಸಲಾಗುತ್ತಿದೆ. ಆದರೆ, ಮನಿಲಾಂಡ್ರಿಂಗ್ ಪ್ರಕರಣದಿಂದ ಮುಕ್ತರಾಗದ ಶಿವಕುಮಾರ್ ಅವರಿಗೆ ಯಾವುದೇ ಉನ್ನತ ಹುದ್ದೆಯನ್ನು ನೀಡದಿರಲು ಕಾಂಗ್ರೆಸ್ ನಿರ್ಧರಿಸಿದೆ. ಕೆಪಿಸಿಸಿ ಸಾಂಸ್ಥಿಕ ಚಟುವಟಿಕೆಯ ಚೌಕಟ್ಟಿನಾಚೆ ಹೆಚ್ಚು ಪ್ರಭಾವಶಾಲಿಯಾಗಿರುವ ಡಿಕೆ ಶಿವಕುಮಾರ್, ಬಾಹ್ಯವಾಗಿಯೇ ಸಾಮಥ್ರ್ಯ ಪ್ರದರ್ಶನ ಮಾಡಲು ಬಯಸಿದ್ದಾರೆ ಎನ್ನಲಾಗಿದೆ.

ಸಿದ್ದರಾಮಯ್ಯ ಅವರ ಸರ್ಕಾರದಲ್ಲಿ ಗೃಹ ಸಚಿವರಾಗಿದ್ದ ಎಂಬಿ ಪಾಟೀಲ್, ವೀರಶೈವ-ಲಿಂಗಾಯತ ಪ್ರತ್ಯೇಕ ಧರ್ಮದ ಹೋರಾಟದಿಂದ ಮುಂಚೂಣಿಗೆ ಬಂದವರು. ಮುಖ್ಯವಾಗಿ ಉತ್ತರ ಕರ್ನಾಟಕದ ಭಾಗದಲ್ಲಿ ಕಾಂಗ್ರೆಸ್ ನಾಯಕರು, ಅದರಲ್ಲಿಯೂ ಹಿರಿಯ ಸಚಿವರು ವಿಧಾನಸಭೆ ಚುನಾವಣೆಯಲ್ಲಿ ಸೋಲು ಅನುಭವಿಸಿದಾಗ ಎಂಬಿ ಪಾಟೀಲ್ ಸುಮಾರು 30 ಸಾವಿರ ಮತಗಳ ಅಂತರದಿಂದ ಗೆಲುವು ಸಾಧಿಸುವ ಮೂಲಕ ತಮ್ಮ ಶಕ್ತಿ ಪ್ರದರ್ಶಿಸಿದ್ದರು. ಬಿಜೆಪಿ ಪ್ರಾಬಲ್ಯ ಸಾಧಿಸಿರುವ ಉತ್ತರ ಕರ್ನಾಟಕದ ಭಾಗದಲ್ಲಿ ಲಿಂಗಾಯತ ಸಮುದಾಯದ ಪ್ರಮುಖ ನಾಯಕರಾಗಿ ಬೆಳೆಯುವ ಎಂಬಿ ಪಾಟೀಲ್ ಅವರಿಗೆ ಅಧ್ಯಕ್ಷ ಸ್ಥಾನ ನೀಡಿದರೆ ಪಕ್ಷಕ್ಕೆ ಹೆಚ್ಚು ಅನುಕೂಲವಾಗಲಿದೆ ಎಂಬ ಲೆಕ್ಕಾಚಾರ ಕೂಡ ಕಾಂಗ್ರೆಸ್‍ನಲ್ಲಿದೆ.

ಸಂಯುಕ್ತ ಜನತಾದಳದಿಂದ ಕಾಂಗ್ರೆಸ್ ಸೇರ್ಪಡೆಯಾದ ಕೃಷ್ಣ ಬೈರೇಗೌಡ ಈಗ ಪಕ್ಷದ ನಿಷ್ಠಾವಂತ ನಾಯಕರಲ್ಲಿ ಒಬ್ಬರು. ತೀಕ್ಷ್ಣ ಮಾತುಗಾರರಾಗಿರುವ ಕೃಷ್ಣ ಬೈರೇಗೌಡ, ಕಾನೂನು ಹಾಗೂ ರಾಜಕೀಯ ಜ್ಞಾನವನ್ನು ಆಳವಾಗಿ ಅರಿತವರು. ಸಮ್ಮಿಶ್ರ ಸರ್ಕಾರ ಪತನಗೊಳ್ಳುವ ಮುನ್ನ ವಿಧಾನಸಭೆಯಲ್ಲಿ ನಡೆದ ಚರ್ಚೆಯಲ್ಲಿ ಕೃಷ್ಣ ಬೈರೇಗೌಡ ಪ್ರಸ್ತಾಪಿಸಿದ್ದ ಸಂವಿಧಾನ ಹಾಗೂ ರಾಜಕೀಯದ ವಿಚಾರಗಳು ಚರ್ಚೆಯ ತೀವ್ರತೆಯನ್ನು ಹೆಚ್ಚಿಸಿದ್ದವು. ಪಕ್ಷದ ನಾಯಕತ್ವವನ್ನು ಯುವಕರಿಗೆ ವಹಿಸಬೇಕು ಎಂಬ ಅಭಿಪ್ರಾಯ ವ್ಯಕ್ತವಾದರೆ ಕೃಷ್ಣ ಬೈರೇಗೌಡ ಅವರಿಗೆ ಮೊದಲ ಆದ್ಯತೆ ಸಿಗಲಿದೆ. ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ ಅನುಭವ ಅವರಿಗಿದೆ.

ದಲಿತ ನಾಯಕರಾಗಿರುವ ಮಾಜಿ ಸಚಿವ ಡಾ. ಎಚ್ ಸಿ ಮಹದೇವಪ್ಪ ಅವರನ್ನು ಕೂಡ ಕೆಪಿಸಿಸಿ ಜವಾಬ್ದಾರಿ ಹೊರುವ ಪ್ರಮುಖ ಹುದ್ದೆಗೆ ಪರಿಗಣಿಸಲಾಗಿದೆ. ಸಿದ್ದರಾಮಯ್ಯ ಸರ್ಕಾರದಲ್ಲಿ ಲೋಕೋಪಯೋಗಿ ಸಚಿವರಾಗಿದ್ದ ಎಚ್ ಸಿ ಮಹದೇವಪ್ಪ, ಕಳೆದ ವಿಧಾನಸಭೆ ಚುನಾವಣೆಯಲ್ಲಿ ಸೋಲು ಅನುಭವಿಸಿದ್ದರು. ಸಿದ್ದರಾಮಯ್ಯ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿರುವ ಅವರು ಚುನಾವಣಾ ರಾಜಕೀಯದಿಂದ ಹಿನ್ನೆಲೆಗೆ ಸರಿದು ತಮ್ಮ ಮಗನನ್ನು ರಾಜಕೀಯಕ್ಕೆ ತರುವ ಪ್ರಯತ್ನದಲ್ಲಿದ್ದಾರೆ. ಅವರ ಈ ನಿರ್ಧಾರ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಅವರನ್ನು ತರುವ ಉದ್ದೇಶಕ್ಕೆ ಪ್ಲಸ್ ಪಾಯಿಂಟ್ ಆಗಲಿದೆ. ಅವರು ದಲಿತ ನಾಯಕರಾಗಿರುವುದು ಕೂಡ ಸಮುದಾಯದ ಮತಗಳನ್ನು ಸೆಳೆಯಲು ಅನುಕೂಲವಾಗಲಿದೆ ಎಂಬ ಚರ್ಚೆ ನಡೆಯುತ್ತಿದೆ.

ಕೆಲವು ದಿನಗಳ ಹಿಂದೆ ಮಾಜಿ ಸಿಎಂ ಎಸ್ ಎಂ ಕೃಷ್ಣ ಅವರನ್ನು ಭೇಟಿ ಮಾಡಿ ಚರ್ಚಿಸಿದ್ದ ಮಾಜಿ ಕೇಂದ್ರ ಸಚಿವ, ಸತತ ಏಳು ಬಾರಿ ಸಂಸದರಾಗಿರುವ ಕೆ ಎಚ್ ಮುನಿಯಪ್ಪ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನು ಭೇಟಿ ಮಾಡಿ, ಕೆಪಿಸಿಸಿ ಅಧ್ಯಕ್ಷ ಸ್ಥಾನ ತಮಗೇ ನೀಡುವಂತೆ ಮನವಿ ಮಾಡಿಕೊಂಡಿದ್ದಾರೆ. ಕಾಂಗ್ರೆಸ್ ಪಕ್ಷದ ಮೇಲಿರುವ ತಮ್ಮ ನಿಷ್ಠೆಯ ಕುರಿತು ಹೈಕಮಾಂಡಿಗೆ ಮನವರಿಕೆ ಮಾಡಿದ್ದೇನೆ. ತಮ್ಮ ಮನವಿಗೆ ಸೋನಿಯಾ ಗಾಂಧಿ ಸಕಾರಾತ್ಮಕವಾಗಿ ಸ್ಪಂದಿಸಿದ್ದು, ಎಲ್ಲರೊಡನೆ ಚರ್ಚಿಸಿ ಒಂದು ನಿರ್ಧಾರಕ್ಕೆ ಬರುವುದಾಗಿ ತಿಳಿಸಿದ್ದಾರೆ ಎಂದು ಮುನಿಯಪ್ಪ ಹೇಳಿದ್ದಾರೆ. ಆದರೆ, ಚಿಕ್ಕಬಳ್ಳಾಪುರ ಭಾಗದಲ್ಲಿ ಕಾಂಗ್ರೆಸ್ಸಿನಿಂದ ಬಂಡಾಯವೆದ್ದು ಬಿಜೆಪಿ ಸೇರಿದ ಡಾ. ಸುಧಾಕರ್ ಅವರು ಚುನಾವಣೆಯಲ್ಲಿ ಸ್ಪರ್ಧಿಸಿ ಗೆದ್ದಿರುವುದು ಮುಳುವಾಗಿದೆ.

ಲಿಂಗಾಯಿತ ಸಮುದಾಯ, ಉತ್ತರ ಕರ್ನಾಟಕದ ಭಾಗದ ಮುಖಂಡ ಮತ್ತು ರಾಜ್ಯ ಮಾಹಿತಿ ತಂತ್ರಜ್ಞಾನ ಸಚಿವ ಎಸ್ ಆರ್ ಪಾಟೀಲ್ ಹೆಸರು ಬಹುತೇಕ ಅಂತಿಮವಾಗುವ ಸಾಧ್ಯತೆಯಿತ್ತು. ಮಾಜಿ ಸಚಿವ ಮತ್ತು ಸಂಸದ ಪ್ರಕಾಶ ಹುಕ್ಕೇರಿ ಬಹಿರಂಗವಾಗಿಯೇ ಹೇಳಿಕೆ ನೀಡಿದ್ದಾರೆ. ತಾವು ಕೆಪಿಸಿಸಿ ಅಧ್ಯಕ್ಷ ಸ್ಥಾನದ ಪ್ರಬಲ ಆಕಾಂಕ್ಷಿಯಾಗಿದ್ದೇನೆಂದು ಹುಕ್ಕೇರಿ ಹೇಳಿದ್ದಾರೆ. ದಲಿತ, ಬ್ರಾಹ್ಮಣ, ಲಿಂಗಾಯತ, ಒಕ್ಕಲಿಗ ಎಂದು ಕ್ರಮವಾಗಿ ಅಧ್ಯಕ್ಷ ಸ್ಥಾನ ನೀಡಲಾಗುತ್ತದೆ ಎಂಬ ನಿರೀಕ್ಷೆಯನ್ನು ಹುಸಿ ಮಾಡಿ ಈ ಬಾರಿ ಕುರುಬರೊಬ್ಬರಿಗೆ ಕೆಪಿಸಿಸಿ ಅಧ್ಯಕ್ಷ ಸ್ಥಾನ ಸಿಗುವ ಸಾಧ್ಯತೆ ನಿಚ್ಚಳವಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ