ಹೈದ್ರಾಬಾದ್ ರೇಪಿಸ್ಟ್‌ಗಳನ್ನು ಎನ್‍ಕೌಂಟರ್ ಮಾಡಿದಂತೆ ಆರೋಪಿಗಳಿಗೆ ಶಿಕ್ಷೆಯಾಗಲಿ: ಉನ್ನಾವೋ ಸಂತ್ರಸ್ತೆಯ ತಂದೆ

ನವದೆಹಲಿ: ಎರಡು ದಿನಗಳಿಂದ ಸಾವು-ಬದುಕಿನ ಮಧ್ಯೆ ಹೋರಾಟ ನಡೆಸುತ್ತಿದ್ದ ಉನ್ನಾವೋ ಸಂತ್ರಸ್ತೆ ಶುಕ್ರವಾರ ರಾತ್ರಿ ಕೊನೆಯುಸಿರೆಳೆದಿದ್ದಾಳೆ. ಈ ನಡುವೆ ಸಂತ್ರಸ್ತೆಯ ತಂದೆ ಹೈದರಾಬಾದ್ ಅತ್ಯಾಚಾರಿಗಳನ್ನು ಎನ್‍ಕೌಂಟರ್ ಮಾಡಿದಂತೆ ಆರೋಪಿಗಳಿಗೆ ಶಿಕ್ಷೆಯಾಗಲಿ ಎಂದು ಆಗ್ರಹಿಸಿದ್ದಾರೆ.

ಮಾಧ್ಯಮಗಳ ಜೊತೆ ಮಾತನಾಡಿದ ಸಂತ್ರಸ್ತೆ ತಂದೆ, ಅತ್ಯಾಚಾರಿಗಳನ್ನು ಹೈದರಾಬಾದ್ ಪೊಲೀಸರು ಹೇಗೆ ಎನ್‍ಕೌಂಟರ್ ಮಾಡಿದ್ದಾರೋ ಹಾಗೆಯೇ ನನ್ನ ಮಗಳ ಮೇಲೆ ಅತ್ಯಾಚಾರ ಮಾಡಿದ ಆರೋಪಿಗಳನ್ನು ಶಿಕ್ಷೆಯಾಗಲಿ. ಆರೋಪಿಗಳಿಗೆ ಎನ್‍ಕೌಂಟರ್ ಮಾಡಿ ಅಥವಾ ಗಲ್ಲಿಗೇರಿಸಿ ಎಂದು ಸರ್ಕಾರಕ್ಕೆ ಮನವಿ ಮಾಡಿಕೊಳ್ಳುತ್ತೇನೆ. ನನಗೆ ಹಣದ ಅಮೀಷವಿಲ್ಲ. ನಾನು ಕೇಳುವುದು ಒಂದೇ ವಿಷಯ. ನನ್ನ ಮಗಳ ಸಾವಿಗೆ ನ್ಯಾಯ ಸಿಗಲಿ ಎಂದು ಹೇಳಿದರು.

ಸಂತ್ರಸ್ತೆಗೆ ಚಿಕಿತ್ಸೆ ನೀಡುವಾಗ ಸೋಂಕು ಎಲ್ಲಿ ಹರಡುತ್ತದೆಯೋ ಎಂದು ಭಯಗೊಂಡಿದ್ದೆವು. ಆದರೆ ಆ ಭಯ ನಿಜವಾಯಿತು. ಸಂತ್ರಸ್ತೆ ದೇಹ ತುಂಬಾ ಸೋಂಕು ಹರಡಿತ್ತು. ಅದನ್ನು ತಡೆಯಲು ನಮಗೆ ಸಾಧ್ಯವಾಗಲಿಲ್ಲ. ಸಂತ್ರಸ್ತೆಯ ದೇಹ ತುಂಬಾ ಸೋಂಕು ಹರಡಿದರೆ ಅದನ್ನು ತಡೆಯುವುದು ತುಂಬಾ ಕಷ್ಟ ಎಂದು ನಾವು ಈ ಮೊದಲೇ ಹೇಳಿದ್ದೆವು ಎಂದು ವೈದ್ಯರು ಪ್ರತಿಕ್ರಿಯಿಸಿದ್ದಾರೆ. ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಪೋಷಕರಿಗೆ ಆಕೆಯ ಮೃತದೇಹವನ್ನು ಹಸ್ತಾಂತರಿಸಲಾಗುತ್ತದೆ.

ಸಂತ್ರಸ್ತ ಯುವತಿ ಮೇಲೆ 2018ರಲ್ಲಿ ಸಾಮೂಹಿಕ ಅತ್ಯಾಚಾರ ನಡೆಸಲಾಗಿತ್ತು. ಮಾರ್ಚ್ 5 ಮತ್ತು 6 ರಂದು ಆರೋಪಿಗಳ ವಿರುದ್ಧ ಯುವತಿ ದೂರು ನೀಡಿದ್ದರು. ತನಿಖೆ ನಡೆಸಿದ ಪೊಲೀಸರು ಪ್ರಮುಖ ಆರೋಪಿ ಶುಭಂ ತ್ರಿವೇದಿ ಎಂಬಾತನನ್ನು ಬಂಧಿಸಿದ್ದರು. ಕಳೆದ ನವೆಂಬರ್ 30ರಂದು ಆರೋಪಿ ಶುಭಂಗೆ ಕೋರ್ಟ್ ಜಾಮೀನು ನೀಡಿತ್ತು. ಡಿಸೆಂಬರ್ 5ರಂದು ಸಾಕ್ಷಿ ಹೇಳಲು ಕೋರ್ಟಿಗೆ ತೆರಳುತ್ತಿದ್ದ ಸಂತ್ರಸ್ತೆ ಮೇಲೆ ಆರೋಪಿಗಳು ಹಲ್ಲೆ ನಡೆಸಿ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿದ್ದರು.

ಘಟನೆಯಲ್ಲಿ ಸಂತ್ರಸ್ತೆಯ ದೇಹ ಶೇ. 90ರಷ್ಟು ಹೋಗಿತ್ತು. ಇನ್ನು ಸಾಯುವ ಮುನ್ನ ಸಂತ್ರಸ್ತೆ `ನನಗೆ ಸಾಯಲು ಇಷ್ಟವಿಲ್ಲ ನನ್ನನ್ನು ಈ ಪರಿಸ್ಥಿತಿಗೆ ತಂದವರು ಸಾಯುವುದನ್ನು ನಾನು ನೋಡಬೇಕು’ ಎಂದು ಹೇಳಿಕೊಂಡಿದ್ದರು. ಹೈದ್ರಾಬಾದ್ ಎನ್‍ಕೌಂಟರ್ನಿಂದ ಕೊಂಚ ಮಟ್ಟಿಗೆ ನಿರಾಳರಾಗಿದ್ದ ಬೆನ್ನಲ್ಲೇ ಈ ಆಘಾತಕಾರಿ ಬೆಳವಣಿಗೆಯಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ