ಉಪ ಚುನಾವಣೆ-ಶಿವಾಜಿನಗರದ ಲೆಕ್ಕಾಚಾರವೇ ವಿಭಿನ್ನ

ಬೆಂಗಳೂರು, ಡಿ.5- ಉಪ ಚುನಾವಣೆ ನಡೆದ 15 ವಿಧಾನಸಭೆ ಕ್ಷೇತ್ರಗಳ ಪೈಕಿ ಶಿವಾಜಿನಗರದ ಲೆಕ್ಕಾಚಾರವೇ ವಿಭಿನ್ನವಾಗಿದೆ.

ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಹೋದ 11ಮಂದಿಯ ಪೈಕಿ 9 ಮಂದಿ ಕಾಂಗ್ರೆಸ್ ಪಕ್ಷವನ್ನು ಸಂಪೂರ್ಣವಾಗಿ ತೊರೆದು ಹೋಗಿದ್ದಾರೆ. ಎಲ್ಲರಿಗೂ ಉಪ ಚುನಾವಣೆಯಲ್ಲಿ ಸ್ಪರ್ಧಿಸುವ ಅವಕಾಶ ಸಿಕ್ಕಿದೆ. ಜನ ಆಯ್ಕೆ ಮಾಡಿದರೆ ಮತ್ತೆ ಶಾಸಕರಾಗುತ್ತಾರೆ. ಇಲ್ಲವಾದರೆ ಮಾಜಿಗಳಾಗಿ ಮುಂದಿನ ರಾಜಕೀಯ ಭವಿಷ್ಯದ ಬಗ್ಗೆ ಯೋಚಿಸುತ್ತಾರೆ. ಆದರೆ, ಶಿವಾಜಿನಗರ ಕ್ಷೇತ್ರದ ಪರಿಸ್ಥಿತಿ ಮಾತ್ರ ವಿಭಿನ್ನವಾಗಿದೆ.

ಏಕಾಏಕಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ ರೋಷನ್‍ಬೇಗ್ ಅವರು ಉಳಿದ 16ಮಂದಿಯಂತೆ ಅನರ್ಹಗೊಂಡರು. ಕಾನೂನು ಹೋರಾಟ ಮಾಡಿ ಚುನಾವಣೆಯಲ್ಲಿ ¸ಸ್ಪರ್ಧಿಸುವ ಅವಕಾಶ ಪಡೆದುಕೊಂಡು ಬಂದರು. ಆದರೆ, ಸ್ಪರ್ಧಿಸಲು ಆಗಲಿಲ್ಲ.

ಹದಿನಾರು ಮಂದಿಯನ್ನು ಪಕ್ಷಕ್ಕೆ ಸೇರಿಸಿಕೊಂಡ ಬಿಜೆಪಿ, ನಮ್ಮ ಸರ್ಕಾರ ರಚನೆಯಾಗಲು ಇವರೇ ಕಾರಣ ಎಂದು ಹೆಗಲ ಮೇಲೆ ಹೊತ್ತು ತಿರುಗುತ್ತಿದೆ. ಆದರೆ, ರೋಷನ್ ಬೇಗ್ ಅವರನ್ನು ಪಕ್ಷಕ್ಕೆ ಸೇರಿಸಿಕೊಳ್ಳದೆ ಕೈ ಬಿಡಲಾಗಿದೆ. ಶಿವಾಜಿನಗರ ಕ್ಷೇತ್ರದಿಂದ ಸ್ಪರ್ಧಿಸಲು ಕೂಡ ಅವರಿಗೆ ಸಾಧ್ಯವಾಗಲಿಲ್ಲ.

ಒಂದು ಹಂತದಲ್ಲಿ ಶಿವಾಜಿನಗರದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸಿದರೆ ಅವರನ್ನು ವಿಧಾನಪರಿಷತ್ ಸದಸ್ಯರನ್ನಾಗಿ ಮಾಡಿ ಸಚಿವರನ್ನಾಗಿಸುವ ಭರವಸೆ ನೀಡಲಾಗಿದೆ. ಪಕ್ಷಕ್ಕೆ ಸೇರಿಸಿಕೊಳ್ಳದವರು ಸಂಪುಟದಲ್ಲಿ ಅವಕಾಶಕೊಡುತ್ತಾರೆ ಎಂದು ರೋಷನ್‍ಬೇಗ್ ನಂಬಿದಂತೆ ಕಾಣುತ್ತಿಲ್ಲ. ಹಾಗೆಂದು ಬಿಜೆಪಿ ಅಭ್ಯರ್ಥಿ ವಿರುದ್ಧವಾಗಿ ಕಾಂಗ್ರೆಸ್ ಅಭ್ಯರ್ಥಿ ಪರವಾಗಿ ಕೆಲಸ ಮಾಡಲು ಬೇಗ್ ಸಿದ್ದರಿರಲಿಲ್ಲ.

ಸಿದ್ದರಾಮಯ್ಯ ಅವರ ಬಣದಲ್ಲಿ ಗುರುತಿಸಿಕೊಂಡಿರುವ ರಿಜ್ವಾನ್ ಅರ್ಷದ್ ಅವರಿಗೆ ಕಾಂಗ್ರೆಸ್ ಟಿಕೆಟ್ ಕೊಟ್ಟ ದಿನದಿಂದಲೇ ರೋಷನ್ ಬೇಗ್ ಇಷ್ಟ ಇದೆಯೋ ಇಲ್ಲವೋ, ಬಿಜೆಪಿ ಅಭ್ಯರ್ಥಿ ಪರವಾಗಿಯೇ ಕೆಲಸ ಮಾಡಬೇಕೆಂದು ನಿರ್ಧರಿಸಿದಂತಿತ್ತು.

ಒಂದು ವೇಳೆ ರಿಜ್ವಾನ್ ಗೆದಿದ್ದೇ ಆದರೆ ಶಿವಾಜಿನಗರದ ಹಿಡಿತ ರೋಷನ್ ಬೇಗ್ ಅವರಿಂದ ಸಂಪೂರ್ಣ ಕೈ ತಪ್ಪಿ ಹೋಗುವುದು ನಿಶ್ಚಿತ. ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸಿದರೆ. ಮುಂದಿನ ದಿನಗಳಲ್ಲಿ ತಾನಾಗಲಿ ಅಥವಾ ತಮ್ಮ ಪುತ್ರನಾಗಲಿ ಶಿವಾಜಿನಗರ ಕ್ಷೇತ್ರದಿಂದ ಸ್ರ್ಪಸಲು ಅವಕಾಶ ಸಿಗುತ್ತದೆ ಎಂದು ರೋಷನ್ ಬೇಗ್ ಆಪ್ತರ ಬಳಿ ಹೇಳಿಕೊಂಡಿದ್ದಾರೆ.

ರಾಜಕೀಯ ಲೆಕ್ಕಾಚಾರ ಹಾಗೂ ರಾಜಕೀಯ ಪ್ರತಿಕಾರಕ್ಕಾಗಿ ಕಾಂಗ್ರೆಸ್ ವಿರುದ್ಧವಾಗಿ ಕೆಲಸ ಮಾಡುತ್ತಿದ್ದಾರೆ. ತಾವಷ್ಟೇ ಅಲ್ಲದೆ, ಕಾಂಗ್ರೆಸ್‍ನಲ್ಲಿದ್ದಾಗ ತಮ್ಮೊಂದಿಗೆ ಇದ್ದ ಅಷ್ಟೂ ಮಂದಿ ನಾಯಕರ ಜತೆ ಮಾತುಕತೆ ನಡೆಸಿ ತಮ್ಮ ಮನದ ಇಂಗಿತವನ್ನು ಹೇಳಿಕೊಂಡಿದ್ದಾರೆ.

ಬಹಳಷ್ಟು ಮಂದಿ ನಾಯಕರು ರೋಷನ್ ಬೇಗ್ ಅವರಿಗೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಕೆಲವರು ನೇರವಾಗಿ, ಇನ್ನು ಕೆಲವರು ಪರೋಕ್ಷವಾಗಿ ಕೆಲಸ ಮಾಡಿದ್ದಾರೆ.
ಪಕ್ಷ ವಿರೋ ಚಟುವಟಿಕೆ ಹಿನ್ನೆಲೆಯಲ್ಲಿ ಕೆಲವರನ್ನು ಕಾಂಗ್ರೆಸ್ ಉಚ್ಚಾಟನೆ ಮಾಡಿದೆ. ಉಚ್ಚಾಟನೆಯಾಗದೇ ಇರುವವರು ನಿಧಾನವಾಗಿ ಮತ್ತೆ ಕಾಂಗ್ರೆಸ್ ಅಂಗಳಕ್ಕೆ ಜಾರುವ ಪ್ರಯತ್ನ ಮಾಡುತ್ತಿದ್ದಾರೆ.

ಉಪ ಚುನಾವಣೆ ಬಳಿಕ ಡಿ.ಕೆ.ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷರಾಗುತ್ತಾರೆ. ನಾನು ಮತ್ತೆ ಕಾಂಗ್ರೆಸ್ ಸೇರುತ್ತೇನೆ. ಎಲ್ಲರೂ ಒಟ್ಟಿಗಿರೋಣ ಎಂದು ರೋಷನ್ ಬೇಗ್ ಹೇಳಿರುವ ಮಾತುಗಳ ಮೇಲೆ ಕಾಂಗ್ರೆಸ್‍ನ ಕೆಳ ಹಂತದ ಬಹಳಷ್ಟು ನಾಯಕರು ನಂಬಿಕೆ ಇಟ್ಟುಕೊಂಡಿದ್ದಾರೆ.

ಆದರೆ, ಅತ್ತ ಬಿಜೆಪಿ ಸರ್ಕಾರದ ಸಚಿವ ಸಂಪುಟ ಸ್ಥಾನಕ್ಕೂ ಟವಲ್ ಹಾಕಿರುವ ರೋಷನ್ ಬೇಗ್ ಇತ್ತ ಕಾಂಗ್ರೆಸ್ ನಾಯಕರ ಮೂಗಿಗೂ ತುಪ್ಪ ಸವರುವ ಕೆಲಸ ಮಾಡುತ್ತಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ