‘ಮಹಾ’ ಸಿಎಂ ಆಗಿ ಉದ್ಧವ್ ಪ್ರಮಾಣವಚನ; ಶಿವಾಜಿ ಪಾರ್ಕ್ ನಲ್ಲಿ 2 ಸಾವಿರಕ್ಕೂ ಅಧಿಕ ಪೊಲೀಸರ ನಿಯೋಜನೆ

ಮುಂಬೈ: ಮಹಾರಾಷ್ಟ್ರದ ನೂತನ ಮುಖ್ಯಮಂತ್ರಿಯಾಗಿ ಉದ್ಧವ್ ಠಾಕ್ರೆ ಪ್ರಮಾಣ ವಚನ ಸ್ವೀಕರಿಸಲಿದ್ದು, ಕಾರ್ಯಕ್ರಮಕ್ಕೆ ಬಿಗಿ ಪೊಲೀಸ್ ಬಂದೋಬಸ್ತ್ ಒದಗಿಸಲಾಗಿದೆ.

ಗುರುವಾರ ಸಂಜೆ ಮಹಾರಾಷ್ಟ್ರದ ನೂತನ ಮುಖ್ಯಮಂತ್ರಿಯಾಗಿ ಶಿವಸೇನೆ ಮುಖ್ಯಸ್ಥ, ‘ಮಹಾ ವಿಕಾಸ್‌ ಅಘಾಡಿ’ (ಶಿವಸೇನೆ-ಎನ್‌ಸಿಪಿ-ಕಾಂಗ್ರೆಸ್‌) ನಾಯಕ ಉದ್ಧವ್‌ ಠಾಕ್ರೆ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಕೇಂದ್ರ ಮುಂಬಯಿನಲ್ಲಿರುವ ಶಿವಾಜಿ ಪಾರ್ಕ್‌ನಲ್ಲಿ ಈ ಕಾರ್ಯಕ್ರಮ ನಡೆಯಲಿದ್ದು, ಭರದ ಸಿದ್ಧತೆಗಳು ನಡೆಯುತ್ತಿವೆ. ಉದ್ದವ್ ಠಾಕ್ರೆ ಇಂದು ಸಂಜೆ 6.40ಕ್ಕೆ ಪ್ರತಿಷ್ಠಿತ ಶಿವಾಜಿ ಪಾರ್ಕ್‌ನಲ್ಲಿ ಪ್ರಮಾಣ ವಚನ ಸ್ವೀಕರಿಸಲಿದ್ದು, ಅವರು ಪ್ರಮಾಣ ವಚನ ಸ್ವೀಕರಿಸಲಿರುವ ಮುಂಬೈನ ಶಿವಾಜಿ ಪಾರ್ಕ್‌ ಸುತ್ತಮುತ್ತಲೂ ಸುಮಾರು 2 ಸಾವಿರಕ್ಕೂ ಅಧಿಕ ಪೊಲೀಸರನ್ನು ಭದ್ರತೆಗಾಗಿ ನಿಯೋಜಿಸಲಾಗಿದೆ.

ಇನ್ನು ಮುಂಜಾಗ್ರತ ಕ್ರಮವಾಗಿ ಪಾರ್ಕ್ ಸುತ್ತಮುತ್ತ ನೂರಾರು ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದ್ದು, ಶ್ವಾನದಳ, ತುರ್ತು ಪ್ರಹಾರ ದಳಗಳನ್ನು ಭದ್ರತೆಗೆ ನಿಯೋಜಿಸಲಾಗಿದೆ. ಪಾರ್ಕ್ ಸುತ್ತಮುತ್ತ, ‘ಠಾಕ್ರೆ ಸರ್ಕಾರ್’ ಪೋಸ್ಟರ್‌ಗಳು ರಾರಾಜಿಸುತ್ತಿವೆ.

ಶಿವಾಜಿ ಪಾರ್ಕ್‌ನಲ್ಲಿ ವೇದಿಕೆ ಸಿದ್ದಪಡಿಸುವ, ಗುಂಡಿಗಳಿಗೆ ಮಣ್ಣು ಹಾಕಿ ಸಮತಟ್ಟುಗೊಳಿಸುವ ಕೆಲಸ ನಡೆಯುತ್ತಿದ್ದರೆ, ಪಾರ್ಕ್‌ ಸುತ್ತಮುತ್ತ ಬಿಗಿ ಪೊಲೀಸ್‌ ಭದ್ರತೆ ಕೈಗೊಳ್ಳಲಾಗಿದೆ.

ಭದ್ರತೆ ಕುರಿತು ಬಾಂಬೇ ಹೈ ಕಳವಳ
ಇದೇ ವೇಳೆ ಗುರುವಾರದ ಕಾರ್ಯಕ್ರಮದ ಭದ್ರತೆಯ ಬಗ್ಗೆ ಕಳವಳ ವ್ಯಕ್ತಪಡಿಸಿರುವ ಬಾಂಬೆ ಹೈಕೋರ್ಟ್‌, ಸೂಕ್ತ ಭದ್ರತೆ ಒದಗಿಸುವಂತೆ ಸಂಬಂಧಪಟ್ಟ ಇಲಾಖೆಗಳಿಗೆ ಸೂಚಿಸಿದೆ. ಕಾರ್ಯಕ್ರಮಕ್ಕೆ ಉಚ್ಛ ನ್ಯಾಯಾಲಯ ತಡೆ ನೀಡಿಲ್ಲವಾದರೂ ಇಂಥಹ ಕಾರ್ಯಕ್ರಮಗಳು ಉದ್ಯಾನದಲ್ಲಿ ಸಾಮಾನ್ಯವಾಗಿ ನಡೆಯಬಾರದು ಎಂದು ಅಭಿಪ್ರಾಯ ವ್ಯಕ್ತಪಡಿಸಿದೆ.

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ