ಇಮ್ರಾನ್‌ ಮತ್ತು ಪಾಕ್ ಸೇನಾ ಮುಖ್ಯಸ್ಥರ ನಡುವಿನ ಮನಸ್ತಾಪ ಬಹಿರಂಗ, ಶೀಘ್ರ ಸೇನಾ ದಂಗೆ?

ಇಸ್ಲಾಮಾಬಾದ್‌: ಪಾಕಿಸ್ತಾನ ಸೇನೆಯ ಬೆಂಬಲದಿಂದಲೇ ಪ್ರಧಾನಿ ಪಟ್ಟಕ್ಕೇರಿದ ಪಾಕಿಸ್ತಾನ್‌ ತೆಹ್ರೀಕ್‌-ಎ-ಇನ್ಸಾಫ್‌ ಪಕ್ಷದ ಮುಖ್ಯಸ್ಥ ಇಮ್ರಾನ್ ಖಾನ್ ಹಾಗೂ ಸೇನಾ ಮುಖ್ಯಸ್ಥರ ನಡುವಿನ ಮನಸ್ತಾಪ ಬಹಿರಂಗಗೊಂಡಿದೆ.

ದೇಶದಲ್ಲಿ ಮತ್ತೊಂದು ಸೇನಾ ದಂಗೆಯ ಸಾಧ್ಯತೆ ಇದೆ ಎಂಬ ಅನುಮಾನ ಮೂಡಿದೆ. ಪಾಕ್‌ ಸೇನಾ ಮುಖ್ಯಸ್ಥ ಜನರಲ್‌ ಖಮರ್ ಜಾವೇದ್ ಬಜ್ವಾ ಅವರೊಂದಿಗೆ ಪ್ರಧಾನಿ ನಡೆಸಿದ ಸಭೆಯಲ್ಲಿ ಗುಪ್ತಚರ ಸಂಸ್ಥೆ ಐಎಸ್‌ಐ ಅಧಿಕಾರಿಗಳು ಇಮ್ರಾನ್‌ ಖಾನ್‌ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.

ಆಂತರಿಕ ಹಾಗೂ ವಿದೇಶಾಂಗ ವ್ಯವಹಾರಗಳ ನೀತಿಯಲ್ಲಿಇಮ್ರಾನ್‌ ಸರಕಾರ ಇರಿಸುತ್ತಿರುವ ನಡೆಗಳು ಸರಿಯಿಲ್ಲ. ಇದರಿಂದ ಸೇನೆಯ ಉದ್ದೇಶಗಳು ಈಡೇರುತ್ತಿಲ್ಲ ಎಂಬುದನ್ನು ಬಾಜ್ವಾ ಸಹ ಪ್ರಧಾನಿಗೆ ಮನವರಿಕೆ ಮಾಡಿಕೊಟ್ಟಿದ್ದಾರೆ. ಸಭೆ ಬಳಿಕ ಇಮ್ರಾನ್‌ ಖಾನ್‌ ಅವರ ಎಲ್ಲಅಧಿಕೃತ ಸಭೆಗಳನ್ನು ರದ್ದುಗೊಳಿಸಿ ತಮ್ಮ ಖಾಸಗಿ ಬಂಗಲೆಗೆ ತೆರಳಿದ್ದಾರೆ ಎನ್ನಲಾಗಿದೆ.

ಈ ವಿದ್ಯಮಾನವನ್ನು ವರದಿ ಮಾಡಿರುವ ಪಾಕಿಸ್ತಾನ ಮಾಧ್ಯಮಗಳು, ಸೇನಾ ಮೂಲಕ ಪ್ರಧಾನಿ ಪದಚ್ಯುತರಾದರೂ ಅಚ್ಚರಿ ಇಲ್ಲಎಂದು ಭವಿಷ್ಯ ನುಡಿದಿವೆ! ಪಾಕ್‌ ಮಾಧ್ಯಮಗಳು ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಸೇನಾ ದಂಗೆಯ ವಿಚಾರ ವೈರಲ್‌ ಆಗುತ್ತಿದ್ದಂತೆ ಪ್ರತಿಕ್ರಿಯಿಸಿರುವ ಸೇನಾ ವಕ್ತಾರ ಆಸಿಫ್‌ ಗಫೂರ್‌, ”ಇವೆಲ್ಲಆಧಾರರಹಿತ ಸುದ್ದಿಗಳು. ಸೇನೆ ಹಾಗೂ ಸರಕಾರದ ನಡುವೆ ಭಿನ್ನಾಭಿಪ್ರಾಯಗಳಿಲ್ಲ. ಪ್ರಜಾ­ಪ್ರಭುತ್ವ ಮೂಲಕ ಆಯ್ಕೆಯಾಗಿರುವ ಸರಕಾರಕ್ಕೆ ಎಲ್ಲರೀತಿಯ ಸಹಕಾರವನ್ನು ಸೇನೆ ನೀಡುತ್ತಿದೆ. ಬಾಜ್ವಾ, ಇಮ್ರಾನ್‌ ನಡುವಿನ ಸಭೆಗೆ ವಿಶೇಷ ಅರ್ಥ ಕಲ್ಪಿಸುವುದು ಬೇಡ, ” ಎಂದಿದ್ದಾರೆ.

ಟ್ವಿಟರ್‌ನಲ್ಲಿ ಹರಡಿರುವ ಮಾಹಿತಿಯಂತೆ ಪಾಕ್‌ ಸೇನೆ 111 ಇನ್‌ಫ್ಯಾಂಟ್ರಿ ಬ್ರಿಗೇಡ್‌ನ ಸೈನಿಕರ ರಜೆಯನ್ನು ರದ್ದುಗೊಳಿಸಲಾಗಿದೆ. ಜತೆಗೆ ಸನ್ನದ್ಧ ಸ್ಥಿತಿಯಲ್ಲಿರುವಂತೆ ಸೂಚಿಸಲಾಗಿದೆ. ಇದರಿಂದಾಗಿ ಸೇನಾ ದಂಗೆಯ ಸುಳಿವು ದಟ್ಟವಾಗಿದೆ. ಯಾಕೆಂದರೆ, ಪಾಕಿಸ್ತಾನದಲ್ಲಿ ಮುಂಚಿನಿಂದಲೂ ಸರಕಾರಗಳನ್ನು ಉರುಳಿಸುವ ವಿಚಾರದಲ್ಲಿ111 ಇನ್‌ಫ್ಯಾಂಟ್ರಿ ಬ್ರಿಗೇಡ್‌ ಪ್ರಮುಖ ಪಾತ್ರವಹಿಸಿದೆ. ಮೂರು ಬಾರಿ ಅಂದರೆ ಇಸ್ಕಂದರ್‌ ಮಿರ್ಜಾ (1958), ಜುಲ್ಫಿಕರ್‌ ಅಲಿ ಭುಟ್ಟೊ (1977) ಹಾಗೂ ನವಾಜ್‌ ಷರೀಫ್‌ (1999) ಅವರನ್ನು ಸೇನಾ ದಂಗೆ ಮೂಲಕ ಪದಚ್ಯುತಗೊಳಿಸಿ ಆಡಳಿತವನ್ನು ತಮ್ಮ ಹಿಡಿತಕ್ಕೆ ಪಡೆದಿದ್ದು ಇದೇ ಬ್ರಿಗೇಡ್‌ ಎನ್ನುವುದು ಗಮನಾರ್ಹ. ಪಾಕ್‌ ಅಧ್ಯಕ್ಷ, ಪ್ರಧಾನಿ ಹಾಗೂ ವಿಶೇಷ ಅತಿಥಿಗಳಿಗೆ ಭದ್ರತೆ ನೀಡುವ ಹೊಣೆ ಈ ಬ್ರಿಗೇಡ್‌ನದ್ದಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ