ಮಹಾ ಸರ್ಕಸ್​: ಪ್ರಧಾನಿ ಮೋದಿ ಭೇಟಿ ಮಾಡಲಿರುವ ಪವಾರ್​; ಕುತೂಹಲ ಮೂಡಿದ ಎನ್​ಸಿಪಿ ನಡೆ

ನವದೆಹಲಿ: ಮಹಾರಾಷ್ಟ್ರ ಸರ್ಕಾರ ರಚನೆ ಇನ್ನು ಕಗ್ಗಂಟ್ಟಾಗಿದ್ದು, ಸರ್ಕಾರ ರಚನೆಗೆ ಯಾವುದೇ ಪಕ್ಷ ಇನ್ನು ಒಮ್ಮತದ ನಿರ್ಣಯಕ್ಕೆ ಬಾರದ ಹಿನ್ನೆಲೆ ಈ ಕುರಿತು ಇಂದು ಪ್ರಧಾನಿ ನರೇಂದ್ರ ಮೋದಿ ಜೊತೆ ನ್ಯಾಷನಲಿಸ್ಟ್​ ಕಾಂಗ್ರೆಸ್​ ಪಕ್ಷದ ನಾಯಕ ಶರದ್​ ಪವಾರ್​ ಮಾತುಕತೆ ನಡೆಸಲಿದ್ದಾರೆ.
ಸಂಸತ್​ ಅಧಿವೇಶನದ ಬಳಿಕ ಇಬ್ಬರು ನಾಯಕರು ಭೇಟಿ ಮಾಡಲಿದ್ದಾರೆ. ಇದೇ ವೇಳೆ ಅವರು ಮಹಾರಾಷ್ಟ್ರ ರೈತರ ಸಮಸ್ಯೆ ಕೂಡ ಚರ್ಚಿಸಲಿದ್ದಾರೆ.
ಮಹಾರಾಷ್ಟ್ರದಲ್ಲಿ ಯಾವುದೇ ಪಕ್ಷಕ್ಕೆ ಬಹುಮತ ಬಾರದ ಹಿನ್ನೆಲೆ ಮೈತ್ರಿ ಪಕ್ಷಕ್ಕೆ ಬೆಂಬಲ ನೀಡುವಲ್ಲಿ ಎನ್​ಸಿಪಿ ಹೆಚ್ಚು ಪ್ರಾಮುಖ್ಯತೆಯನ್ನು ಹೊಂದಿರುವ ಹಿನ್ನೆಲೆ ಶರದ್​ ಪವಾರ್​ ಅವರ ಈ ಭೇಟಿ ಅತ್ಯಂತ ಮಹತ್ವದ್ದಾಗಿದೆ.

ಇದಾದ ಬಳಿಕ ಸಂಜೆ ಎನ್​ಸಿಪಿ ಮತ್ತು ಕಾಂಗ್ರೆಸ್​ ನಾಯಕರು ಭೇಟಿಯಾಗಿ ಮಾತನಾಡಲಿದ್ದು, ಶಿವಸೇನೆಗೆ ಬೆಂಬಲಿಸುವ ಕುರಿತು ಚರ್ಚೆ ನಡೆಸಲಿದ್ದಾರೆ. ಇಷ್ಟು ವರ್ಷಗಳ ಕಾಲ ಬಿಜೆಪಿಗೆ ಬೆಂಬಲಿಸಿದ್ದ ಶಿವಸೇನೆ ಈಗ ಮೈತ್ರಿ ಮುರಿದಿದ್ದು, ಶಿವಸೇನೆಯೊಡನೆ ತಮ್ಮ ಮೈತ್ರಿಯ ಭವಿಷ್ಯದ ಬಗ್ಗೆ ಕೂಡ ಚರ್ಚಿಸಲಿದ್ದಾರೆ.

ತಮ್ಮ ರಾಜಕೀಯ ಎದುರಾಳಿಯಾಗಿರುವ ಎನ್​ಸಿಪಿ ಹಾಗೂ ಕಾಂಗ್ರೆಸ್​ ಜೊತೆ ಸರ್ಕಾರ ರಚಿಸುವ ಭರವಸೆಯಲ್ಲಿ ಸೇನೆ ಇದೆ. ಆದರೆ ಈ ಎರಡು ಪಕ್ಷಗಳು ಕಾದು ನೋಡುವ ತಂತ್ರವನ್ನು ಅನುಸರಿಸುತ್ತಿದೆ.
ಇನ್ನು ರಾಜ್ಯಸಭೆಯ 250ನೇ ಅಧಿವೇಶನವನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಸದನದಲ್ಲಿ ಎನ್​ಸಿಪಿಯನ್ನು ಹಾಡಿ ಹೊಗಳಿದ್ದರು. ಎರಡು ಪಕ್ಷಗಳು ಸಂಸತ್ತಿನ ಸಂಪ್ರದಾಯಕ್ಕೆ ಬದ್ಧವಾಗಿ ನಡೆದುಕೊಂಡಿದೆ, ನನ್ನನ್ನೂ ಸೇರಿದಂತೆ ಇತರೆ ಪಕ್ಷಗಳು ಅವುಗಳಿಂದ ಕಲಿಯಬೇಕಿದೆ ಎಂದು ಶ್ಲಾಘಿಸಿದ್ದರು.

ಮೂಲಗಳ ಪ್ರಕಾರ ಚುನಾವಣೆಯಲ್ಲಿ ಮೂರನೇ ದೊಡ್ಡ ಪಕ್ಷವಾಗಿ ಹೊರಹೊಮ್ಮಿರುವ ಎನ್​ಸಿಪಿ, ಬಿಜೆಪಿ ಜೊತೆ ಕೈ ಜೋಡಿಸಿದರೆ ಸರ್ಕಾರ ರಚನೆಯಾಗುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ. ಈ ಹಿನ್ನೆಲೆ ಇವರ ಭೇಟಿ ಸಾಕಷ್ಟು ಕುತೂಹಲ ಕೆರಳಿಸಿದೆ.
ಇನ್ನು ಪವಾರ್​ ಪ್ರಧಾನಿಯನ್ನು ಭೇಟಿಯಾಗುತ್ತಿರುವ ವಿಷಯ ಕುರಿತು ಪ್ರತಿಕ್ರಿಯಿಸಿರುವ ಸೇನೆ ನಾಯಕ ಸಂಜಯ್​ ರಾವತ್​, ಪವರ್​ ರಾಜ್ಯದ ದೊಡ್ಡ ನಾಯಕರಾಗಿದ್ದು, ರೈತರ ಸಮಸ್ಯೆಗಳನ್ನು ಚರ್ಚಿಸಿ ಎಂದು ಅವರಿಗೆ ನಾವು ಮನವಿ ಮಾಡಿದ್ದೇವೆ. ಶರದ್​ ನಮ್ಮ ಜೊತೆ ಸಂಪರ್ಕದಲ್ಲಿದ್ದಾರೆ ಎಂದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ