ಮಹಾರಾಷ್ಟ್ರದಲ್ಲಿ ಶಿವಸೇನೆ ನೇತೃತ್ವದ ಬಲ, ಸ್ಥಿರ ಸರ್ಕಾರ ರಚನೆಯಾಗಲಿದೆ: ಸಂಜಯ್ ರಾವತ್ 

Varta Mitra News

ನವದೆಹಲಿ: ಮಹಾರಾಷ್ಟ್ರ ರಾಜ್ಯದಲ್ಲಿ ಶೀಘ್ರದಲ್ಲಿಯೇ ಶಿವಸೇನೆ ನೇತೃತ್ವದಲ್ಲಿ ಬಲವಾದ ಹಾಗೂ ಸ್ಥಿರ ಸರ್ಕಾರ ರಚನೆಯಾಗಲಿದೆ ಎಂದು ಶಿವಸೇನೆ ಹಿರಿಯ ನಾಯಕ ಸಂಜಯ್ ರಾವತ್ ಅವರು ಮಂಗಳವಾರ ಹೇಳಿದ್ದಾರೆ.

ಎನ್’ಸಿಪಿ ಮುಖ್ಯಸ್ಥ ಶರದ್ ಪವಾರ್ ಅವರನ್ನು ಭೇಟಿಯಾದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿರುವ ಅವರು, ಮಹಾರಾಷ್ಟ್ರ ರಾಜ್ಯದಲ್ಲಿ ಶಿವಸೇನೆ ಶೀಘ್ರದಲ್ಲಿಯೇ ಸರ್ಕಾರ ರಚನೆ ಮಾಡಲಿದೆ. ರಚನೆಗೊಳ್ಳುವ ಸರ್ಕಾರ ಬಲ, ಸ್ಥಿರ ಹಾಗೂ ಪರಿಣಾಮಕಾರಿ ಸರ್ಕಾರವಾಗಲಿದೆ. ಉದ್ಧವ್ ಠಾಕ್ರೆಯವರೇ ಸರ್ಕಾರವನ್ನು ಮುನ್ನಡೆಸಬೇಕೆಂದು ನಾವು ಇಚ್ಛಿಸಿದ್ದೇವೆಂದು ಹೇಳಿದ್ದಾರೆ.

ಶಿವಸೇನೆ ನೇತೃತ್ವದ ಸರ್ಕಾರಕ್ಕೆ ವಿಧಾನಸಭೆಯಲ್ಲಿ 170 ಶಾಸಕರ ಬೆಂಬಲವಿರಲಿದೆ. ದೇಶದಲ್ಲಿಯೇ ಶಿವಸೇನೆ ಅತ್ಯಂತ ದೊಡ್ಡ ಪಕ್ಷವಾಗಿದೆ. ನಮ್ಮ ಪಕ್ಷ 18 ಸಂಸದರನ್ನು ಹೊಂದಿದ್ದು, ಮಹಾರಾಷ್ಟ್ರದಲ್ಲಿ ಸರ್ಕಾರ ರಚನೆ ಮಾಡುತ್ತೇವೆ. ನಮ್ಮೊಂದಿಗೆ ಯಾರೂ ಮಧ್ಯಪ್ರವೇಶ ಮಾಡುವ ಅಗತ್ಯವೇ ಇಲ್ಲ. ನಮಗೆ 170 ಶಾಸಕರ ಬೆಂಬಲವಿದೆ ಎಂದು ತಿಳಿಸಿದ್ದಾರೆ.

ಇದೇ ವೇಳೆ ಕೇಂದ್ರ ಸಚಿವ ಹಾಗೂ ಆರ್’ಪಿಐ ನಾಯಕ ರಾಮ್ ದಾಸ್ ಅಠಾವಳೆ ಯವರ ವಿರುದ್ಧ ಕಿಡಿಕಾರಿದ ಅವರು, ರಾಮ್ ದಾಸ್ ಕೇಂದ್ರ ಸಚಿವರಾಗಿದ್ದು, ಅವರು ತಮ್ಮ ಕಾರ್ಯಗಳತ್ತ ಮಾತ್ರ ಗಮನ ಹರಿಸಬೇಕು. ಶಿವಸೇನೆ ಬಗ್ಗೆಯಲ್ಲ ಎಂದಿದ್ದಾರೆ.

ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಹಾಗೂ ಎನ್’ಸಿಪಿ ಅಧ್ಯಕ್ಷ ಶರದ್ ಪವಾರ್ ಅವರ ನಡುವಿನ ಭೇಟಿಯ ಬಳಿಕ ಶಿವಸೇನೆ-ಕಾಂಗ್ರೆಸ್-ಎನ್’ಸಿಪಿ ನಡುವಿನ ಮೈತ್ರಿ ಘೋಷಣೆಯಾಗಬಹುದು. ಮಹಾರಾಷ್ಟ್ರದಲ್ಲಿ ಸರ್ಕಾರ ರಚನೆಯ ಸ್ಪಷ್ಟ ಚಿತ್ರಣ ಸಿಗಬಹುದೆಂದು ನಿರೀಕ್ಷೆಗಳು ಹುಟ್ಟಿದ್ದವು. ಆದರೆ, ಉಭಯ ನಾಯಕರು ಭೇಟಿಯಾದರೂ ಸರ್ಕಾರ ರಚನೆ ಬಗ್ಗೆ ಯಾವುದೇ ಘೋಷಣೆಗಳನ್ನು ಮಾಡಲಿಲ್ಲ. ಇದರಿಂದ ನಿರೀಕ್ಷೆಗಳು ಹುಸಿಯಾಗಿದ್ದವು.

ಈ ನಡುವೆ ಪ್ರಧಾನಿ ಮೋದಿಯವರು ಎನ್’ಸಿಪಿ ಪಕ್ಷವನ್ನು ಹೊಗಳಿದ್ದ ಕಾರಣ ಎನ್’ಸಿಪಿ-ಬಿಜೆಪಿ ಮೈತ್ರಿಯಾಗುತ್ತಾ ಎಂಬ ಅನುಮಾನಗಳೂ ಮೂಡತೊಡಗಿವೆ. ರಾಜ್ಯಸಭೆಯ 250ನೇ ಕಲಾಪದಲ್ಲಿ ಮಾತನಾಡಿದ್ದ ಮೋದಿಯವರು, ಎನ್’ಸಿಪಿ ಹಾಗೂ ಬಿಜು ಜನತಾದಳ ಸಂಸದರು ಯಾವತ್ತೂ ಸದನದ ಬಾವಿಗೆ ಇಳಿದಿಲ್ಲ. ತಮ್ಮ ವಿಚಾರ ಪರಿಣಾಮಕಾರಿಯಾಗಿ ಪ್ರಸ್ತಾಪಿಸುವಲ್ಲಿ ಯಶಸ್ವಿಯಾಗಿದ್ದಾರೆಂದು ಹೇಳಿದ್ದರು.

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ