ಇಸ್ರೋನಿಂದ ಮುಂದಿನ ವರ್ಷ ನವೆಂಬರ್‍ನಲ್ಲಿ ಚಂದ್ರಯಾನ-3ಗೆ ಮಹತ್ವದ ಸಿದ್ದತೆ

ಬೆಂಗಳೂರು,ನ.14-ಮಹತ್ವಾಕಾಂಕ್ಷಿ ಚಂದ್ರಯಾನ -2 ಅಭಿಯಾನ ಕಟ್ಟಕಡೆಯ ಕ್ಷಣದಲ್ಲಿ ವಿಫಲಗೊಂಡಿದ್ದರೂ ದೃತಿಗೆಡದ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ಇಸ್ರೋ) ಮುಂದಿನ ವರ್ಷ ನವೆಂಬರ್‍ನಲ್ಲಿ ಚಂದ್ರಯಾನ-3ಗೆ ಮಹತ್ವದ ಸಿದ್ದತೆ ನಡೆಸುತ್ತಿದೆ.

ಈ ಸಂಬಂಧ ಬೆಂಗಳೂರಿನ ಇಸ್ರೋ ಕೇಂದ್ರದಲ್ಲಿ ನಡೆದ ಉನ್ನತ ಮಟ್ಟದ ಸಮಿತಿ ಸಭೆಯೊಂದರಲ್ಲಿ ಚಂದ್ರಯಾನ್-3 ಯೋಜನೆ ಯಶಸ್ವಿಗೆ ವರದಿಯೊಂದನ್ನು ಸಿದ್ದಪಡಿಸಲು ನಿರ್ಧರಿಸಲಾಯಿತು.

ಕೇರಳದ ತಿರುವನಂತಪುರದ ವಿಕ್ರಮ್ ಸಾರಾಬಾಯಿ ಬಾಹ್ಯಾಕಾಶ ಕೇಂದ್ರದ ಮುಖ್ಯಸ್ಥ ಆರ್.ಸೋಮನಾಥ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ವರದಿಯೊಂದನ್ನು ಸಿದ್ದಪಡಿಸಲು ತೀರ್ಮಾನಿಸಲಾಗಿದೆ ಎಂದು ಇಸ್ರೋದ ಉನ್ನತಾಧಿಕಾರಿಯೊಬ್ಬರು ತಿಳಿಸಿದ್ದಾರೆ.

ಈ ವರ್ಷಾಂತ್ಯದೊಳಗೆ ಈ ವರದಿ ಸಿದ್ದವಾಗಲಿದ್ದು, ಇಸ್ರೋ ಕೈ ಸೇರಲಿದೆ. ವರದಿಯನ್ನು ಆಧರಿಸಿ ಚಂದ್ರಯಾನ್-3 ಯೋಜನೆಯನ್ನು ಯಶಸ್ವಿಗೊಳಿಸುವ ಸಿದ್ದತೆಗಳನ್ನು ನಡೆಸುವುದಾಗಿ ಅವರು ಹೇಳಿದ್ದಾರೆ.

ಮುಂದಿನ ವರ್ಷ ನವೆಂಬರ್‍ನಲ್ಲಿ ಕಾರ್ಯರೂಪಕ್ಕೆ ಬರುವ ಈ ಮಹತ್ವದ ಯೋಜನೆಯಲ್ಲಿ ರೋವರ್, ಲ್ಯಾಂಡರ್ ಮತ್ತು ಹಗುರ ಲ್ಯಾಂಡಿಂಗ್ ವ್ಯವಸ್ಥೆಗೆ ಪ್ರಾಧಾನ್ಯತೆ ನೀಡಲಾಗುತ್ತಿದೆ.

ಚಂದ್ರಯಾನ್-2 ವೈಫಲ್ಯಗಳಿಗೆ ಕಾರಣವಾದ ಎಲ್ಲ ಅಂಶಗಳನ್ನು ಪರಿಶೀಲಿಸಿ ಅವು ಮತ್ತೆ ಮರುಕಳಿಸದಂತೆ ಕ್ರಮ ಕೈಗೊಂಡು ಚಂದ್ರಯಾನ್-3 ಯೋಜನೆಯನ್ನು ಸಾಕಾರಗೊಳಿಸಲು ಸಭೆಯಲ್ಲಿ ನಿರ್ಧರಿಸಲಾಗಿದೆ ಎಂದು ಹಿರಿಯ ವಿಜ್ಞಾನಿಯೊಬ್ಬರು ತಿಳಿಸಿದ್ದಾರೆ.

ಸೆಪ್ಟೆಂಬರ್ 7ರಂದು ಚಂದ್ರಯಾನ್-2 ಯೋಜನೆ ಕೊನೆ ಕ್ಷಣದಲ್ಲಿ ವಿಫಲವಾಗಿತ್ತು. ಚಂದಿರನ ಮೇಲ್ಮೈಮೇಲೆ ವಿಕ್ರಮ್ ಲ್ಯಾಂಡರ್ ಹಗುರವಾಗಿ ಇಳಿಯಬೇಕಿತ್ತು. ಆದರೆ ತೀರ ಸನಿಹದಲ್ಲಿ ಲ್ಯಾಂಡರ್ ರಭಸದಿಂದ ಮೇಲ್ಮೈಗೆ ಅಪ್ಪಳಿಸಿ ವಿಫಲಗೊಂಡು ಇಸ್ರೋ ಜೊತೆ ಸಂಪರ್ಕ ಪಡೆದುಕೊಂಡಿತು.

ಚಂದ್ರಯಾನ್-2 ಶೇ.90ರಷ್ಟು ಯಶಸ್ವಿಯಾದರೂ ಪರಿಪೂರ್ಣ ಸಫಲತೆ ಸಾಧಿಸದ ಬಗ್ಗೆ ಇಸ್ರೋಗೆ ಆಗುವ ನಿರಾಶೆ ಮರುಕಳಿಸದಂತೆ ಯಶಸ್ವಿಗೊಳಿಸಲು ಶ್ರಮಿಸಲಾಗುತ್ತಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ