ಶಬರಿಮಲೆ ಪ್ರಕರಣ ವಿಸ್ತೃತ ಪೀಠಕ್ಕೆ ವರ್ಗಾಯಿಸಿದ ಸಾಂವಿಧಾನಿಕ ಪೀಠ

ನವದೆಹಲಿ: ಶಬರಿಮಲೆಗೆ ಮಹಿಳೆಯರ ಪ್ರವೇಶ ಪ್ರಕರಣದ ವಿಚಾರಣೆ 7 ಮಂದಿ ನ್ಯಾಯಾಧೀಶರ ವಿಸ್ತೃತ ಪೀಠಕ್ಕೆ ವರ್ಗಾವಣೆಯಾಗಿದೆ.

ಮುಖ್ಯ ನ್ಯಾ. ರಂಜನ್ ಗೊಗೋಯ್ ನೇತೃತ್ವದ ಸಾಂವಿಧಾನಿಕ ಪೀಠದ ಮೂವರು ನ್ಯಾಯಾಧೀಶರು ಈ ವಿಚಾರದ ಬಗ್ಗೆ ವಿಸ್ತೃತ  ಚರ್ಚೆ ನಡೆಯಬೇಕು ಎಂದು ತೀರ್ಪು ನೀಡಿದರೆ ನ್ಯಾ. ಚಂದ್ರಚೂಡ್ ಮತ್ತು ನ್ಯಾ. ನಾರಿಮನ್ ವಿಸ್ತೃತ  ಪೀಠಕ್ಕೆ ಬೇಡ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಶಬರಿಮಲೆ ವಿಚಾರ ಕೇವಲ ಹಿಂದೂ ಧರ್ಮದ ದೇವಾಲಯಕ್ಕೆ ಮಾತ್ರ ಸೀಮಿತವಲ್ಲ. ಮುಸ್ಲಿಂ ಧರ್ಮದ ಮಹಿಳೆ ಮಸೀದಿ ಪ್ರವೇಶಕ್ಕೂ ಇದು ಅನ್ವಯವಾಗುತ್ತದೆ. ಪಾರ್ಸಿ ಧರ್ಮಕ್ಕೂ ಅನ್ವಯವಾಗುತ್ತದೆ. ಹೀಗಾಗಿ ಈ ಪ್ರಕರಣದ ಬಗ್ಗೆ ದೀರ್ಘ ವಿಚಾರಣೆ ನಡೆಸುವ ಅಗತ್ಯವಿದೆ ಎಂದು ಪೀಠ ಅಭಿಪ್ರಾಯಪಟ್ಟಿದೆ.

ಶಬರಿಮಲೆ ಪ್ರಕರಣದಲ್ಲಿ ತೀರ್ಪು ನೀಡಿದರೆ ಉಳಿದ ಧರ್ಮದಲ್ಲಿ ಯಾಕೆ ಪ್ರವೇಶ ಇಲ್ಲ. ಅಲ್ಲೂ ಮಹಿಳೆಯರಿಗೆ ಸಮಾನ ಹಕ್ಕು ನೀಡಬೇಕೆಂಬ ಕೂಗು ಈಗಾಗಲೇ ಎದ್ದಿದೆ. ಮಹಿಳೆಯನ್ನು ಆಕೆಯ ಲಿಂಗ ಮತ್ತು ಜೈವಿಕ ಕಾರಣಗಳಿಂದ ಪ್ರತ್ಯೇಕಿಸಲು ಸಾಧ್ಯವಿಲ್ಲ. ಈ ಎಲ್ಲ ವಿಚಾರಗಳ ಮೇಲೆ ಗಮನಹರಿಸಿದ ಪೀಠ ಸುದೀರ್ಘ ವಿಚಾರಣೆ ನಡೆಸಬೇಕು ಎಂದು ಹೇಳಿದೆ.

2018ರ ಸೆಪ್ಟೆಂಬರ್ 28ರಂದು ಸುಪ್ರೀಂಕೋರ್ಟಿನ ಅಂದಿನ ಸಿಜೆ ದೀಪಕ್ ಮಿಶ್ರಾ ನೇತೃತ್ವದ ಸಾಂವಿಧಾನಿಕ ಪೀಠ 4:1ರ ಅನುಪಾತದಲ್ಲಿ ಎಲ್ಲಾ ವಯೋಮಾನದ ಮಳೆಯರಿಗೆ ಅಯ್ಯಪ್ಪ ದೇಗುಲಕ್ಕೆ ಪ್ರವೇಶ ಕಲ್ಪಿಸಿತ್ತು. ಈ ಆದೇಶವನ್ನು ಪ್ರಶ್ನಿಸಿ ಸಲ್ಲಿಸಲಾದ 64 ಮರುಪರಿಶೀಲನಾ ಅರ್ಜಿಗಳ ವಿಚಾರಣೆಯನ್ನು ಫೆ.6 ರಂದು ಪೂರ್ಣಗೊಳಿಸಿದ್ದ ಪೀಠದ ಇಂದಿಗೆ ತೀರ್ಪನ್ನು ಕಾಯ್ದಿರಿಸಿತ್ತು.

ಸುಪ್ರೀಂ ತೀರ್ಪು ಏನಿತ್ತು?
5ರಿಂದ 50 ವಯಸ್ಸಿನ ಮಹಿಳೆಯರು ಅಯ್ಯಪ್ಪ ದೇಗುಲ ಪ್ರವೇಶ ಮಾಡಬಹುದು. ಮಹಿಳೆಯನ್ನು ಆಕೆಯ ಲಿಂಗ ಮತ್ತು ಜೈವಿಕ ಕಾರಣಗಳಿಂದ ಪ್ರತ್ಯೇಕಿಸಲು ಸಾಧ್ಯವಿಲ್ಲ. ನಮ್ಮ ಬದುಕಿನ ಘನತೆಯನ್ನು ಧರ್ಮ ಎತ್ತಿ ಹಿಡಿಯುತ್ತದೆ. ಅಯ್ಯಪ್ಪ ಪ್ರತ್ಯೇಕ ದೇವರಲ್ಲ. ಲಿಂಗದ ಆಧಾರದ ಮೇಲೆ ಮಹಿಳೆಗೆ ದೇಗುಲ ಪ್ರವೇಶ ನಿರಾಕರಿಸುವುದು ಸರಿಯಲ್ಲ.

ಅಂದಿನ ಸಿಜೆ ದೀಪಕ್ ಮಿಶ್ರಾ ಸೇರಿ ನಾಲ್ವರು ನ್ಯಾಯಮೂರ್ತಿಗಳಿಂದ ತೀರ್ಪಿಗೆ ಸಹಮತ ವ್ಯಕ್ತವಾಗಿತ್ತು. ನ್ಯಾಯಮೂರ್ತಿ ಇಂದೂ ಮಲ್ಹೋತ್ರಾ ಮಾತ್ರ ಮಹಿಳೆಯರ ದೇಗುಲ ಪ್ರವೇಶಕ್ಕೆ ವಿರೋಧ ವ್ಯಕ್ತಪಡಿಸಿದ್ದರು. ಧಾರ್ಮಿಕ ಆಚರಣೆಗಳನ್ನು ಸಂವಿಧಾನದ 14ನೇ ವಿಧಿ ಅನ್ವಯ ಪರಿಗಣಿಸಲಾಗದು ಅಂದು ಸುಪ್ರೀಂಕೋರ್ಟಿನ ಸಾಂವಿಧಾನಿಕ ಪೀಠ ಅಭಿಪ್ರಾಯ ವ್ಯಕ್ತಪಡಿಸಿತ್ತು.

ಸುಪ್ರೀಂಕೋರ್ಟ್ ಆದೇಶವನ್ನು ಖಂಡಿಸಿ, ವಿರೋಧಿಸಿ ವಿರೋಧಿಸಿ ಬಿಜೆಪಿ ಮತ್ತು ಬಲಪಂಥೀಯ ಸಂಘಟನೆಗಳು ಕೇರಳದಲ್ಲಿ ಭಾರೀ ಪ್ರತಿಭಟನೆ ನಡೆಸಿದ್ದವು. ಇದರ ನಡುವೆಯೇ ಸುಪ್ರೀಂಕೋರ್ಟ್ ಆದೇಶದ ಮೇರೆಗೆ ಕನಕದುರ್ಗಾ ಮತ್ತು ಬಿಂದು ಅವರು ಪೊಲೀಸ್ ಭದ್ರತೆಯಲ್ಲಿ ಅಯ್ಯಪ್ಪನ ದರ್ಶನ ಪಡೆದಿದ್ದರು. ಇದು ಉದ್ರಿಕ್ತರನ್ನು ಮತ್ತಷ್ಟು ಕೆರಳಿಸಿತ್ತು. ಹೀಗಾಗಿ, ನಾಯರ್ ಸಮಾಜ, ತಿರುವಂಕೂರು ದೇವಸ್ವ ಮಂಡಳಿ ಹಾಗೂ ಕೇರಳ ಸರ್ಕಾರದ ಜೊತೆಗೆ 64 ಅರ್ಜಿಗಳು ಸುಪ್ರೀಂಕೋರ್ಟಿಗೆ  ಮೇಲ್ಮನವಿ ಸಲ್ಲಿಸಿದ್ದವು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ