ಎರಡು ರೈಲುಗಳ ನಡುವೆ ಮುಖಾಮುಖಿ ಡಿಕ್ಕಿ- ಕನಿಷ್ಠ 18 ಮಂದಿ ಸಾವು

ಢಾಕಾ, ನ.12-ಎರಡು ರೈಲುಗಳ ನಡುವೆ ಮುಖಾಮುಖಿ ಡಿಕ್ಕಿಯಾಗಿ ಕನಿಷ್ಠ 18 ಮಂದಿ ಮೃತಪಟ್ಟು, ಇತರ 50ಕ್ಕೂ ಹೆಚ್ಚು ಜನರು ಗಾಯಗೊಂಡಿರುವ ಘಟನೆ ಬಾಂಗ್ಲಾದೇಶದ ಬ್ರಹ್ಮನ್ ಬರಿಯಾ ಜಿಲ್ಲೆಯಲ್ಲಿ ಇಂದು ಮುಂಜಾನೆ ಸಂಭವಿಸಿದೆ.

ಗಾಯಾಳುಗಳಲ್ಲಿ ಕೆಲವರ ಸ್ಥಿತಿ ಶೋಚನೀಯವಾಗಿದ್ದು, ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಆತಂಕವಿದೆ.

ಸಿಲ್‍ಹೆಟ್‍ನಿಂದ ಚಿಟ್ಟಗಾಂಗ್‍ಗೆ ತೆರಳುತ್ತಿದ್ದ ಉದಯನ್ ಎಕ್ಸ್‍ಪ್ರೆಸ್ ಮತ್ತು ಢಾಕಾದತ್ತ ಚಲಿಸುತ್ತಿದ್ದ ತುರ್ನಾ ನಿಶ್ಚಿತ ಎಕ್ಸ್‍ಪ್ರೆಸ್ ರೈಲುಗಳು ಮೊಂಡೊಭಾಗ್ ರೈಲ್ವೆ ನಿಲ್ದಾಣದ ಬಳಿ ಇಂದು 3.30ರ ನಸುಕಿನಲ್ಲಿ ಡಿಕ್ಕಿಯಾಗಿವೆ ಎಂದು ಬ್ರಹ್ಮನ್ ಬರಿಯಾ ಡೆಪ್ಯೂಟಿ ಕಮಿಷನರ್ ಹಯಾತ್ ಉದ್ ದೊವ್ಲಾ ಖಾನ್ ತಿಳಿಸಿದ್ದಾರೆ.

ಲೋಕೋ ಮಾಸ್ಟರ್‍ಗಳು ಸಿಗ್ನಲ್ ನಿಯಮಗಳನ್ನು ಸರಿಯಾಗಿ ಪಾಲಿಸದ ಹಿನ್ನೆಲೆಯಲ್ಲಿ ಈ ದುರ್ಘಟನೆ ನಡೆದಿದೆ ಎಂದು ಖಾನ್ ಹೇಳಿದ್ದಾರೆ.

ಈ ದುರಂತದ ಬಗ್ಗೆ ತನಿಖೆ ನಡೆಸಲು ಮೂರು ಪ್ರತ್ಯೇಕ ತನಿಖಾ ಸಮಿತಿಗಳನ್ನು ರಚಿಸಲಾಗಿದೆ ಎಂದು ರೈಲ್ವೆ ಸಚಿವಾಲಯದ ಕಾರ್ಯದರ್ಶಿ ಮೊಫಜ್ಜಲ್ ಹುಸೈನ್ ತಿಳಿಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ