ನಾನು ಎಲ್ಲೂ ಹೆಚ್‌ಡಿಡಿ ಹೆಸರನ್ನು ಪ್ರಸ್ತಾಪಿಸಿಲ್ಲ;  ಬಿಎಸ್‌ವೈ ಯೂಟರ್ನ್

ಬೆಂಗಳೂರು: ಈ ಹಿಂದೆ ಮಾಜಿ ಪ್ರಧಾನಿ ದೇವೇಗೌಡರ ಜೊತೆಗಿನ ಫೋನ್ ಮಾತುಕತೆ ನಿಜ ಎಂದು ಒಪ್ಪಿಕೊಂಡಿದ್ದ ಸಿಎಂ ಯಡಿಯೂರಪ್ಪ ಈಗ ಉಲ್ಟಾ ಹೊಡೆದಿದ್ದಾರೆ. ಎಚ್‌ಡಿಡಿ ಅವರು ಫೋನ್ ಮಾಡಿದ್ದರು ಅನ್ನೋ ವಿಷಯದಲ್ಲಿ ಯಾವುದೇ ಸತ್ಯಾಂಶ ಇಲ್ಲ ಎಂದಿದ್ದಾರೆ.

ಮಾಧ್ಯಮಗಳ ಜೊತೆ ಮಾತನಾಡಿದ ಸಿಎಂ, ಮಾಜಿ ಪ್ರಧಾನಿ ದೇವೇಗೌಡರು ಫೋನ್ ಕರೆ ಮಾಡಿ ಅಭಯ ತಿಳಿಸಿದ ವಿಚಾರವಾಗಿ ಪ್ರತಿಕ್ರಿಯಿಸಿದರು. ದೇವೇಗೌಡರ ಜೊತೆಗಿನ ಫೋನ್ ಮಾತುಕತೆ ವಿಚಾರದಲ್ಲಿ ಯಾವುದೇ ಸತ್ಯಾಂಶವಿಲ್ಲ. ಅವರು ಮಾಜಿ ಪ್ರಧಾನಿಯಾಗಿದ್ದವರು. ಅವರಿಗೆ ಯಾವುದು ಸರಿ ಯಾವುದು ತಪ್ಪು ಅಂತ ತೀರ್ಮಾನ ಮಾಡೋ ಶಕ್ತಿ ಇದೆ. ನಾನು ದೇವೇಗೌಡರ ಹೆಸರನ್ನು ಯಾವುದೇ ಸಂದರ್ಭದಲ್ಲಿ ಪ್ರಸ್ತಾಪ ಮಾಡಿಲ್ಲ ಎಂದು ಹೇಳಿಕೆ ಕೊಟ್ಟಿದ್ದಾರೆ.

ದೇವೇಗೌಡರ ಜೊತೆ ಫೋನ್‌ನಲ್ಲಿ ಮಾತುಕತೆ ನಡೆಸಿದ್ದೇನೆ ಎಂದು ಸಿಎಂ ಹೇಳಿರುವ ವಿಡಿಯೋ ಪಬ್ಲಿಕ್ ಟಿವಿಗೆ ಲಭ್ಯವಾಗಿತ್ತು. ಈ ಮಾತು ರಾಜ್ಯ ರಾಜಕೀಯದಲ್ಲಿ ಮತ್ತೊಂದು ಮಹಾಮೈತ್ರಿಯ ಮುನ್ಸೂಚನೆ ನೀಡಿದೆ. ದೇವೇಗೌಡರು ಯಡಿಯೂರಪ್ಪ ಅವರಿಗೆ ಮೈತ್ರಿ ಆಫರ್ ನೀಡಿದ್ದಾರೆ. ಇದಕ್ಕೆ ಸಿಎಂ ಯಡಿಯೂರಪ್ಪ ಕೂಡ ಒಪ್ಪಿಗೆ ಕೊಟ್ಟಿದ್ದಾರೆ ಅನ್ನೋ ಮಾತುಗಳು ರಾಜಕೀಯ ಪಡಸಾಲೆಯಲ್ಲಿ ಕೇಳಿ ಬರುತ್ತಿವೆ. ಹೆಚ್‌ಡಿ ಕುಮಾರಸ್ವಾಮಿ ವಿದೇಶದಲ್ಲಿದ್ದಾಗಲೇ ಮಹಾಮೈತ್ರಿಯ ಮಾತುಕತೆ ನಡೀತಾ? ಇತ್ತ ಬಿಜೆಪಿ ಹೈಕಮಾಂಡ್‌ನ ಒಪ್ಪಿಗೆ ಇಲ್ಲದೇ ಇಬ್ಬರ ನಡುವಿನ ಮಾತುಕತೆ ಹೇಗೆ ಸಾಧ್ಯ ಎಂದು ಎರಡೂ ಪಕ್ಷಗಳಲ್ಲೂ ಚರ್ಚೆ ಶುರುವಾಗಿದೆ.

ವಿರೋಧ ಪಕ್ಷದಲ್ಲಿದ್ದಾಗ ಅಪ್ಪ-ಮಕ್ಕಳನ್ನು ರಾಜಕೀಯವಾಗಿ ಮುಗಿಸೋದೇ ನನ್ನ ಗುರಿ ಅಂತಿದ್ದ ಯಡಿಯೂರಪ್ಪ ಸಿಎಂ ಆಗುತ್ತಿದ್ದಂತೆ ಸಾಫ್ಟ್ ಕಾರ್ನರ್ ಬೆಳೆಸಿಕೊಂಡಿದ್ದಾರೆ. ಇತ್ತ ಜೆಡಿಎಸ್ ವರಿಷ್ಠರಾದ ದೇವೇಗೌಡರೇ ಯಡಿಯೂರಪ್ಪ ಅವರಿಗೆ ಫೋನ್ ಮಾಡಿ ಮೈತ್ರಿ ಆಫರ್ ಕೊಟ್ಟಿದ್ದಾರೆ ಎನ್ನಲಾಗುತ್ತಿದೆ. ರಾಜ್ಯದಲ್ಲಿ ಮತ್ತೆ ಮಹಾಮೈತ್ರಿ ಅಸ್ತಿತ್ವಕ್ಕೆ ಬರುತ್ತಾ ಅನ್ನೋ ಚರ್ಚೆ ಶುರುವಾಗಿವೆ.

ಮಾಜಿ ಸಿಎಂ ಕುಮಾರಸ್ವಾಮಿ ಅವರ ಸರ್ಕಾರ ಬೀಳಿಸಲ್ಲ ಎಂಬ ಮಾತು ಈಗಾಗಲೇ ರಾಜ್ಯ ರಾಜಕೀಯದಲ್ಲಿ ನಾನಾ ರೀತಿಯ ಚರ್ಚೆಗೆ ಕಾರಣವಾಗಿದೆ. ಯಡಿಯೂರಪ್ಪನವರ ಬಗ್ಗೆ ಕುಮಾರಸ್ವಾಮಿ ಅವರ ಸಾಫ್ಟ್ ಕಾರ್ನರ್ ತೋರಿರುವುದರಿಂದ ರಾಜ್ಯದಲ್ಲಿ ಹೊಸ ಬೆಳವಣಿಗೆ ನಡೆಯುತ್ತೆ ಅನ್ನೋ ಮಾತುಗಳು ಕಳೆದೊಂದು ವಾರದಿಂದ ಜೋರಾಗಿಯೇ ಸದ್ದು ಮಾಡುತ್ತಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ