ಅಂಗಡಿಗಳಲ್ಲಿ, ಮಾರುಕಟ್ಟೆಗಳಲ್ಲಿ ಚಲಾವಣೆಯಾಗದೆ ಆತಂಕಕ್ಕೆ ಕಾರಣವಾಗಿರುವ 2000 ಮುಖಬೆಲೆಯ ನೋಟುಗಳು

ಬೆಂಗಳೂರು, ಅ.31- ನೋಟು ಅಮಾನೀಕರಣ (ಡಿ-ಮಾನಿಟೈಸೇಷನ್) ಸಂದರ್ಭದಲ್ಲಿ ಸರ್ಕಾರ ಚಲಾವಣೆಗೆ ತಂದ 2000 ಮುಖಬೆಲೆಯ ನೋಟನ್ನು ಎಲ್ಲರೂ ಸಂತಸದಿಂದ  ಹಿಡಿದು ಸಂಭ್ರಮಿಸಿದ್ದರು. ಈಗ ಅದೇ ನೋಟು ಎಲ್ಲರಿಗೂ ಭೂತವಾಗಿ ಕಾಡುತ್ತಿದೆ.ಸಂಘರ್ಷಕ್ಕೆ ಕಾರಣವಾಗುತ್ತಿದೆ.ಅಂಗಡಿಗಳಲ್ಲಿ, ಮಾರುಕಟ್ಟೆಗಳಲ್ಲಿ ಚಲಾವಣೆಯಾಗದೆ ಆತಂಕಕ್ಕೆ ಕಾರಣವಾಗಿದೆ.

ಬಹುತೇಕ ಸಾಮಾಜಿಕ ಜಾಲತಾಣಗಳಲ್ಲಿ, ಮಾಧ್ಯಮಗಳಲ್ಲಿ 2000 ಮುಖಬೆಲೆಯ ನೋಟುಗಳನ್ನು ಸ್ಥಗಿತಗೊಳಿಸಲಾಗುತ್ತದೆ ಎಂಬ ಸುದ್ದಿ ಹರಿಯಬಿಟ್ಟ ಹಿನ್ನೆಲೆಯಲ್ಲಿ ಯಾರೂ ಈ ನೋಟನ್ನು ತೆಗೆದುಕೊಳ್ಳಲು ಮುಂದೆ ಬರುತ್ತಿಲ್ಲ. ಬ್ಯಾಂಕ್‍ಗಳಿಂದಲೂ 2000ರೂ.ನೋಟನ್ನು ಗ್ರಾಹಕರು ಪಡೆಯಲು ಹಿಂದೇಟು ಹಾಕುತ್ತಿದ್ದಾರೆ.

ವಿವಿಧ ಬ್ಯಾಂಕ್‍ಗಳಲ್ಲಿ ಗ್ರಾಹಕರು ಮತ್ತು ಬ್ಯಾಂಕ್ ಸಿಬ್ಬಂದಿ ನಡುವೆ ಈ ವಿಷಯಕ್ಕೆ ಗಲಾಟೆಗಳೇ ನಡೆಯುತ್ತಿವೆ. ಯಾವುದೇ ನೋಟನ್ನು ನಿರ್ಬಂಧಿಸುವಾಗ ರಿಸರ್ವ್ ಬ್ಯಾಂಕ್ ಅಥವಾ ಕೇಂದ್ರ ಸರ್ಕಾರ ತೀರ್ಮಾನ ಮಾಡಬೇಕು.ಆದರೆ, ಇಂತಹ ಯಾವುದೇ ಮಹತ್ವದ ತೀರ್ಮಾನ ಆಗದಿದ್ದರೂ 2000ರೂ.ಮುಖಬೆಲೆಯ ನೋಟು ಚಲಾವಣೆಯಾಗದಿರುವುದು ವಿಪರ್ಯಾಸದ ಸಂಗತಿಯಾಗಿದೆ.

ಸಾಮಾನ್ಯವಾಗಿ ಹೆಚ್ಚು ಮುಖಬೆಲೆಯ ನೋಟುಗಳನ್ನು ಸಂಗ್ರಹಿಸಿಟ್ಟುಕೊಳ್ಳುವುದು ವಾಡಿಕೆ.ಅದೇ ರೀತಿ 2000ರೂ.ಮುಖಬೆಲೆಯ ನೋಟುಗಳನ್ನು ಜನ ಸಂಗ್ರಹಿಸಿಟ್ಟುಕೊಂಡಿರುತ್ತಾರೆ.ಅದನ್ನು ಹೊರತೆಗೆಸಬೇಕು ಎಂಬ ಹಿನ್ನೆಲೆಯಲ್ಲಿ 2000ರೂ.ನೋಟನ್ನು ನಿಷೇಧ ಮಾಡುತ್ತಾರೆ ಎಂಬ ಸುದ್ದಿಯನ್ನು ಹರಿಯಬಿಟ್ಟಿರಬಹುದು.ಆದರೆ, ಇಂತಹ ಯಾವುದೇ ವಿಷಯವನ್ನು ಆರ್‍ಬಿಐ ಆಗಲಿ, ಕೇಂದ್ರ ಸರ್ಕಾರವಾಗಲಿ ಈವರೆಗೆ ಸ್ಪಷ್ಟಪಡಿಸಿಲ್ಲ. ಮಾರುಕಟ್ಟೆಯಲ್ಲಿ 2000ರೂ.ನೋಟುಗಳು ಚಲಾವಣೆಯಲ್ಲಿದ್ದರೂ ಮಾರುಕಟ್ಟೆಗಳಲ್ಲಿ, ಒಡವೆ, ದಿನಸಿ ಅಂಗಡಿಗಳವರು ಕೂಡ ಈ ನೋಟನ್ನು ಪಡೆಯಲು ಹಿಂದೇಟು ಹಾಕುತ್ತಿದ್ದಾರೆ.

ಸರ್ಕಾರ ಸುಮಾರು 6 ಲಕ್ಷ ಕೋಟಿ ಮೌಲ್ಯದ 2000ರೂ.ಮುಖಬೆಲೆಯ ನೋಟುಗಳನ್ನು ಮುದ್ರಿಸಿ ಬಿಡುಗಡೆ ಮಾಡಿತ್ತು.ಎಲ್ಲ ನೋಟುಗಳು ಈಗ ಚಲಾವಣೆಯಲ್ಲಿವೆ. ಏಕಾಏಕಿ ನೋಟು ನಡೆಯುತ್ತಿಲ್ಲ ಎಂದರೆ ಜನ ಆತಂಕಕ್ಕೆ ಒಳಗಾಗುತ್ತಾರೆ.ಗಲಾಟೆಗೆ ಕಾರಣವಾಗುತ್ತದೆ.ಬ್ಯಾಂಕ್‍ನವರು ಮಾತ್ರ ಈ ನೋಟನ್ನು ಸ್ವೀಕರಿಸುತ್ತಾರೆ.ಆದರೆ, ಬ್ಯಾಂಕ್‍ನವರು ಕೊಟ್ಟರೆ ಗ್ರಾಹಕರು ಸ್ವೀಕರಿಸುತ್ತಿಲ್ಲ. ಅವರು 500, 200, 100ರೂ.ಮುಖಬೆಲೆಯ ನೋಟುಗಳನ್ನು ಕೇಳುತ್ತಾರೆ.2000ರೂ. ನೋಟನ್ನು ನಿಷೇಧ ಮಾಡಿಲ್ಲ ಎಂದು ಎಷ್ಟು ಹೇಳಿದರೂ ಜನ ಕೇಳುತ್ತಿಲ್ಲ. ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಟ್ಟಿರುವ ಸುದ್ದಿ ಅಷ್ಟು ಪ್ರಭಾವ ಬೀರಿದೆ.

ಡಿ-ಮಾನಿಟೈಸೇಷನ್, ಜಿಎಸ್‍ಟಿಯಿಂದ ಈಗಾಗಲೇ ಜನ ಹೈರಾಣಾಗಿದ್ದಾರೆ. ಈಗ ಮತ್ತೆ 2000ರೂ.ನೋಟುಗಳ ಚಲಾವಣೆ ಗೊಂದಲದಿಂದ ಮತ್ತಷ್ಟು ಪಜೀತಿಗೆ ಒಳಗಾಗುತ್ತಿದ್ದಾರೆ.ಕೇಂದ್ರ ಸರ್ಕಾರ, ಆರ್‍ಬಿಐ ಕೂಡಲೇ ಮಧ್ಯ ಪ್ರವೇಶಿಸಿ ಸ್ಪಷ್ಟ ನಿಲುವು ನೀಡಬೇಕು ಎಂಬುದು ಸಾರ್ವಜನಿಕರ ಆಗ್ರಹವಾಗಿದೆ.

ಬ್ಯಾಂಕ್‍ಗಳಿಗೆ 2000ರೂ.ಮುಖಬೆಲೆಯ ನೋಟುಗಳ ನಿಷೇಧದ ಬಗ್ಗೆ ಯಾವುದೇ ಮಾಹಿತಿ ಬಂದಿಲ್ಲ. ಹಾಗಾಗಿ ಅವರು ಗ್ರಾಹಕರಿಂದ ಸ್ವೀಕರಿಸುತ್ತಾರೆ, ಗ್ರಾಹಕರಿಗೆ ಕೊಡುತ್ತಾರೆ.ಆದರೆ, ಜನರಲ್ಲಿರುವ ಗೊಂದಲವನ್ನು ಶೀಘ್ರ ನಿವಾರಣೆ ಮಾಡಬೇಕಾಗಿದೆ.ಇಲ್ಲದಿದ್ದರೆ ಮತ್ತಷ್ಟು ಸಂಘರ್ಷ ಅನಾಹುತಕ್ಕೆ ಕಾರಣವಾಗುತ್ತದೆ.

ಇದೇ ರೀತಿ ಸರ್ಕಾರ 10ರೂ.ನಾಣ್ಯವನ್ನು ಬಿಡುಗಡೆ ಮಾಡಿತ್ತು.ಈಗ ಮಾರುಕಟ್ಟೆಯಲ್ಲಿ ಅದರ ಚಲಾವಣೆಯೂ ನಿಂತಿದೆ.ಯಾರೂ ಅದನ್ನು ತೆಗೆದುಕೊಳ್ಳಲು ಮುಂದಾಗುತ್ತಿಲ್ಲ. ಸರ್ಕಾರ ಎಷ್ಟೇ ಸ್ಪಷ್ಟನೆ ನೀಡಿದರೂ ಜನ ಅದನ್ನು ತೆಗೆದುಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆ.

2000ರೂ. ಮುಖಬೆಲೆಯ ನೋಟುಗಳ ಪರಿಸ್ಥಿತಿ ಹೀಗಾಗಬಾರದೆಂದರೆ ಶೀಘ್ರ ಸ್ಪಷ್ಟನೆ ನೀಡಬೇಕು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ