ಅಂಗನವಾಡಿ ಕಾರ್ಯಕರ್ತೆಯರಿಗೆ ಗೌರವಧನ ಹೆಚ್ಚಳ

Varta Mitra News

ಬೆಂಗಳೂರು,ಅ.25-ಅಂಗನವಾಡಿ ಕಾರ್ಯಕರ್ತೆಯರು, ಮಿನಿ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರ ಬಹುದಿನಗಳ ಬೇಡಿಕೆಯಾದ ಗೌರವಧನ ಹೆಚ್ಚಳ ಮಾಡುವ ಮೂಲಕ ರಾಜ್ಯ ಸರ್ಕಾರ ದೀಪಾವಳಿ ಹಬ್ಬದ ಬಂಪರ್ ಕೊಡುಗೆ ನೀಡಿದೆ.

2018  ಅಕ್ಟೋಬರ್ 1ರಿಂದ ಪೂರ್ವಾನ್ವಯವಾಗುವಂತೆ ಅಂಗನವಾಡಿ ಕಾರ್ಯಕರ್ತೆಯರು 2 ಸಾವಿರ, ಮಿನಿ ಅಂಗನವಾಡಿ ಕಾರ್ಯಕರ್ತೆಯರಿಗೆ  1250 ಹಗೂ ಸಹಾಯಕಿಯರಿಗೆ 1 ಸಾವಿರ ಗೌರವಧನವನ್ನು ಹೆಚ್ಚಳ ಮಾಡಲಾಗಿದ್ದು, ನವೆಂಬರ್‍ನಿಂದಲೇ ಇದು ಅನುಷ್ಠಾನವಾಗಲಿದೆ ಎಂದು  ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಶಶಿಕಲಾ ಜೊಲ್ಲೆ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು,ಗೌರವ ಧನ ಹೆಚ್ಚಳದಲ್ಲಿ  ಕೇಂದ್ರ ಸರ್ಕಾರ 1500 ರೂ. ನೀಡಿದರೆ ರಾಜ್ಯ ಸರ್ಕಾರ 500 ರೂ.ನೀಡಲಿದೆ. ಅಕ್ಟೋಬರ್ ತಿಂಗಳಿನಿಂದ ಬಾಕಿ ಉಳಿದಿರುವ  ಹಣವನ್ನು ಒಂದೇ ಕಂತಿನಲ್ಲಿ ಬಿಡುಗಡೆ ಮಾಡುವಂತೆ ಹಣಕಾಸು ಇಲಾಖೆಗೆ ಪ್ರಸ್ತಾವನೆ ಸಲ್ಲಿಸಿದೆ. ಅಂಗನವಾಡಿ ಕಾರ್ಯಕರ್ತೆಯರ ಬಹುದಿನಗಳ ಬೇಡಿಕೆಯನ್ನು ಈಡೇರಿಸಿದ್ದೇವೆ  ಎಂದರು.

2018ರ ಅಕ್ಟೋಬರ್ ತಿಂಗಳಿನಲ್ಲೇ ಪ್ರಧಾನಿ ಮೋದಿ ಅಂಗನವಾಡಿ ಕಾರ್ಯಕರ್ತೆಯರ ಗೌರವಧನವನ್ನು ಹೆಚ್ಚಳ  ಮಾಡಿದ್ದರು. ಆದರೆ ಕೆಲವು ತಾಂತ್ರಿಕ ಕಾರಣಗಳಿಂದ ಇದು ಅನುಷ್ಠಾನವಾಗಿರಲಿಲ್ಲ.  ಈ ಸಂಬಂಧ ಮುಖ್ಯಮಂತ್ರಿ ಯಡಿಯೂರಪ್ಪ ಹಣಕಾಸು ಇಲಾಖೆ ಅಧಿಕಾರಿಗಳ ಜೊತೆ ಚರ್ಚಿಸಿ  ವೇತನ ಹೆಚ್ಚಳಕ್ಕೆ  ಅನುಮೋದನೆ ಪಡೆದುದ್ದಾಗಿ ವಿವರಿಸಿದರು.

ರಾಜ್ಯದಲ್ಲಿ 62,580 ಅಂಗನವಾಡಿ ಕಾರ್ಯಕರ್ತೆಯರು ಕಾರ್ಯ  ನಿರ್ವಹಿಸತ್ತಿದ್ದಾರೆ. 3,310 ಮಿನಿ ಅಂಗನವಾಡಿ ಕಾರ್ಯಕರ್ತೆಯರು, 62,600 ಸಹಾಯಕಿಯರು ಒಟ್ಟು 1,28,000 ಸಿಬ್ಬಂದಿಗೆ ಅನ್ವಯವಾಗಲಿದೆ. ಇವರೆಲ್ಲರಿಗೂ ಗೌರವಧನ ಜಾರಿಗೆಯಾಗಲಿದೆ.ಇದು ದೀಪಾವಳಿ ಕೊಡುಗೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಹುದ್ದೆಗಳ ಭರ್ತಿ:

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಲ್ಲಿ ಕಳೆದ ಹಲವು ವರ್ಷಗಳಿಂದ ಖಾಲಿ ಇರುವ ಹುದ್ದೆಗಳನ್ನು ಕೆಪಿ ಎಸ್‍ಸಿ ಮೂಲಕ ಭರ್ತಿ ಮಾಡಿಕೊಳ್ಳಲಾಗಿತ್ತು. ಆದರೆ ಅವರಲ್ಲಿ ಕೆಲವರು ತರಬೇತಿ ಪಡೆದಿದ್ದರೂ ಹುದ್ದೆಗೆ ನಿಯೋಜನೆ ಮಾಡಿರಲಿಲ್ಲ. ಇದೀಗ 48 ಶಿಶು ಅಭಿವೃದ್ಧಿ  ಯೋಜನಾಧಿಕಾರಿಗಳು ತರಬೇತಿ ನೀಡಿ  ನಿಯೋಜನೆ ಮಾಡಲಾಗಿದೆ.

ಇದೇ ರೀತಿ 33 ಸಹಾಯಕ ಶಿಶು ಅಭಿವೃದ್ಧಿ ಅಧಿಕಾರಿಗಳಿಗೆ ಹುದ್ದೆ ನೀಡಿರಲಿಲ್ಲ. ಈಗಾಗಲೇ ಇವರಿಗೂ ಕೂಡ ತರಬೇತಿ ನೀಡಲಾಗಿದ್ದು,  2 ದಿನದೊಳಗೆ ಸ್ಥಳ ನಿಯೋಜನೆಯಾಗಲಿದೆ. ಇನ್ನು 628 ಮೇಲ್ವಿಚಾರಕಿಯರಿಗೆ   ಉಜರಿಯಲ್ಲಿ ತರಬೇತಿ ನೀಡಲಾಗುತ್ತಿದೆ.ಶೀಘ್ರದಲ್ಲೇ ಇವರನ್ನು ಕೂಡ ಕಚೇರಿಗಳಿಗೆ ನಿಯೋಜನೆ ಮಾಡಲಾಗುವುದು.

ಇನ್ನು 324 ಮೇಲ್ವಿಚಾರಕಿರಿಯರಿಗೆ  ತರಬೇತಿ  ಹಂತದಲಿದ್ದಾರೆ. 254 ಮೇಲ್ವಚಾರಕಿಯರನ್ನು 2ನೇ ಹಂತದಲ್ಲಿ ತರಬೇತಿ ನೀಡಲಾಗುವುದು.ಅತಿ ಶೀಘ್ರದಲ್ಲಿ ಇವರು ಕೂಡ ಕರ್ತವ್ಯಕ್ಕೆ ನಿಯೋಜನೆಗೊಳ್ಳಲಿದ್ದಾರೆ ಎಂದು ತಿಳಿಸಿದರು.

ಇಲಾಖೆಯಲ್ಲಿ  ಐದು ಹಂತದವರೆಗೆ ನಾವು ಮುಂಬಡ್ತಿ ನೀಡಲು ತೀರ್ಮಾನಿಸಿದ್ದೇವೆ.  ಚಾಲಕನಿಂದ ಹಿಡಿದು ಅಧಿಕಾರಿ ವರ್ಗದವರೆಗೂ ವೃಂದ ಮತ್ತು ನೇಮಕಾತಿ ನಿಯಮದಂತೆ ಮುಂಬಡ್ತಿ ನೀಡಲಾಗುವುದು. ಈಗಾಗಲೇ 104 ಮಂದಿಗೆ ಮುಂಬಡ್ತಿ ನೀಡಲು ಆಡಳಿತ ಮತ್ತು ಸಿಬ್ಬಂದಿ ಸುಧಾರಣೆ ಇಲಾಖೆ(ಡಿಪಿಎಆರ್) ಕಳುಹಿಸಿಕೊಟ್ಟಿದೆ.

ಇತ್ತೀಚೆಗೆ  ರಾಜ್ಯದ ವಿವಿಧೆಡೆ ಸುರಿದ ಭಾರೀ ಮಳೆಯಿಂದ ಪ್ರವಾಹ ಉಂಟಾಗಿ ಅನೇಕ ಅಂಗನವಾಡಿ ಕುಸಿದು ಬಿದ್ದಿವೆ. ಹೀಗಾಗಿ ಅಂಗನವಾಡಿಗಳನ್ನು ರಿಪೇರಿ ಮಾಡಲು 10 ಕೋಟಿ ಹಣವನ್ನು ಇಲಾಖೆಯಿಂದ ಬಿಡುಗಡೆ ಮಾಡಲಾಗುತ್ತಿದೆ. ಆದರೆ ಈ ಹಣ ಸಾಲುವುದಿಲ್ಲ ಎಂಬ ಕಾರಣಕ್ಕಾಗಿ ಇನ್ನು ಹೆಚ್ಚಿನ ಹಣವನ್ನು ಬಿಡುಗಡೆ ಮಾಡುವಂತೆ 2ನೇ ಹಂತದಲ್ಲಿ ಪ್ರಸ್ತಾವನೆ ಸಲ್ಲಿಸಲು ತೀರ್ಮಾನಿಸಲಾಗಿದೆ ಎಂದು ಹೇಳಿದರು.

ಅಂಗನವಾಡಿಯಲ್ಲಿ ಮಕ್ಕಳು ಆಟದ  ಮೂಲಕ ಪಾಠ ಕಲಿಯಲು ಅನುಕೂಲವಾಗುವಂತೆ ಅಂಗನವಾಡಿಗಳನ್ನು ಹೈಟೆಕ್ ರೂಪದಲ್ಲಿ ಮೇಲ್ದರ್ಜೆಗೇರಿಸಲು ತೀರ್ಮಾನಿಸಲಾಗಿದೆ.

ಬೆಳಗಾವಿ ಜಿಲ್ಲೆಯಲ್ಲಿ  ಮಹಾಸಿಟಿ ಯೋಜನೆಯಡಿ 300 ಅಂಗನವಾಡಿಗಳು ಕಾರ್ಯ ನಿರ್ವಹಿಸುತ್ತವೆ. ಇದರಲ್ಲಿ ಮೊದಲ ಹಂತವಾಗಿ 100 ಅಂಗನವಾಡಿಗಳನ್ನು ಹೈಟೆಕ್  ಆಗಿ ಪರಿವರ್ತಿಸಲು ತೀರ್ಮಾನಿಸಲಾಗಿದೆ. ಮುಂದಿನ ದಿನಗಳಲ್ಲಿ ರಾಜ್ಯದ ಎಲ್ಲ ಕಡೆ ಇದನ್ನು ಇದೇ ಮಾದರಿಯನ್ನು ಅಳವಡಿಸುವ  ಬಗ್ಗೆ ಗಂಭೀರ ಚಿಂತನೆ ನಡೆಸಿದ್ದೇವೆ ಎಂದು ಶಶಿಕಲಾ ಜೊಲ್ಲೆ ಹೇಳಿದರು.

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ