ಮಾಜಿ ಕೇಂದ್ರ ಸಚಿವ ಚಿದಂಬರಂಗೆ ಷರತ್ತುಬದ್ಧ ಜಾಮೀನು ನೀಡಿದ ಸುಪ್ರೀಂ ಕೋರ್ಟ್​

ನವದೆಹಲಿ; ಐಎನ್ಎಕ್ಸ್ ಮೀಡಿಯಾ ಪ್ರಕರಣದಲ್ಲಿ ಸಿಬಿಐ ಅಧಿಕಾರಿಗಳಿಂದ ನ್ಯಾಯಾಂಗ ಬಂಧನಕ್ಕೆ ಒಳಗಾಗಿದ್ದ ಮಾಜಿ ಕೇಂದ್ರ ಹಣಕಾಸು ಸಚಿವ ಪಿ. ಚಿದಂರಂ ಅವರಿಗೆ ಸುಪ್ರೀಂ ಕೋರ್ಟ್ಇಂದು ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ. ಆದರೆ, ಇಡಿ ಕಸ್ಟಡಿ ಮುಂದುವರೆಯಲಿದೆ.

ಒಂದು ಲಕ್ಷ ರೂ. ಮೌಲ್ಯದ ಬಾಂಡ್ ಹಾಗೂ ಪಾಸ್​ಪೋರ್ಟ್​ ಅನ್ನು ಕೋರ್ಟ್​ಗೆ ಸಲ್ಲಿಸಬೇಕು ಹಾಗೂ ನ್ಯಾಯಾಲಯದ ಅನುಮತಿ ಇಲ್ಲದೆ ವಿದೇಶ ಪ್ರಯಾಣ ಮಾಡಬಾರದು ಎಂದು ತಾಕೀತು ಮಾಡಇರುವ ಸುಪ್ರೀಂ ಕೋರ್ಟ್​ ಮಾಜಿ ಸಚಿವ ಪಿ. ಚಿದಂಬರಂ ಅವರಿಗೆ ಜಾಮೀನು ಮಂಜೂರು ಮಾಡಿದೆ.

ಪಿ. ಚಿದಂಬರಂ ಹಣಕಾಸು ಸಚಿವರಾಗಿದ್ದ ಅವಧಿಯಲ್ಲಿ 2007 ರಲ್ಲಿ 305 ಕೋಟಿ ರೂ. ವಿದೇಶಿ ಹಣವನ್ನು ಅಕ್ರಮವಾಗಿ ವರ್ಗಾವಣೆ ಮಾಡಿದ್ದರು ಎಂದು ಆರೋಪಿಸಿ ಸಿಬಿಐ ಅವರ ವಿರುದ್ಧ 2017 ಮೇ 15 ರಂದು ಎಫ್​ಐಆರ್​ ದಾಖಲು ಮಾಡಿತ್ತು. ಅಲ್ಲದೆ, ನಿರಂತರವಾಗಿ ವಿಚಾರಣೆ ನಡೆಸಿತ್ತು. ಈ ನಡುವೆ ಕಳೆದ ಆಗಸ್ಟ್​ 22 ರಂದು ನಡೆದ ನಾಟಕೀಯ ಬೆಳವಣಿಗೆಯಲ್ಲಿ ಸಿಬಿಐ ಅಧಿಕಾರಿಗಳು ಪಿ. ಚಿದಂಬರಂ ಅವರನ್ನು ಬಂಧಿಸಿದ್ದರು.

ಚಿದಂಬರಂ ಅವರನ್ನು ನ್ಯಾಯಾಂಗ ಬಂಧನಕ್ಕೆ ಪಡೆದಿದ್ದ ಸಿಬಿಐ ಅವರನ್ನು ತಿಹಾರ್​ ಜೈಲಿನಲ್ಲಿಟ್ಟು ಅಕ್ರಮ ಹಣ ವರ್ಗಾವಣೆ ಸಂಬಂಧ ನಿರಂತರ ವಿಚಾರಣೆಗೊಳಪಡಿಸಿತ್ತು. ಹೀಗಾಗಿ ಕಳೆದ ಎರಡು ತಿಂಗಳಿನಿಂದ ಪಿ. ಚಿದಂಬರಂ ಪರ ವಕೀಲ ಕಪಿಲ್​ ಸಿಬಲ್​ ಅವರಿಗೆ ಜಾಮೀನು ಕೋರಿ ದೆಹಲಿ ಹೈಕೋರ್ಟ್​ ಹಾಗೂ ಸುಪ್ರೀಂ ಕೋರ್ಟ್​ಗೆ ಸತತ ಅರ್ಜಿ ಸಲ್ಲಿಸಿದ್ದರು. ಅಲ್ಲದೆ, ಇಡಿ ಇಲಾಖೆಯ ಬಂಧನದಿಂದಲೂ ಚಿದಂಬರಂ ಅವರಿಗೆ ರಕ್ಷಣೆ ಬೇಕು ಎಂದು ಮನವಿ ಮಾಡಿದ್ದರು.

ಆದರೆ, ಇಡಿ ಬಂಧನದಿಂದ ವಿನಾಯ್ತಿ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ವಜಾ ಮಾಡಿರುವ ಸುಪ್ರೀಂ ಕೋರ್ಟ್​ ಸಿಬಿಐ ಬಂಧನದಿಂದ ಮಾತ್ರ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ.  ಹೀಗಾಗಿ ಪಿ. ಚಿದಂಬರಂ ಅವರಿಗೆ ಇಂದು ಸುಪ್ರೀಂನಿಂದ ಜಾಮೀನು ಲಭಿಸಿದ್ದರೂ ಇಡಿ ಅಧಿಕಾರಿಗಳು ಅವರನ್ನು ಬಂಧಿಸುವ ಸಾಧ್ಯತೆಯೂ ಇದೆ ಎಂದು ಹೇಳಲಾಗುತ್ತಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ