ಪಿಎಂಸಿ ಬ್ಯಾಂಕ್‍ನ ಭಾರೀ ವಂಚನೆಗೆ ಮತ್ತೊಂದು ಜೀವ ಬಲಿ

ಮುಂಬೈ, ಅ.19-ಪಂಜಾಬ್ ಮತ್ತು ಮಹಾರಾಷ್ಟ್ರ ಕೋ ಆಪರೇಟಿವ್ (ಪಿಎಂಸಿ) ಬ್ಯಾಂಕ್ ಭಾರೀ ವಂಚನೆಗೆ ಮತ್ತೊಂದು ಜೀವ ಬಲಿಯಾಗಿದೆ.
ಭಾರತೀಯ ರಿಸರ್ವ್ ಬ್ಯಾಂಕ್‍ನ ಕೆಂಗಣ್ಣಿಗೆ ಗುರಿಯಾಗಿರುವ ಪಿಎಂಸಿ ಬ್ಯಾಂಕ್ ಹಗರಣದ ತನಿಖೆ ಪ್ರಗತಿಯಲ್ಲಿರುವಾಗಲೆ ಠೇವಣಿ ಇಟ್ಟಿದ್ದ ಮತ್ತೋರ್ವ ಖಾತೆದಾರ ಸಾವನ್ನಪ್ಪಿದ್ದಾನೆ. ಇದರೊಂದಿಗೆ ಮೃತ ಪಿಎಂಸಿ ಠೇವಣಿದಾರರ ಸಾವಿನ ಸಂಖ್ಯೆ 4ಕ್ಕೆ ಏರಿದಂತಾಗಿದೆ.
ಮುರಳೀಧರ್ (83) ಎಂಬ ಪಿಎಂಸಿ ಬ್ಯಾಂಕ್ ಖಾತೆದಾರ ಹೃದಯ ಸಮಸ್ಯೆಯಿಂದ ಬಳಲುತ್ತಿದ್ದರು. ಪಿಎಂಸಿ ಬ್ಯಾಂಕ್‍ನಲ್ಲಿ ಅವರು ಸುಮಾರು 80 ಲಕ್ಷ ರೂ.ಗಳನ್ನು ಠೇವಣಿ ಇಟ್ಟಿದ್ದರು. ಆದರೆ ಇತ್ತೀಚೆಗೆ ಅವರಿಗೆ ಹೃದಯ ಶಸ್ತ್ರ ಚಿಕಿತ್ಸೆಗೆ ವೈದ್ಯರು ಸೂಚಿಸಿದ್ದರು. ಆದರೆ ಶಸ್ತ್ರಚಿಕಿತ್ಸೆಗೆ ಹಣ ಕಟ್ಟಲಾಗದೇ ಅವರು ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.
ಇನ್ನು ಮುರಳೀಧರ್ ಅವರು ಪಿಎಂಸಿ ಖಾತೆಯಲ್ಲಿ ಸುಮಾರು 80 ಲಕ್ಷ ಹಣವನ್ನು ಠೇವಣಿ ಇಟ್ಟಿದ್ದರು ಎಂದು ಅವರ ಮಗ ಪ್ರೇಮ್‍ಧರ್ ಮಾಹಿತಿ ನೀಡಿದ್ದಾರೆ.
ಕಳೆದ ಸೆಪ್ಟೆಂಬರ್‍ನಿಂದ ಆರ್‍ಬಿಐ ಪಿಎಂಸಿ ಬ್ಯಾಂಕ್ ಮೇಲೆ ನಿರ್ಬಂಧ ಹೇರಿದ್ದು, ಹಣ ಹಿಂತೆಗೆತದ ಮೇಲೂ ನಿರ್ಬಂಧ ಹೇರಿತ್ತು. ಈ ಬೆಳವಣಿಗೆಯಿಂದಾಗಿ ಕಂಗಾಲದ ಖಾತೆದಾರರು ತಮ್ಮ ಹಣ ಹಿಂತೆಗೆದುಕೊಳ್ಳಲು ಮುಂದಾಗಿದ್ದರು. ಆದರೆ ಹಣ ಪಡೆಯುವ ಪ್ರಮಾಣವನ್ನು ಆರ್‍ಬಿಐ ಸೀಮಿತಿಗೊಳಿಸಿರುವ ಹಿನ್ನೆಲೆಯಲ್ಲಿ ಹೆಚ್ಚು ಮೊತ್ತ ಪಡೆಯಲು ಸಾಧ್ಯವಾಗದೆ ಮುರಳೀಧರ್ ಹೃದಯಾಘತದಿಂದ ಅಸುನೀಗಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ