ಕಿತ್ತೂರು ರಾಣಿ ಚೆನ್ನಮ್ಮ ಜಯಂತಿ-ಸರಳವಾಗಿ ಆಚರಿಸಲು ಶ್ರೀ ಬಸವಮೃತ್ಯುಂಜಯ ಮಹಾಸ್ವಾಮೀಜಿ ಒತ್ತಾಯ

Varta Mitra News

ಬೆಂಗಳೂರು, ಅ.19-ರಾಜ್ಯ ಸರ್ಕಾರದಿಂದ ಅ.23 ರಂದು ಆಚರಿಸಲಿರುವ ಕಿತ್ತೂರು ರಾಣಿ ಚೆನ್ನಮ್ಮ ಜಯಂತಿಯನ್ನು ಸರಳವಾಗಿ ಆಚರಿಸಿ ಜಯಂತಿ ಆಚರಣೆಯ ಅನುದಾನವನ್ನು ಸಂಪೂರ್ಣವಾಗಿ ನೆರೆ ಸಂತ್ರಸ್ತರ ನಿಧಿಗೆ ಬಳಸುವಂತೆ ಕೂಡಲಸಂಗಮದ ಲಿಂಗಾಯತ ಪಂಚಮಸಾಲಿ ಜಗದ್ಗುರು ಮಹಾ ಪೀಠದ ಶ್ರೀ ಬಸವಮೃತ್ಯುಂಜಯ ಮಹಾಸ್ವಾಮೀಜಿ ಒತ್ತಾಯಿಸಿದ್ದಾರೆ.

ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ರಾಜ್ಯದಲ್ಲಿ  ಹಿಂದೆಂದೂ ಕಾಣದಂತಹ ಪ್ರವಾಹ ಪರಿಸ್ಥಿತಿ ಉಂಟಾಗಿರುವುದರಿಂದ ಜಯಂತಿ ಹಣವನ್ನು ಸಂತ್ರಸ್ತರ ನೆರವಿಗೆ ಬಳಸಬೇಕು ಎಂದರು.

ದೇಶದ ಪ್ರಥಮ ಮಹಿಳಾ ಸ್ವಾತಂತ್ರ್ಯ ಹೋರಾಟಗಾರ್ತಿ ರಾಣಿ ಚೆನ್ನಮ್ಮನವರಿಗೆ ಹಾಗೂ ಪ್ರಥಮ ಹುತಾತ್ಮರಾದ ಸಂಗೊಳ್ಳಿರಾಯಣ್ಣ ಅವರಿಗೆ ಭಾರತರತ್ನ ಪ್ರಶಸ್ತಿಯನ್ನು ಮರಣೋತ್ತರವಾಗಿ ನೀಡಬೇಕೆಂದು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದರು.

ಹೈದರಾಬಾದ್ ಕರ್ನಾಟಕವನ್ನು ಕಲ್ಯಾಣ ಕರ್ನಾಟಕವನ್ನಾಗಿ ಘೋಷಣೆ ಮಾಡಿದ ರೀತಿಯಲ್ಲೇ ಮುಂಬೈ ಕರ್ನಾಟಕವನ್ನು ಕಿತ್ತೂರು ಕರ್ನಾಟಕವನ್ನಾಗಿ ಘೋಷಿಸಿ ಅಭಿವೃದ್ಧಿ ಪಡಿಸಬೇಕೆಂದು ರಾಜ್ಯ ಸರ್ಕಾರಕ್ಕೆ ಆಗ್ರಹಿಸಿದರು.

ರಾಜ್ಯ ಸರ್ಕಾರ 2017ರಿಂದಲೂ ರಾಣಿ ಚೆನ್ನಮ್ಮನವರ ಜಯಂತಿಯನ್ನು ತಾಲ್ಲೂಕು ಮಟ್ಟದಿಂದ ರಾಜ್ಯಮಟ್ಟದವರೆಗೂ ಆಚರಿಸುತ್ತಾ ಬಂದಿದೆ. ಈ ಜಯಂತಿಯ ಸುಮಾರು 64 ಲಕ್ಷ ರೂ.ಅನುದಾನವನ್ನು ಮ್ಯುಮಂತ್ರಿಗಳ ಪರಿಹಾರ ನಿಧಿಗೆ ನೀಡಿ ಜಿಲ್ಲಾ- ತಾಲ್ಲೂಕು ಮಟ್ಟದಲ್ಲಿ ಉಪನ್ಯಾಸ, ಗೋಷ್ಠಿಗಳ ಮೂಲಕ ಚೆನ್ನಮ್ಮನವರ ಜಯಂತಿಯನ್ನು ಸರಳವಾಗಿ ಆಚರಿಸಬೇಕು ಎಂದು ಹೇಳಿದರು.

ಇಂಗ್ಲೆಂಡ್‍ನಲ್ಲಿರುವ ಚೆನ್ನಮ್ಮನವರ ವೀರ ಖಡ್ಗವನ್ನು ರಾಜ್ಯಕ್ಕೆ ತರುವಂತೆ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಬೇಕು.ಪ್ರತಿ ವರ್ಷದಂತೆ ಅ.23ರಂದು ಬೆಳಗ್ಗೆ 10 ಗಂಟೆಗೆ ನಗರದ ಪುರಭವನದ ಮುಂಭಾಗದಲ್ಲಿ ರಾಣಿ ಚೆನ್ನಮ್ಮನವರ ಜಯಂತಿ ಆಚರಿಸಬೇಕೆಂದು ಕೋರಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ