ಉಪ ಚುನಾವಣೆ ಗೆಲ್ಲಲು ಸಿದ್ದರಾಮಯ್ಯ ಮಾಸ್ಟರ್​ ಪ್ಲಾನ್​; ಸಾಮೂಹಿಕ ನಾಯಕತ್ವದ ಪ್ರಚಾರ ತಂತ್ರ

ಬೆಂಗಳೂರು: ಅನರ್ಹ ಶಾಸಕರ ರಾಜೀನಾಮೆಯಿಂದ ಎದುರಾಗಿರುವ ಉಪಚುನಾವಣೆಯನ್ನು ಪ್ರತಿಷ್ಟೆಯ ಪಣವಾಗಿ ಸ್ವೀಕರಿಸಿರುವ ಕಾಂಗ್ರೆಸ್​, 15 ಕ್ಷೇತ್ರಗಳಲ್ಲಿ ನಡೆಯಲಿರುವ ಉಪಚುನಾವಣೆಯಲ್ಲಿ ಕನಿಷ್ಠ 10 ಸ್ಥಾನಗಳನ್ನು ಗೆಲ್ಲಲ್ಲೇಬೇಕೆಂದು ನಿರ್ಧರಿಸಿದೆ. ಇನ್ನು ವಿಪಕ್ಷ ನಾಯಕರಾದ ಸಿದ್ದರಾಮಯ್ಯ ಹೆಗಲಿಗೆ ಉಪಚುನಾವಣೆ ಜವಾಬ್ದಾರಿ ಕೂಡ ಇದ್ದು, ಉಪಚುನಾವಣೆ ಗೆಲುವಿಗಾಗಿ ಈಗಾಗಲೇ ರಣತಂತ್ರ ರೂಪಿಸಿದ್ದಾರೆ ಎನ್ನಲಾಗಿದೆ

ಪಕ್ಷದಲ್ಲಿ ಸಿದ್ದರಾಮಯ್ಯ ವಲಸಿಗ ಕಾಂಗ್ರೆಸ್ಸಿಗರು ಎಂಬ ಮನೋಭಾವವಿದೆ. ಹಿರಿಯ ಕಾಂಗ್ರೆಸ್​ ನಾಯಕರು ಸಿದ್ದರಾಮಯ್ಯ ವಿರುದ್ಧ ಅಸಮಾಧಾನಗೊಂಡಿರುವುದು ಬಹಿರಂಗವಾಗಿದೆ. ಈ ಮುನಿಸು ಹೀಗೆ ಮುಂದುವರೆದರೆ, ಅವರ ನಾಯಕತ್ವ ಹಾಗೂ ಪಕ್ಷಕ್ಕೆ ಎರಡಕ್ಕೂ ತೊಂದರೆಯಾಗಲಿದ್ದು, ಇದು ಉಪಚುನಾವಣೆ ಮೇಲೆ ಪರಿಣಾಮ ಬೀರುವುದು ಸುಳ್ಳಲ್ಲ. ಇನ್ನು ಇತ್ತೀಚೆಗೆ ಸಿದ್ದರಾಮಯ್ಯ ಕಾಂಗ್ರೆಸ್​ ಅಧ್ಯಕ್ಷೆ ಸೋನಿಯಾ ಗಾಂಧಿ ಭೇಟಿ ಮಾಡಿದ  ವೇಳೆ ಕೂಡ ಈ ವಿಷಯ ಪ್ರಸ್ತಾಪವಾಗಿದ್ದು, ಸಾಮೂಹಿಕ ನಾಯಕತ್ವದಲ್ಲಿ ಚುನಾವಣೆ ಎದುರಿಸುವಂತೆ ಸಲಹೆ ಕೂಡ ಪಡೆದಿದ್ದಾರೆ.
ಹೈಕಮಾಂಡ್​ ಸಲಹೆಯಂತೆ ಸಿದ್ದರಾಮಯ್ಯ ಕೂಡ ಚುನಾವಣಾ ಗೆಲುವಿಗೆ ಸಿದ್ಧರಾಗಿದ್ದಾರೆ. ಈ ಬಾರಿ ಕನಿಷ್ಠ 10 ಸ್ಥಾನಗಳಲ್ಲಿ ಕಾಂಗ್ರೆಸ್​ ಗೆಲುವು ಸಾಧಿಸದಿದ್ದರೆ, ಸಿದ್ದರಾಮಯ್ಯ ನಾಯಕತ್ವದ ಬಗ್ಗೆ ಕೂಡ ಅಪಸ್ವರ ಏಳುವ ಸಾಧ್ಯತೆ ಅಲ್ಲಗಳೆಯುವಂತೆ ಇಲ್ಲ. ಇದೇ ಹಿನ್ನೆಲೆ ಒಂದು ಹೆಜ್ಜೆ ಮುಂದಿಟ್ಟಿರುವ ಸಿದ್ದರಾಮಯ್ಯ ಪಕ್ಷದ ಹಿರಿಯ ನಾಯಕರನ್ನು ಒಗ್ಗೂಡಿಸಲು ಮುಂದಾಗಿದ್ದಾರೆ.
ಸದ್ಯ ಮಹಾರಾಷ್ಟ್ರ ಚುನಾವಣಾ ಪ್ರಚಾರದಲ್ಲಿ ವ್ಯಸ್ತವಾಗಿದ್ದು, ಅಲ್ಲಿಂದ ಮರಳಿದ ಬಳಿಕ ಪಕ್ಷದ ನಾಯಕರಾದ ಕೆ ಹೆಚ್ ಮುನಿಯಪ್ಪ, ಮಲ್ಲಿಕಾರ್ಜುನ ಖರ್ಗೆ, ಬಿ ಕೆ ಹರಿಪ್ರಸಾದ್, ಜಿ ಪರಮೇಶ್ವರ್ ಸೇರಿ ಇತರೆ ಮುಖಂಡರನ್ನು ಖುದ್ದಾಗಿ ಭೇಟಿಯಾಗಲಿದ್ದಾರೆ. ಈ ವೇಳೆ ನಾಯಕರಿಗೆ ಸಾಮೂಹಿಕ ನಾಯಕತ್ವದ ಮೂಲಕ ಚುನಾವಣೆ ಎದುರಿಸೋಣ ಎಂದು ಮನವೊಲಿಸಲಿದ್ದಾರೆ.
ಪಕ್ಷ ಎಂದರೆ ಅದು ಏಕ ವ್ಯಕ್ತಿ ನಾಯಕತ್ವ ಅಲ್ಲ. ಅದಕ್ಕೆ ಎಲ್ಲರ ಸಹಕಾರವೂ ಅಗತ್ಯ, ಸದ್ಯ ರಾಜ್ಯದಲ್ಲಿರುವ ಪರಿಸ್ಥಿತಿಯಲ್ಲಿ ನಮಗೆ ಈ ಗೆಲುವು ಅನಿವಾರ್ಯವಾಗಿದ್ದು, ಒಟ್ಟಾಗಿ ಚುನಾವಣೆ ಎದುರಿಸೋಣ ಎಂದು ಹಿರಿಯ ನಾಯಕರಿಗೆ ಮನವರಿಕೆ ಮಾಡಿಕೊಡಲಿದ್ದಾರೆ ಎನ್ನಲಾಗಿದೆ.

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ