ಓಕಳಿಪುರಂ ಸಿಗ್ನಲ್ ಫ್ರೀ ಕಾಮಗಾರಿ ನಿಧಾನವಾಗಿ ಸಾಗುತ್ತಿರುವ ಹಿನ್ನಲೆ-ಸಂಪೂರ್ಣ ಹದಗೆಟ್ಟಿರುವ ರಸ್ತೆಗಳು

Varta Mitra News

ಬೆಂಗಳೂರು, ಅ.14- ಕಳೆದ ನಾಲ್ಕು ವರ್ಷಗಳ ಹಿಂದೆ ಆರಂಭವಾದ ಓಕಳಿಪುರಂ ಸಿಗ್ನಲ್ ಫ್ರೀ ಕಾಮಗಾರಿ ಮುಗಿಯದೆ ನಿಧಾನವಾಗಿ ಸಾಗುತ್ತಿರುವುದರಿಂದ ರಸ್ತೆ ಸಂಪೂರ್ಣ ಹದಗೆಟ್ಟಿದ್ದು, ಜನ ಸಾಮಾನ್ಯರು ಹಿಡಿ ಶಾಪ ಹಾಕಿ ಸಂಚರಿಸುವಂತಾಗಿದೆ.

ಉತ್ತರ ಕರ್ನಾಟಕ, ಕರಾವಳಿ ಸೇರಿದಂತೆ ಸುಮಾರು 22 ಕ್ಕೂ ಹೆಚ್ಚು ಜಿಲ್ಲೆಗಳಿಗೆ ಸಂಪರ್ಕ ಕಲ್ಪಿಸುವ ಹೆದ್ದಾರಿ ಓಕಳಿಪುರಂನ ರೈಲ್ವೆ ಜಂಕ್ಷನ್ ಆಗಿದೆ.

ಬೆಂಗಳೂರಿನ ಎಲ್ಲಾ ಭಾಗಕ್ಕಿಂತಲೂ ಅತಿ ಹೆಚ್ಚು ವಾಹನ ದಟ್ಟಣೆಯಿರುವುದು ಈ ಭಾಗದಲ್ಲಿ.ಕಾಮಗಾರಿಗೂ ಮೊದಲು ಓಕಳಿಪುರಂ ಜಂಕ್ಷನ್‍ನಲ್ಲಿದ್ದ ಸಿಗ್ನಲ್‍ನಿಂದಾಗಿ ಸಂಚಾರ ದಟ್ಟಣೆ ತೀವ್ರವಾಗಿತ್ತು.

ಅದನ್ನು ಕಡಿಮೆ ಮಾಡಲು ಓಕಳಿಪುರಂ ಜಂಕ್ಷನ್‍ನಿಂದ ಫೌಂಟೆನ್ ವೃತ್ತದವರೆಗೆ ಎಂಟು ಲೇನ್ ಕಾರಿಡಾರ್ ರಸ್ತೆ ಮೇಲುಸೇತುವೆ, ಕೆಳಸೇತುವೆ ಹಾಗೂ ಅಂಡರ್‍ಪಾಸ್ ಕಾಮಗಾರಿಗಳ ಯೋಜನೆಯನ್ನು 2012ರ ಡಿಸೆಂಬರ್‍ನಲ್ಲಿ ರೂಪಿಸಲಾಯಿತು.

ಮುಖ್ಯಮಂತ್ರಿಗಳ ನಗರೋತ್ಥಾನ ಯೋಜನೆಯಡಿ ಕೈಗೆತ್ತಿಕೊಳ್ಳಲಾದ  ಇದರ ಅಂದಾಜು  ವೆಚ್ಚ 115.50 ಕೋಟಿ ರೂ. 2012ರ ಡಿಸೆಂಬರ್ 10ರಂದು ವರ್ಕ್ ಆರ್ಡರ್ ಕೊಟ್ಟು 18 ತಿಂಗಳಲ್ಲಿ ಕೆಲಸ ಮುಗಿಸಬೇಕೆಂದು ಸೂಚಿಸಲಾಗಿತ್ತು.ಆದರೆ, ಕಾಮಗಾರಿ ಆರಂಭವಾಗಿದ್ದೇ 2015 ಜೂನ್ 15ರಂದು.2016ರ ಡಿಸೆಂಬರ್ 14ರ ಒಳಗಾಗಿ ಕಾಮಗಾರಿ ಪೂರ್ಣಗೊಳಿಸುವ ಗಡುವನ್ನು ನಿಗದಿ ಮಾಡಲಾಗಿತ್ತು.

ಸರಿ ಸುಮಾರು ಮೂರು ವರ್ಷ ಕಾಲ ವಿಳಂಬವಾಗಿರುವುದರಿಂದ ಕಾಮಗಾರಿಯ ವೆಚ್ಚ ಈಗ 180 ಕೋಟಿಗೆ ತಲುಪಿದೆ.ಅಂದರೆ ಸರಿ ಸುಮಾರು 65 ಕೋಟಿಗೂ ಹೆಚ್ಚಿನ ಹೊರೆ ಸರ್ಕಾರಕ್ಕಾಗುವ ಅಂದಾಜಿದೆ.

ರೈಲ್ವೆ ಹಳಿಯ ಕೆಳಗೆ ಕಾಮಗಾರಿ ಕೈಗೊಳ್ಳಬೇಕಾಗಿದ್ದರಿಂದ ಬಹಳಷ್ಟು ದಿನ ರೈಲ್ವೆ ಇಲಾಖೆಯ ಅನುಮತಿ ಸಿಗದೆ ವಿಳಂಬವಾಯಿತು.ಅನಂತರ ಬೆಸ್ಕಾಂ, ನೀರು ಸರಬರಾಜು ಮಂಡಳಿ ಸೇರಿದಂತೆ ವಿವಿಧ ಇಲಾಖೆಗಳು ತಡೆಯೊಡ್ಡಿದ್ದವು.

ಕಾಮಗಾರಿ ಆರಂಭಕ್ಕೂ ಮುನ್ನ ಬಿಬಿಎಂಪಿ ವಿವಿಧ ಇಲಾಖೆಗಳ ನಡುವೆ ಸಮನ್ವಯತೆ ಸಾಧಿಸಿದೇ ಇದ್ದುದರಿಂದ ಕೆಲಸ ಕುಂಟುತ್ತಾ ಸಾಗಿದೆ.ಹಾಗೂ ಹೀಗೂ ಕಾಮಗಾರಿ ನಡೆಯುತ್ತಿದೆ ಎನ್ನುವ ಹಂತದಲ್ಲಿ ಸರ್ಕಾರಗಳು ಬದಲಾವಣೆಯಾಗಿ ಹಣ ಬಿಡುಗಡೆಯಲ್ಲಿ ಏರುಪೇರಾಗಿದೆ.

ಈವರೆಗೂ 70ಕೋಟಿ ಬಿಡುಗಡೆಯಾಗಿದ್ದು, ಶೇ.80ರಷ್ಟು ಕಾಮಗಾರಿ ಮುಗಿದಿದೆ.ಉಳಿದ ಹಣ ಬಿಡುಗಡೆ ವಿಳಂಬವಾಗಿದೆ ಎಂದು ಅಸಮಾಧಾನಗೊಂಡ ಗುತ್ತಿಗೆದಾರರು ಕೆಲಸವನ್ನು ಕೆಲವಷ್ಟು ದಿನ ಸ್ಥಗಿತಗೊಳಿಸಿದರು.

ಮತ್ತೆ ಕಾಮಗಾರಿ ಆರಂಭಗೊಂಡರೂ ಅದು ನಿರೀಕ್ಷಿತ ವೇಗದಲ್ಲಿ ನಡೆಯುತ್ತಿಲ್ಲ. 2016ರ ಡಿಸೆಂಬರ್‍ನಲ್ಲಿ ಮುಗಿಯಬೇಕಿದ್ದ ಕಾಮಗಾರಿಯನ್ನು 2019ರ ಡಿಸೆಂಬರ್‍ನಲ್ಲಿ ಮುಗಿಸುವುದಾಗಿ ಅಧಿಕಾರಿಗಳು ಹೇಳುತ್ತಿದ್ದಾರೆ. ಆದರೆ, ಸದ್ಯದ ಪರಿಸ್ಥಿತಿಯಲ್ಲಿ ಇನ್ನೆರಡು  ತಿಂಗಳಲ್ಲಿ ಕಾಮಗಾರಿ ಮುಗಿಯುವ ಲಕ್ಷಣಗಳು ಕಾಣಿಸುತ್ತಿಲ್ಲ.

ಜನರ ಹಿಡಿ ಶಾಪ:

ಅತಿ ಹೆಚ್ಚು ವಾಹನ ದಟ್ಟಣೆ ಇರುವ ಈ ಮಾರ್ಗದಲ್ಲಿ ಕಾಮಗಾರಿ ವಿಳಂಬವಾಗಿ ರಸ್ತೆ ಸಂಪೂರ್ಣ ಹದಗೆಟ್ಟಿದೆ.ಅಡಿಗಟ್ಟಲೆ ಆಳದ ಗುಂಡಿಗಳು ಹೆಜ್ಜೆ ಹೆಜ್ಜೆಗೆ ಸಿಗುತ್ತಿವೆ.ಜೆಲ್ಲಿಕಲ್ಲುಗಳು ಎದ್ದು ಬೈಕ್ ಸವಾರರು ಜಾರಿ ಬೀಳುತ್ತಿದ್ದಾರೆ.

ಈ ಜಂಕ್ಷನ್‍ನಲ್ಲಿ ಸಂಚಾರಿ ಪೆÇಲೀಸರು ದಂಡ ಹಾಕಲು ನಿಂತರೆ ಜನ ದಂಗೆ ಏಳುವಷ್ಟು ಜನ ಸಿಟ್ಟು ತೋರಿಸುತ್ತಿದ್ದಾರೆ.ಇದರಿಂದಾಗಿ ಪೆÇಲೀಸರೇ ಗುಂಡಿ ಮುಚ್ಚಿ ಸವಾರರಿಗೆ ಅನುಕೂಲ ಮಾಡಿಕೊಟ್ಟಿರುವ ಉದಾಹರಣೆಗಳಿವೆ.

ರಾಜಧಾನಿ ಬೆಂಗಳೂರಿನ ಕೇಂದ್ರ ಭಾಗ ಮೆಜೆಸ್ಟಿಕ್‍ಗೆ ಸಂಕರ್ಪ ಕಲ್ಪಿಸುವ ಪ್ರಮುಖ ರಸ್ತೆಯನ್ನು ದುಸ್ಥಿತಿಯಲ್ಲಿ ಬಿಟ್ಟ ಬಿಬಿಎಂಪಿ ಮತ್ತು ಗುತ್ತಿಗೆದಾರರಿಗೆ ಪ್ರತಿ ದಿನ ಸಾರ್ವಜನಿಕರು ಸಹಸ್ರ ನಾಮಾರ್ಚನೆ ಮಾಡಿ ಶಾಪ ಹಾಕುತ್ತಿದ್ದಾರೆ.

ಈ ವಾರದೊಳಗಾಗಿ ನೂತನವಾಗಿ ನಿರ್ಮಾಣವಾಗುವ ರಸ್ತೆಗಳಲ್ಲಿ ವಾಹನ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಗುವುದು.ಒಟ್ಟು ಯೋಜನೆಯ ಕಾಮಗಾರಿಯನ್ನು ಡಿಸೆಂಬರ್ ವೇಳೆಗೆ ಮುಗಿಸುವುದಾಗಿ ಬಿಬಿಎಂಪಿ ಅಧಿಕಾರಿಗಳು ತಿಳಿಸಿದ್ದಾರೆ.

ಮಳೆ ಕಾರಣದಿಂದಾಗಿ ರಸ್ತೆ ಗುಂಡಿ ಮುಚ್ಚಲು ಸಾಧ್ಯವಾಗುತ್ತಿಲ್ಲ ಎಂಬ ಕುಂಟು ನೆಪ ಹೇಳುತ್ತಿತ್ತು.ಅಪ್ಪಿತಪ್ಪಿಯೂ ಈ ರಸ್ತೆಯಲ್ಲಿ ಸಂಚರಿಸುವ ವಾಹನ ಸವಾರರಿಗೆ ಅಧಿಕಾರಿಗಳು ಸಿಕ್ಕಿದ್ದೇ ಆದರೆ ಕಾನೂನು ಸುವ್ಯವಸ್ಥೆಯ ಸಮಸ್ಯೆ ಎದುರಾಗುವ ಆತಂಕವೂ ಇದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ