ಡಿ.ಕೆ.ಶಿವಕುಮಾರ್‍ಗೆ ಕಾನೂನು ಕುಣಿಕೆ ಇನ್ನಷ್ಟು ಬಿಗಿಯಾಗುವ ಸಾಧ್ಯತೆ

ಬೆಂಗಳೂರು,ಅ.2-ಅಕ್ರಮ ಹಣದ ವಹಿವಾಟು ನಡೆಸಿದ ಆರೋಪದ ಮೇಲೆ ತಿಹಾರ್ ಜೈಲಿನಲ್ಲಿರುವ ಮಾಜಿ ಸಚಿವ ಡಿ.ಕೆ.ಶಿವಕುಮಾರ್‍ಗೆ ಕಾನೂನು ಕುಣಿಕೆ ಇನ್ನಷ್ಟು ಬಿಗಿಯಾಗುವ ಸಾಧ್ಯತೆ ಇದೆ.
ದೆಹಲಿಯ ಸಫ್ತರ್‍ಜಂಗ್ ಫ್ಲಾಟ್‍ನಲ್ಲಿ ಸಿಕ್ಕಿಬಿದ್ದ 8.50 ಕೋಟಿ ಹಣದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಮಗ್ರ ತನಿಖೆ ನಡೆಸಲು ಸಿಬಿಐಗೆ ಅವಕಾಶ ನೀಡಬೇಕೆಂದು ಜಾರಿ ನಿರ್ದೇಶನಾಲಯ(ಇಡಿ) ರಾಜ್ಯ ಸರ್ಕಾರಕ್ಕೆ ಪತ್ರ ಬರೆದಿದೆ.
1946 ದೆಹಲಿ ವಿಶೇಷ ಪೆÇಲೀಸ್ ಕಾಯ್ದೆ ಸೆಕ್ಷನ್ 6ರ ಪ್ರಕಾರ ಸಿಬಿಐ ಯಾವುದೇ ಪ್ರಕರಣದ ತನಿಖೆ ಆರಂಭಿಸುವ ಮುನ್ನ ಆಯಾ ರಾಜ್ಯ ಸರ್ಕಾರಗಳ ಅನುಮತಿ ಪಡೆಯುವುದು ಕಡ್ಡಾಯವಾಗಿದೆ.

ಅದರಂತೆ ಕೇಂದ್ರದ ಜಾರಿ ನಿರ್ದೇಶನಾಲಯದ ಹಿರಿಯ ಅಧಿಕಾರಿಯೊಬ್ಬರು ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದಿದ್ದು, 8.50 ಕೋಟಿ ನಗದು ಪ್ರಕರಣವನ್ನು ಸಿಬಿಐಗೆ ವಹಿಸುವಂತೆ ಪತ್ರದಲ್ಲಿ ಕೋರಿದ್ದಾರೆ.
ಆದರೆ ಸರ್ಕಾರ ಈ ಬಗ್ಗೆ ಯಾವುದೇ ಅಧಿಕೃತ ಆದೇಶವನ್ನು ಹೊರಡಿಸಿಲ್ಲ. ಐದು ಕೋಟಿಗೂ ಹೆಚ್ಚು ಅವ್ಯವಹಾರ ನಡೆದಿರುವುದು ಕಂಡುಬಂದಲ್ಲಿ ಸಿಬಿಐ ತನಿಖೆಗೆ ವಹಿಸಬೇಕೆಂಬ ನಿಯಮವಿದೆ.

ಶಿಷ್ಟಾಚಾರದ ಪ್ರಕಾರ ಕೇಂದ್ರದ ತನಿಖಾ ಸಂಸ್ಥೆಗಳು ಯಾವುದೇ ಪ್ರಕರಣವನ್ನು ತನಿಖೆಗೊಳಪಡಿಸುವ ಮುನ್ನ ರಾಜ್ಯ ಸರ್ಕಾರದ ಒಪ್ಪಿಗೆ ಪಡೆಯಬೇಕು.ಇತ್ತ 8.50 ಕೋಟಿ ನಗದು ಪ್ರಕರಣ ಇದಾಗಿರುವುದರಿಂದ ರಾಜ್ಯ ಸರ್ಕಾರ ಸಿಬಿಐ ತನಿಖೆಗೆ ವಹಿಸಲೇಬೇಕಾದ ಇಕ್ಕಟ್ಟಿಗೆ ಸಿಲುಕಿದೆ.
ಈಗಾಗಲೇ ಈ ಪ್ರಕರಣವನ್ನು ಜಾರಿ ನಿರ್ದೇಶನಾಲಯ ಕೈಗೆತ್ತಿಕೊಂಡಿದ್ದರೂ ಡಿ.ಕೆ.ಶಿವಕುಮಾರ್ ವಿಚಾರಣೆ ಸಂದರ್ಭದಲ್ಲಿ ಸರಿಯಾದ ಮಾಹಿತಿಯನ್ನು ನೀಡಿಲ್ಲ ಎಂದು ಖುದ್ದು ಇಡಿ ಪರ ವಕೀಲರಾದ ಕೆ.ಎನ್.ನಟರಾಜ್ ಅವರು ನ್ಯಾಯಾಲಯಕ್ಕೆ ಮಾಹಿತಿ ಒದಗಿಸಿದ್ದರು.

ಇದೊಂದು ಆರ್ಥಿಕ ಅಪರಾಧ ಪ್ರಕರಣವಾಗಿರುವುದರಿಂದ ವಿಸ್ತೃತ ತನಿಖೆ ನಡೆಸಬೇಕಾದ ಅಗತ್ಯವಿದೆ ಎಂದು ಇಡಿ ಹಿರಿಯ ಅಧಿಕಾರಿಯೊಬ್ಬರು ಮುಖ್ಯ ಕಾರ್ಯದರ್ಶಿಗೆ ಬರೆದಿರುವ ಪತ್ರದಲ್ಲಿ ಉಲ್ಲೇಖಿಸಿದ್ದಾರೆ ಎಂದು ಸರ್ಕಾರದ ಮೂಲಗಳು ತಿಳಿಸಿವೆ.
ಈಗಾಗಲೇ ಇದೇ ಪ್ರಕರಣದಲ್ಲಿ ಡಿ.ಕೆ.ಶಿವಕುಮಾರ್ ತಿಹಾರ್ ಜೈಲು ಪಾಲಾಗಿದ್ದಾರೆ.ಅವರ ನ್ಯಾಯಾಂಗ ಬಂಧನದ ಅರ್ಜಿ ವಿಚಾರಣೆಯನ್ನು ಇದೇ ತಿಂಗಳ 14ಕ್ಕೆ ಮುಂದೂಡಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ