ಗಾಂಧೀಜಿ ಮತ್ತು ಶಾಸ್ತ್ರಿಯವರ ತತ್ವ ಸಿದ್ದಾಂತ ಹಾಗೂ ಮೌಲ್ಯಗಳು ಅನುಕರುಣೀಯ-ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ

ಬೆಂಗಳೂರು,ಅ.2- ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಹಾಗೂ ಮಾಜಿ ಪ್ರಧಾನಿ ಲಾಲೂ ಬಹುದ್ದೂರ್ ಶಾಸ್ತ್ರಿ ಅವರ ತತ್ವ ಸಿದ್ದಾಂತ ಹಾಗೂ ಮೌಲ್ಯಗಳು ಅನುಕರುಣೀಯ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದರು.
ಮಹಾತ್ಮಗಾಂಧೀಜಿಯವರ 150ನೇ ಜನ್ಮ ದಿನಾಚರಣೆ ಅಂಗವಾಗಿ ವಿಧಾನಸೌಧ-ವಿಕಾಸಸೌಧ ನಡುವೆ ಇರುವ ಗಾಂಧಿ ಪ್ರತಿಮೆಗೆ ಪುಷ್ಪನಮನ ಅರ್ಪಿಸಿದರು.

ಇದೇ ವೇಳೆ ವಿಧಾನಸೌಧದ ಆವರಣದಲ್ಲಿರುವ ಲಾಲ್‍ಬಹುದ್ದೂರ್ ಶಾಸ್ತ್ರಿ ಪ್ರತಿಮೆಗೆ ಪುಷ್ಪನಮನ ಸಲ್ಲಿಸಿದ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
ಶ್ರದ್ದಾ ಪೂರ್ವಕವಾಗಿ ಮಹಾತ್ಮಗಾಂಧೀಜಿಯವರ ಜಯಂತಿಯನ್ನು ಆಚರಿಸುತ್ತಿದ್ದೇವೆ. ವಿಶ್ವ ಅಹಿಂಸಾ ದಿನವಾಗಿ ಈ ದಿನ ಆಚರಿಸಲಾಗುತ್ತಿದ್ದು, ಗಾಂಧೀಜಿಯವರ ಕಾಯಕ ನಿಷ್ಠೆ ಹಾಗೂ ಅವರ ಮೌಲ್ಯಗಳನ್ನು ಪ್ರತಿಯೊಬ್ಬರು ಅನುಸರಿಸಬೇಕು ಎಂದರು.

ಸ್ವಚ್ಛ ಭಾರತದ ಪ್ರಗತಿಗೆ ಹಾಗೂ ಸವಾಲಾಗಿರುವ ಪ್ಲಾಸ್ಟಿಕ್‍ನ್ನು ಮುಕ್ತಗೊಳಿಸಲು ಎಲ್ಲರೂ ಸಹಕರಿಸಬೇಕು ಎಂದು ಕರೆ ನೀಡಿದರು.
ಮುತ್ಸದ್ಧಿ ರಾಜಕಾರಣಿ ಲಾಲ್‍ಬಹುದ್ದೂರ್ ಶಾಸ್ತ್ರಿಯವರ ಜಯಂತಿಯನ್ನು ಆಚರಿಸುತ್ತಿದ್ದೇವೆ. ಗಾಂಧೀಜಿಯವರ ತತ್ವ ಸಿದ್ದಾಂತಗಳಿಂದ ಲಾಲ್ ಬಹುದ್ದೂರ್ ಅವರು ಪ್ರಭಾವಿತರಾಗಿದ್ದರು. ಅವರ ಮೇರು ವ್ಯಕ್ತಿತ್ವ ಮತ್ತು ಪ್ರಮಾಣಿಕತೆ ಎಲ್ಲರಿಗೂ ಆದರ್ಶಪ್ರಾಯವಾಗಿದೆ ಎಂದು ಹೇಳಿದರು.
1965ರಲ್ಲಿ ಪಾಕಿಸ್ತಾನದ ಸೇನೆಯನ್ನು ಹಿಮ್ಮೆಟ್ಟಿಸಿ ದಿಟ್ಟ ಪ್ರತ್ಯುತ್ತರವನ್ನು ನೀಡಿದ ಮಹಾನ್ ನಾಯಕರು.ಜೈ ಜವಾನ್, ಜೈ ಕಿಸಾನ್ ಎಂಬ ಘೋಷ ವಾಕ್ಯವನ್ನು ನೀಡಿದ್ದರು ಎಂದು ರಾಷ್ಟ್ರ ನಾಯಕರನ್ನು ಶ್ಲಾಘಿಸಿದರು.
ಈ ಸಂದರ್ಭದಲ್ಲಿ ಕಂದಾಯ ಸಚಿವ ಆರ್.ಅಶೋಕ್, ಮೇಯರ್ ಗೌತಮ್‍ಕುಮಾರ್ ಜೈನ್, ಉಪಮೇಯರ್ ಮೋಹನ್‍ರಾಜ್, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಸ್‍ಆರ್.ವಿಶ್ವನಾಥ್, ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯಭಾಸ್ಕರ್ ಉಪಸ್ಥಿತರಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ