ಅತ್ಯಾಚಾರ ಸಂತ್ರಸ್ತೆ ಕಾನೂನು ವಿದ್ಯಾರ್ಥಿನಿಗೆ ಕಾಂಗ್ರೇಸ್ ಬೆಂಬಲ-ಸಾರ್ವಜನಿಕ ಸಭೆಯೊಂದರ ವೇಳೆ ಗಲಬೆ-ಪೊಲೀಸರಿಂದ 80ಕ್ಕೂ ಹೆಚ್ಚು ಕಾರ್ಯಕರ್ತರ ಬಂಧನ

ಶಹಜಾನ್‍ಪುರ(ಉ.ಪ್ರ), ಸೆ.30-ಬಿಜೆಪಿ ಮುಖಂಡ ಹಾಗೂ ಕೇಂದ್ರದ ಮಾಜಿ ಸಚಿವ ಸ್ವಾಮಿ ಚಿನ್ಮಯಾನಂದ ಅವರಿಂದ ಅತ್ಯಾಚಾರಕ್ಕೆ ಒಳಗಾದರೆನ್ನಲಾದ ಕಾನೂನು ವಿದ್ಯಾರ್ಥಿನಿಗೆ ಬೆಂಬಲ ಸೂಚಿಸಿ ಇಂದು ಕಾಂಗ್ರೆಸ್ ನಡೆಸಿದ ಸಾರ್ವಜನಿಕ ಸಭೆಯೊಂದರ ವೇಳೆ ಗಲಭೆ ಉಂಟಾಗಿ 80ಕ್ಕೂ ಹೆಚ್ಚು ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದ್ದಾರೆ.

ಈ ಘಟನೆಯಿಂದಾಗಿ ಶಹಜಾನ್‍ಪುರ್ ಕೆಲವೆಡೆ ಉದ್ವಿಗ್ನ ವಾತಾವರಣ ಉಂಟಾಗಿದ್ದು, ವ್ಯಾಪಕ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.

ಅತ್ಯಾಚಾರ ಸಂತ್ರಸ್ತೆ ಕಾನೂನು ವಿದ್ಯಾರ್ಥಿನಿಗೆ ಬೆಂಬಲ ಸೂಚಿಸಿ ಕಾಂಗ್ರೆಸ್ ಉತ್ತರಪ್ರದೇಶದಲ್ಲಿ ಬೃಹತ್ ರ್ಯಾಲಿ ಹಮ್ಮಿಕೊಂಡಿದ್ದು, ಇಂದು ಪೂರ್ವಭಾವಿಯಾಗಿ ಶಹಜಾನ್‍ಪುರ್‍ನಲ್ಲಿ ಕಾಂಗ್ರೆಸ್ ಸಭೆಯೊಂದು ನಡೆಯುತ್ತಿತ್ತು. ಈ ಸಂದರ್ಭದಲ್ಲಿ ಕೆಲ ಉದ್ರಿಕ್ತ ಕಾರ್ಯಕರ್ತರು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸರ್ಕಾರದ ವಿರುದ್ಧ ಘೋಷಣೆ ಕೂಗಿ, ಪ್ರತಿಭಟನೆ ತೀವ್ರಗೊಳಿಸಲು ಯತ್ನಿಸಿದರು. ಪರಿಸ್ಥಿತಿ ವಿಕೋಪಕ್ಕೆ ಹೋಗುವುದನ್ನು ತಪ್ಪಿಸಲು ಪೊಲೀಸರು ಮುನ್ನೆಚ್ಚರಿಕೆ ಕ್ರಮವಾಗಿ 80 ಕಾಂಗ್ರೆಸ್ ಕಾರ್ಯಕರ್ತರನ್ನು ಬಂಧಿಸಿದರು.

ಈ ಸಂದರ್ಭದಲ್ಲಿ ಪೊಲೀಸರು ಮತ್ತು ಕಾರ್ಯಕರ್ತರ ನಡುವೆ ವಾದ-ವಾಗ್ವಾದ ನಡೆದು ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು.

ಕಾಂಗ್ರೆಸ್ ಕಾರ್ಯಕರ್ತರ ಬಂಧನದ ಕ್ರಮವನ್ನು ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಖಂಡಿಸಿದ್ದಾರೆ. ಇದು ಉತ್ತರ ಪ್ರದೇಶ ಸರ್ಕಾರದ ದುಂಡಾವರ್ತಿ ಕ್ರಮ ಅನ್ಯಾಯದ ವಿರುದ್ಧ ಪ್ರತಿಭಟಿಸಲು ಮುಂದಾದವರನ್ನು ಬಂಧಿಸಲು ಕಾನೂನಿನ ದುರುಪಯೋಗಪಡಿಸಿಕೊಳ್ಳಲಾಗುತ್ತಿದೆ ಎಂದು ಆರೋಪಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ