ಸದ್ಯದಲ್ಲೇ ಸಿಎಂ ಸುತ್ತಲಿನ ಸಿಬ್ಬಂದಿಗೆ ಕೊಕ್

ಬೆಂಗಳೂರು, ಸೆ.29- ಮುಖ್ಯಮಂತ್ರಿ ಯಡಿಯೂರಪ್ಪ ಅವರ ಆಪ್ತರು, ಶಾಸಕರ ಸಮನ್ವಯಕ್ಕೆ ಅಡ್ಡಿಪಡಿಸುತ್ತಿರುವ ಆರೋಪದ ಹಿನ್ನೆಲೆಯಲ್ಲಿ ಸುತ್ತಮುತ್ತಲಿನ ಅಧಿಕಾರಿಗಳ ಬದಲಾವಣೆಗೆ ಯಡಿಯೂರಪ್ಪ ನಿರ್ಧರಿಸಲಿದ್ದಾರೆ.

ಹೀಗಾಗಿ ಸದ್ಯದಲ್ಲೇ ಸಿಎಂ ಸುತ್ತಲಿನ ಸಿಬ್ಬಂದಿಗೆ ಕೊಕ್ ನೀಡಲಾಗುತ್ತಿದೆ. ಸಮಸ್ಯೆ ಹೇಳಿಕೊಂಡು ಬರುವ ಬಿಎಸ್‍ವೈ ಆಪ್ತರು, ಶಾಸಕರು, ನಾಯಕರ ಅಹವಾಲುಗಳನ್ನು ಸರಿಯಾದ ರೀತಿಯಲ್ಲಿ ಸಿಎಂಗೆ ತಲುಪಿಸುತ್ತಿಲ್ಲ ಎನ್ನುವ ಆರೋಪ ಸಿಎಂ ಕಚೇರಿ, ನಿವಾಸದಲ್ಲಿನ ಸರ್ಕಾರಿ ಸಿಬ್ಬಂದಿಯನ್ನು ಸಂಕಷ್ಟಕ್ಕೆ ಸಿಲುಕುವಂತೆ ಮಾಡಿದೆ.

ಸಮಸ್ಯೆಗಳನ್ನು ಹೊತ್ತು ಸಿಎಂ ಮುಂದೆ ದೂರು ನೀಡಲು ಬರುವ ಸಾರ್ವಜನಿಕರ ದೂರನ್ನು ಆಲಿಸಿ ಸಿಎಂಗೆ ಸಮರ್ಪಕವಾಗಿ ಮಾಹಿತಿ ನೀಡುವಲ್ಲಿ ಅಧಿಕಾರಿಗಳು ವಿಫಲರಾಗುತ್ತಿದ್ದು, ಅಧಿಕಾರಿಗಳ ಜತೆ ಸಿಎಂ ಸಭೆಯಲ್ಲಿದ್ದಾಗ ಪಕ್ಷದ ಶಾಸಕರು ಸಿಎಂ ಭೇಟಿ ಮಾಡಲು ಬಂದಾಗಲೂ ಸರಿಯಾಗಿ ಸಿಎಂ ಜೊತೆ ಅಧಿಕಾರಿಗಳು ಸಂವಹನ ಮಾಡುತ್ತಿಲ್ಲ.

ಸಂವಹನ ಕುರಿತು ಸಿಎಂ ಸುತ್ತಮುತ್ತಲಿರುವ ಅಧಿಕಾರಿಗಳ ಬಗ್ಗೆ ಪಕ್ಷದ ಶಾಸಕರು ಬಿಎಸ್‍ವೈಗೆ ದೂರು ನೀಡಿದ್ದಾರೆ. ಸಿಬ್ಬಂದಿಯ ಈ ವರ್ತನೆಗೆ ಸಿಡಿಮಿಡಿಗೊಂಡಿರುವ ಸಿಎಂ ಇದೀಗ ತಮ್ಮ ಸುತ್ತಮುತ್ತಲಿನ ಸಿಬ್ಬಂದಿ ಬದಲಾಯಿಸಲು ನಿರ್ಧರಿಸಿದ್ದಾರೆ.

ಸದ್ಯದಲ್ಲೇ ಹಾಲಿ ಸಿಬ್ಬಂದಿ ವರ್ಗಾವಣೆಗೊಳಿಸಿ ಬೇರೆ ಅಧಿಕಾರಿಗಳನ್ನು ಯಡಿಯೂರಪ್ಪ ನೇಮಿಸಿಕೊಳ್ಳಲಿದ್ದಾರೆ. ಸಿಎಂ ಕಚೇರಿ, ವಿಧಾನಸೌಧ ಹಾಗೂ ತಮ್ಮ ಅಧಿಕೃತ ನಿವಾಸದಲ್ಲಿನ ಸಿಬ್ಬಂದಿ ಬದಲಾಗಲಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ