ಫೋನ್ ಟ್ಯಾಪಿಂಗ್ ಪ್ರಕರಣ; ಎಡಿಜಿಪಿ ಆಲೋಕ್ ಕುಮಾರ್ ವಿಚಾರಣೆ ನಡೆಸಿದ ಸಿಬಿಐ!

ಬೆಂಗಳೂರು; ರಾಜ್ಯವನ್ನೇ ಬೆಚ್ಚಿ ಬೀಳಿಸಿದ್ದ ಫೋನ್ ಟ್ಯಾಪಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಅಧಿಕಾರಿಗಳು ಇಂದು ಹಿರಿಯ ಐಪಿಎಸ್ಅಧಿಕಾರಿ ಎಡಿಜಿಪಿ ಆಲೋಕ್ ಕುಮಾರ್ ಅವರ ವಿಚಾರಣೆ ನಡೆಸಿದೆ.

ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಏರುತ್ತಿದ್ದಂತೆ ನಗರದ ಪೊಲೀಸ್ ಆಯುಕ್ತರಾಗಿ ನೇಮಕವಾಗಿದ್ದ ಆಲೋಕ್ ಕುಮಾರ್ ಅವರನ್ನು ಕೇವಲ 45 ದಿನಗಳಲ್ಲೇ ಕರ್ನಾಟಕ ಮೀಸಲು ಪೊಲೀಸ್ (ಕೆಎಸ್ಆರ್ಪಿ) ಇಲಾಖೆಗೆ ಎಡಿಜಿಪಿ ಯಾಗಿ ವರ್ಗಾವಣೆ ಮಾಡಲಾಗಿತ್ತು. ಅಲ್ಲದೆ, ಆ ಜಾಗಕ್ಕೆ ನಗರದ ನೂತನ ಪೊಲೀಸ್ ಆಯುಕ್ತರಾಗಿ ಭಾಸ್ಕರ್ ರಾವ್ ಅವರನ್ನು ನೇಮಕ ಮಾಡಲಾಗಿತ್ತು.

ಆಲೋಕ್ ಕುಮಾರ್ ಅವರನ್ನು ವರ್ಗಾವಣೆ ಮಾಡುತ್ತಿದ್ದಂತೆ ಅವರು ತಮ್ಮ ವರ್ಗಾವಣೆ ಆದೇಶದ ವಿರುದ್ಧ ರದ್ದು ಕೋರಿ ನ್ಯಾಯಾಲಯದ ಮೆಟ್ಟಿಲೇರಿದ್ದರು. ಇದೇ ಸಂದರ್ಭದಲ್ಲಿ ಐಪಿಎಸ್ ಅಧಿಕಾರಿ ಭಾಸ್ಕರ್ ರಾವ್ ನಗರ ಪೊಲೀಸ್ ಕಮಿಷನರ್ ಹುದ್ದೆಗೆ ಲಾಭಿ ಮಾಡಿದ್ದರು ಎನ್ನಲಾದ ಕೆಲವು ಆಡಿಯೋಗಳು ಸಹ ಸೋರಿಕೆಯಾಗಿದ್ದವು.

ಇದು ರಾಜ್ಯ ರಾಜಕಾರಣದಲ್ಲಿ ದೊಡ್ಡ ಮಟ್ಟದ ಸಂಚಲನವನ್ನೇ ಸೃಷ್ಟಿ ಮಾಡಿತ್ತು.

ಭಾಸ್ಕರ್ ರಾವ್ ಆಡಿಯೋ ಸೋರಿಕೆ ಸದ್ದು ಮಾಡುತ್ತಿದ್ದಂತೆ ಅನೇಕ ರಾಜಕೀಯ ನಾಯಕರುಗಳು ಚುನಾವಣೆ ಸಂದರ್ಭದಲ್ಲಿ ತಮ್ಮ ಮೊಬೈಲ್ ಕರೆಗಳನ್ನೂ ಸಹ ಕದ್ದಾಲಿಸಿರುವ ಸಾಧ್ಯತೆ ಇದೆ ಎಂದು ಅನುಮಾನ ವ್ಯಕ್ತಪಡಿಸಿದ್ದರು.

ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ರಾಜ್ಯ ಸರ್ಕಾರ ಈ ಪ್ರಕರಣದ ತನಿಖೆಯನ್ನು ಸಿಬಿಐ ತನಿಖೆಗೆ ವಹಿಸಿತ್ತು. ಕಳೆದ ಆಗಸ್ಟ್​.30 ರಂದು ಪ್ರಕರಣ ಕುರಿತು ಎಫ್​ಐಆರ್​ ದಾಖಲಿಸಿಕೊಂಡಿರುವ ಸಿಬಿಐ ಅಧಿಕಾರಿಗಳು ಕಳೆದ ನಾಲ್ಕು ವಾರಗಳಿಂದ ಪ್ರಕರಣದ ಕುರಿತ ಎಲ್ಲಾ ಮಾಹಿತಿಯನ್ನು ಕಲೆಹಾಕುತ್ತಿದ್ದಾರೆ. ಅದರ ಭಾಗವಾಗಿ ಇಂದು ಎಡಿಜಿಪಿ ಆಲೋಕ್ ಕುಮಾರ್ ಅವರ ವಿಚಾರಣೆಯನ್ನೂ ನಡೆಸಲಾಗುತ್ತಿದೆ.

ಫೋನ್ ಟ್ಯಾಪಿಂಗ್ ಹಗರಣಕ್ಕೆ ಸಂಬಂಧಿಸಿದಂತೆ ಆಗಸ್ಟ್.30 ರಂದು ಎಪ್ಐಆರ್ ದಾಖಲಿಸಿಕೊಂಡಿರುವ ಸಿಬಿಐ ಮಿಂಚಿನ ವೇಗದಲ್ಲಿ ತನಿಖೆ ನಡೆಸುತ್ತಿದೆ. ಎಡಬಿಡದೇ ನಿರಂತರವಾಗಿ ಮಾಹಿತಿ ಕಲೆ ಹಾಕುವುದನ್ನು ಮುಂದುವರಿಸಿರುವ ಸಿಬಿಐ ಅಧಿಕಾರಿಗಳು ಇದೀಗ ಪ್ರಕರಣದ ಕೇಂದ್ರ ಬಿಂದು ಮಾಜಿ ನಗರ ಪೊಲೀಸ್ ಆಯುಕ್ತ ಆಲೋಕ್ ಕುಮಾರ್ ಅವರ ವಿಚಾರಣೆಗೆ ಮುಂದಾಗಿದೆ.

ಇಂದು ಬೆಳ್ಳಂ ಬೆಳಗ್ಗೆ ಆಲೋಕ್ ಕುಮಾರ್ ಮನೆಗೆ ಭೇಟಿ ನೀಡಿರುವ ಸಿಬಿಐ ಅಧಿಕಾರಿಗಳು ಅವರ ಮನೆಯಲ್ಲೇ ವಿಚಾರಣೆ ನಡೆಸಿದ್ದಾರೆ. ವಿಚಾರಣೆ ವೇಳೆ ಫೋನ್ ಟ್ಯಾಪಿಂಗ್ ಮಾಡಲು ಸೂಚಿಸಿದ್ಯಾರು..? ಫೋನ್ ಟ್ಯಾಪಿಂಗ್ ಗೆ ಅಧಿಕೃತ ಆದೇಶವಿತ್ತಾ..? ಇಲ್ಲಾ ಮೌಖಿಕವಾದ ಸೂಚನೆ ಮೆರೆಗೆ ಟ್ಯಾಪಿಂಗ್ ನಡೆದಿದೆಯಾ..? ಯಾವ ಉದ್ದೇಶಕ್ಕೆ ಲೀಕ್ ಮಾಡಲಾಗಿದೆ..?

ಅಸಲಿಗೆ ಫೋನ್ ಟ್ಯಾಪಿಂಗ್ ಹಿಂದಿನ ಉದ್ದೇಶವೇನು..? ಫೋನ್ ಟ್ಯಾಪ್ ಬಳಿಕ ಮಾಹಿತಿಯನ್ನು ಯಾರಿಗೆ ರವಾನಿಸಲಾಗುತ್ತಿತ್ತು..? ಯಾವ-ಯಾವ ಪ್ರಮುಖ ವ್ಯಕ್ತಿಗಳ ಫೋನ್ ಟ್ಯಾಪ್ ಮಾಡಲಾಗಿದೆ. ಆಡಿಯೋ ಒಳಗೊಂಡ ಪೆನ್ ಡ್ರೈವ್ ಯಾರಿಗೆ ನೀಡಲಾಗಿತ್ತು..? ಎಂಬಿತ್ಯಾದಿ ಪ್ರಶ್ನೆಗಳನ್ನು ಮುಂದಿಟ್ಟಿದ್ದಾರೆ.
ಅಲ್ಲದೆ, ಆಲೋಕ್ ಕುಮಾರ್ ಮನೆಯಲ್ಲಿ ಪೋನ್ ಟ್ಯಾಪಿಂಗ್​ಗೆ ಸಂಬಂಧಿಸಿದಂತೆ ಒಂದು ಡೈರಿಯನ್ನು ವಶಪಡಿಸಿಕೊಂಡಿರುವ ಸಿಬಿಐ ಅಧಿಕಾರಿಗಳು, ಈ ಪ್ರಕರಣಕ್ಕೆ ಸಂಬಂಧಿಸಿದ ಪೆನ್​ ಡ್ರೈವ್​ಗಾಗಿ ಶೋಧ ನಡೆಸುತ್ತಿದ್ದಾರೆ.

ಈ ಪ್ರಕರಣ ದಿನದಿಂದ ದಿನಕ್ಕೆ ಹೊಸ ಆಯಾಮ ಪಡೆಯುತ್ತಿದ್ದು, ಇದೀಗ ಆಲೋಕ್ ಕುಮಾರ್ ಗೆ ಉರುಳಾಗಿದೆ. ಇದೇ ಪ್ರಕರಣ ಭವಿಷ್ಯದಲ್ಲಿ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರಿಗೂ ಕಂಟಕವಾಗಿ ಕಾಡಿದರೂ ಅಚ್ಚರಿ ಇಲ್ಲ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ