ಪ್ರವಾಸಿಗರು ದಸರಾ ಉತ್ಸವ ವೀಕ್ಷಿಸಲು ಬಿಗಿ ಭದ್ರತೆ-ನಗರ ಪೊಲೀಸ್ ಆಯುಕ್ತ ಕೆ.ಟಿ.ಬಾಲಕೃಷ್ಣ

ಮೈಸೂರು, ಸೆ.24- ಈ ಬಾರಿಯ ದಸರಾದಲ್ಲಿ ಯಾವುದೇ ಆತಂಕ ಇಲ್ಲ. ಪ್ರವಾಸಿಗರು ನೆಮ್ಮದಿಯಾಗಿ ದಸರಾ ಉತ್ಸವ ವೀಕ್ಷಿಸಲು ಬಿಗಿ ಭದ್ರತೆ ಒದಗಿಸಲಾಗುವುದು ಎಂದು ನಗರ ಪೊಲೀಸ್ ಆಯುಕ್ತ ಕೆ.ಟಿ.ಬಾಲಕೃಷ್ಣ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದಸರಾದಲ್ಲಿ ಯಾವುದೇ ರೀತಿಯ ಅಹಿತಕರ ಘಟನೆಗಳು ಉದ್ಭವಿಸುವುದಿಲ್ಲ. ಶಾಂತಿಯುತ ಹಾಗೂ ಸುರಕ್ಷಿತವಾಗಿ ದಸರಾ ನಡೆಯಲಿದೆ. ಪ್ರವಾಸಿಗರು ಯಾವುದೇ ಅಂಜಿಕೆ ಇಲ್ಲದೆ ದಸರಾದ ಎಲ್ಲಾ ಕಾರ್ಯಕ್ರಮಗಳಲ್ಲೂ ಭಾಗವಹಿಸಬೇಕೆಂದು ಮನವಿ ಮಾಡಿದರು.

ದಸರಾ ಪ್ರಯುಕ್ತ ಎರಡು ಹಂತಗಳಲ್ಲಿ ಪೊಲೀಸ್ ಭದ್ರತೆಯನ್ನು ಕೈಗೊಳ್ಳಲಾಗಿದೆ. ಸೆ.29ರಿಂದ ಅ.5ರವರೆಗೆ ಹಾಗೂ ಅ.6ರಿಂದ ಅ.8ರವರೆಗೆ ಎರಡು ಹಂತದಲ್ಲಿ ಪೆÇಲೀಸ್ ಭದ್ರತೆ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.

ಮೈಸೂರು ನಗರದಿಂದ 2978, ಹೊರ ಜಿಲ್ಲೆಗಳಿಂದ 4429 ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ, ಒಂದು ಸಾವಿರ ಗೃಹರಕ್ಷಕ ದಳದ ಸಿಬ್ಬಂದಿ ಸೇರಿದಂತೆ ಒಟ್ಟು 8407 ಪೊಲೀಸರನ್ನು ಭದ್ರತೆಗೆ ನೇಮಿಸಲಾಗುವುದು ಎಂದು ತಿಳಿಸಿದರು.

ಈ ಬಾರಿ ದಸರಾದಲ್ಲಿ ಭದ್ರತೆಗಾಗಿ ಗರುಡಪೋರ್ಸ್, ಕಮಾಂಡೋ ಪಡೆಗಳು, ಬಾಂಬ್ ನಿಷ್ಕ್ರಿಯ ದಳ, ಶ್ವಾನದಳ ಸೇರಿದಂತೆ ಪ್ರಮುಖ ಸ್ಥಳಗಳಲ್ಲಿ ಬಾಡಿಒರ್ನ್ ಕ್ಯಾಮೆರಾಗಳು, ಲಾಂಗ್ ಡಿಸ್ಟೆನ್ಸ್ ವಿಡಿಯೋಗ್ರಫಿ, ಮೊಬೈಲ್ ಕಮಾಂಡ್ ಸೆಂಟರ್ ವಾಹನ ಬಳಕೆ ಮಾಡಲಾಗುವುದು ಎಂದರು.

ಹೊರ ರಾಜ್ಯ ಹಾಗೂ ವಿದೇಶಿ ಪ್ರವಾಸಿಗರಿಗಾಗಿ 20 ಸ್ಥಳಗಳಲ್ಲಿ ಪೊಲೀಸ್ ಸಹಾಯ ಕೇಂದ್ರಗಳನ್ನು ತೆರೆಯಲಾಗುತ್ತಿದೆ. ಈ ಕೇಂದ್ರಗಳಲ್ಲಿ ಬೆಳಗ್ಗೆ 9ರಿಂದ ರಾತ್ರಿ 10 ಗಂಟೆವರೆಗೆ ಪ್ರವಾಸಿಗರಿಗೆ ಪ್ರವಾಸಿ ಮಿತ್ರರರು, ಪ್ರವಾಸೋದ್ಯಮ ವಿಭಾಗದ ವಿದ್ಯಾರ್ಥಿಗಳು ಹಾಗೂ ಎನ್‍ಸಿಸಿ ವಿದ್ಯಾರ್ಥಿಗಳು ಮಾಹಿತಿ ನೀಡಲಿದ್ದಾರೆ ಎಂದು ಹೇಳಿದರು.

ಈ ಬಾರಿ ದಸರಾ ಸಂದರ್ಭದಲ್ಲಿ 15ರಿಂದ 20 ಲಕ್ಷ ಮಂದಿ ಆಗಮಿಸುವ ಸಾಧ್ಯತೆ ಇದೆ. ಪ್ರತಿದಿನ 4ರಿಂದ 5 ಲಕ್ಷ ಮಂದಿ ಬರುವ ಸಾಧ್ಯತೆ ಇದೆ ಎಂದು ಬಾಲಕೃಷ್ಣ ತಿಳಿಸಿದರು.

ಜಂಬೂಸವಾರಿ ಮೆರವಣಿಗೆ ವೀಕ್ಷಣೆಗಾಗಿ ಅರಮನೆ ಆವರಣದಲ್ಲಿ ವಿಐಪಿಗಳೂ ಸೇರಿದಂತೆ ಪಾಸ್ ಹಾಗೂ ಟಿಕೆಟ್‍ಗಳು ಸೇರಿ 21 ಸಾವಿರ ಆಸನಗಳ ವ್ಯವಸ್ಥೆ ಮಾಡಲಾಗಿದೆ. ಪಾಸ್ ಹಾಗೂ ಟಿಕೆಟ್‍ಗಳು ಬಾರ್‍ಕೋಡಿಂಗ್ ವ್ಯವಸ್ಥೆ ಹೊಂದಿದ್ದು, ಅವುಗಳ ನಕಲಿ ಸಾಧ್ಯವಿಲ್ಲ. ಪ್ರವೇಶಧ್ವಾರದಲ್ಲಿ ಟಿಕೆಟ್-ಪಾಸ್‍ಗಳನ್ನು ಸ್ಕ್ಯಾನ್ ಮಾಡಿಯೇ ಒಳ ಬಿಡಲಾಗುತ್ತದೆ ಎಂದು ಆಯುಕ್ತರು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಡಿಸಿಪಿಗಳಾದ ಮುತ್ತುರಾಜ್, ಕವಿತಾ, ಚನ್ನಯ್ಯ ಹಾಗೂ ಮೌಂಟೆಡ್ ಕಮಾಂಡೆಂಟ್ ನಾಗರಾಜು ಉಪಸ್ಥಿತರಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ