ಮಹಾರಾಷ್ಟ್ರ-ಹರಿಯಾಣ ವಿಧಾನಸಭೆ ಚುನಾವಣೆ; ಇಂದು ದಿನಾಂಕ ಪ್ರಕಟ ಸಾಧ್ಯತೆ

ಹೊಸದಿಲ್ಲಿ: ಮಹಾರಾಷ್ಟ್ರ ಹಾಗೂ ಹರಿಯಾಣ ರಾಜ್ಯಗಳಿಗೆ ನಡೆಯಬೇಕಿರುವ ವಿಧಾನಸಭೆ ಚುನಾವಣೆಗಳ ದಿನಾಂಕ ಇಂದು ಪ್ರಕಟಗೊಳ್ಳುವ ಸಾಧ್ಯತೆ ಇದೆ. ಚುನಾವಣಾ ಆಯೋಗ ಇಂದು ಮಧ್ಯಾಹ್ನ ಸುದ್ದಿಗೋಷ್ಠಿ ಕರೆದಿದ್ದು, ಈ ವೇಳೆ ಸಂಪೂರ್ಣ ಮಾಹಿತಿ ಸಿಗಲಿದೆ.
ಮಹಾರಾಷ್ಟ್ರದ 288 ವಿಧಾನಸಭೆ ಕ್ಷೇತ್ರಗಳಿಗೆ ಹಾಗೂ ಹರಿಯಾಣದ 90 ಕ್ಷೇತ್ರಗಳಿಗೆ ಚುನಾವಣೆ ನಡೆಯಬೇಕಿದೆ. ಮೂಲಗಳ ಪ್ರಕಾರ ಹರಿಯಾಣದಲ್ಲಿ ಒಂದು ಹಾಗೂ ಮಹಾರಾಷ್ಟ್ರದಲ್ಲಿ ಎರಡು ಹಂತಗಳಲ್ಲಿ ಮತದಾನ ನಡೆಯಲಿದೆ.
ಮುಖ್ಯ ಚುನಾವಣಾ ಆಯುಕ್ತ ಸುನಿಲ್​ ಅರೋರಾ, ಚುನಾವಣಾ ಆಯುಕ್ತ ಅಶೋಕ್​ ಹಾಗೂ ಸುಶಿಲ್​ ಚಂದ್ರಾ ತಿಂಗಳ ಆರಂಭದಲ್ಲಿ ಮಹಾರಾಷ್ಟ್ರಕ್ಕೆ ಭೇಟಿ ನೀಡಿ ಚುನಾವಣೆ ಸಿದ್ಧತೆ ಬಗ್ಗೆ ಪರಿಶೀಲನೆ ನಡೆಸಿದ್ದರು.

ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಇವಿಎಂ ಬಳಕೆ ಮಾಡಲು ವಿಪಕ್ಷಗಳು ವಿರೋಧ ವ್ಯಕ್ತಪಡಿಸಿದ್ದವು. ಇದು ಸಾಧ್ಯವಿಲ್ಲ. ಬ್ಯಾಲೆಟ್​ ಪೇಪರ್​ಗಳು ಈಗ ಇತಿಹಾಸ ಎಂದು ಸುನಿಲ್​ ಅರೋರ ಹೇಳಿದ್ದರು. ಈ ಮೂಲಕ ಈ ಬಾರಿಯ ಚುನಾವಣೆಯಲ್ಲಿ ಮತದಾನಕ್ಕೆ ಇವಿಎಂ ಬಳಕೆ ಮಾಡಲಾಗುತ್ತದೆ ಎನ್ನುವುದನ್ನು ಸ್ಪಷ್ಟಪಡಿಸಿದ್ದರು. ಚುನಾವಣೆ ದಿನಾಂಕ ಘೋಷಣೆ ಆದ ಬೆನ್ನಲ್ಲೇ ನೀತಿ ಸಂಹಿತೆ ಜಾರಿಗೆ ಬರಲಿದೆ. ಈ ವೇಳೆ ಸರ್ಕಾರ ಯಾವುದೇ ಹೊಸ ಘೋಷಣೆ ಮಾಡಲು ಸಾಧ್ಯವಿಲ್ಲ.
ಕಳೆದ ಬಾರಿ ಮಹಾರಾಷ್ಟ್ರ-ಹರಿಯಾಣ ಚುನಾವಣೆ ಸೆ.12ರಂದು ನಡೆದಿತ್ತು. ಮತ ಎಣಿಕೆ ಅಕ್ಟೋಬರ್​ 15ರಂದು ನಡೆದಿತ್ತು ಹಾಗೂ ಫಲಿತಾಂಶ ಅ.19ರಂದು ಘೋಷಣೆ ಆಗಿತ್ತು. ಶಿವಸೇನೆ ಜೊತೆ ಸೇರಿ ಬಿಜೆಪಿ ಮಹಾರಾಷ್ಟ್ರದಲ್ಲಿ ಸರ್ಕಾರ ರಚನೆ ಮಾಡಿದರೆ, ಹರಿಯಾಣದಲ್ಲಿ ಬಿಜೆಪಿ ಆಡಳಿತದಲ್ಲಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ