ಜೇಡಗಳು ಮನುಷ್ಯರಿಗೆ ಅಪಾಯಕಾರಿಯಲ್ಲ ಬದಲಿಗೆ ಅವರಿಗೆ ಸಹಕಾರಿ

ವಾಷಿಂಗ್ಟನ್, ಸೆ.18- ಜೇಡ- ಕೀಟಲೋಕದ ವಿಸ್ಮಯ ಜೀವಿ. ಬಲೆ ಹೆಣೆದು ಅದರೊಳಗೆ ಬೀಳುವ ಹುಳು-ಹುಪ್ಪಟೆ ಮತ್ತು ಇತರ ಕೀಟಗಳನ್ನು ತಿನ್ನುವ ಪರಭಕ್ಷಕ ಜೇಡದ ಬಗ್ಗೆ ಜನರಲ್ಲಿ ಬಹು ಹಿಂದಿನಿಂದಲೂ ತಪ್ಪು ಕಲ್ಪನೆಗಳಿವೆ.

ಎಂಟು-ಹತ್ತು ಕಾಲುಗಳನ್ನು ಹೊಂದಿರುವ ಭಯ ಮೂಡಿಸುವ ರೀತಿಯಲ್ಲಿ ಬಲೆಗಳನ್ನು ಹೆಣೆಯುವ ಜೇಡಗಳಲ್ಲಿ ಕೆಲ ಜಾತಿ ಸ್ಪೈಡರ್‍ಗಳು ವಿಷಕಾರಿ ಮತ್ತು ಅಪಾಯಕಾರಿ ನಿಜ. ಆದರೆ, ಎಲ್ಲ ಜೇಡಗಳು ಮನುಷ್ಯರಿಗೆ ಮಾರಕವಲ್ಲ.

ವಾಸ್ತವ ಸಂಗತಿ ಎಂದರೆ ಜೇಡ ಮನುಷ್ಯನ ಮಿತ್ರ ಎಂಬುದು ಅನೇಕ ಜನರಿಗೆ ಗೊತ್ತಿಲ್ಲ. ಮನೆಗಳು ಮತ್ತಿತರ ಸ್ಥಳಗಳಲ್ಲಿ ವಾಸ ಮಾಡುತ್ತ ಬಲೆ ಹೆಣೆಯುವ ಜೇಡಗಳು ಮಾನವರಿಗೆ ನಿರುಪದ್ರವಿ ಜೀವಿಗಳು. ಆದರೆ, ಕೆಲವರು ಮೂಢನಂಬಿಕೆಗಳು ಮತ್ತು ತಪ್ಪು ಕಲ್ಪನೆಯಿಂದ ಈ ಅದ್ಭುತ ಕೀಟಗಳನ್ನು ನೋಡಿದಾಕ್ಷಣ ಕೊಲ್ಲುತ್ತಾರೆ. ನಾವು ಮಾಡುತ್ತಿರುವುದು ತಪ್ಪು. ಇವುಗಳನ್ನು ಕೊಲ್ಲುವುದಕ್ಕೆ ಮುನ್ನ ಒಮ್ಮೆ ಯೋಚಿಸಿ ಎಂದು ಅಮೆರಿಕದ ಖ್ಯಾತ ಕೀಟಶಾಸ್ತ್ರಜ್ಞರೊಬ್ಬರು ಅತ್ಯಂತ ಮಹತ್ವದ ಮಾಹಿತಿ ನೀಡಿದ್ದಾರೆ.

ನಮ್ಮ ಮನೆಯಲ್ಲಿ ವಾಸಿಸುವ ಜೇಡಗಳು ರೋಗಕಾರಕ. ಅದರಲ್ಲೂ ಮನುಷ್ಯರಿಗೆ ಮಾರಕವಾದ ಸೊಳ್ಳೆ ಮತ್ತಿತರ ಕೀಟ ಹಾಗೂ ಹುಳು-ಹುಪ್ಪಟೆಗಳನ್ನು ಭಕ್ಷಿಸುತ್ತವೆ. ಇದರಿಂದ ಮನುಷ್ಯರಿಗೆ ಪ್ರಯೋಜನವಾಗುತ್ತದೆ ಅಲ್ಲವೆ ಎಂದು ಅವರು ಪ್ರಶ್ನಿಸಿದ್ದಾರೆ.

ಮನುಷ್ಯರ ರಕ್ತ ಹೀರುವ ಅಪಾಯಕಾರಿ ಸೊಳ್ಳೆಗಳು ಹಾಗೂ ಮಲೇರಿಯಾ, ಡೆಂಘೀ ಮೊದಲಾದ ಮಾರಕ ರೋಗಗಳಿಗೆ ಕಾರಣವಾಗುವ ಮಸ್ಕಿಟೋಗಳನ್ನು ಜೇಡ ಭಕ್ಷಿಸುತ್ತವೆ. ಜೇಡಗಳಿಗೆ ಮನೆಯಲ್ಲಿರುವ ಸೊಳ್ಳೆಗಳು ಬಹು ರುಚಿಕರ ಆಹಾರ. ಮನುಷ್ಯನ ರಕ್ತ ಹೀರಿ ದಷ್ಟಪುಷ್ಟವಾಗಿ ಬೆಳೆಯುವ ಸೊಳ್ಳೆಗಳನ್ನು ಇವು ತನ್ನ ಬಲೆಗೆ ಕೆಡವಿಕೊಂಡು ಕಬಳಿಸುತ್ತವೆ. ಇದರಿಂದ ಮನುಷ್ಯನಿಗೆ ತಿಳಿಯದೆ ಎಷ್ಟೋ ಸಂದರ್ಭಗಳಲ್ಲಿ ಸೊಳ್ಳೆಗಳ ಹಾವಳಿ ಈ ಜೇಡಗಳ ಬೇಟೆಯಿಂದ ನಿರ್ಮೂಲನೆಯಾಗುತ್ತವೆ.

ಇಷ್ಟಕ್ಕೂ ನಮ್ಮ ಮನೆ ಮತ್ತಿತರ ಸ್ಥಳಗಳಲ್ಲಿ ಜೇಡ ವಾಸಿಸುವುದರಿಂದ ಅಥವಾ ಬಲೆ ಕಟ್ಟುವುದರಿಂದ ಮಾನವನಿಗೆ ಯಾವುದೇ ತೊಂದರೆ ಇಲ್ಲ. ಮೇಲಾಗಿ ಜೇಡ ಮತ್ತು ಅದರ ಬಲೆಯನ್ನು ಕಂಡೊಡನೆ ರೋಗಕಾರಕ ಸೊಳ್ಳೆಗಳು ಮತ್ತು ಇತರ ಕ್ರಿಮಿಕೀಟಗಳು ಮನೆಯೊಳಗೆ ನುಸುಳಲು ಹೆದರುತ್ತವೆ. ಇದರಿಂದ ಮನುಕುಲಕ್ಕೆ ಪ್ರಯೋಜನವಲ್ಲವೆ ಎಂದು ಖ್ಯಾತ ಕೀಟಶಾಸ್ತ್ರಜ್ಞರು ಮತ್ತು ಪರಿಸರವಾದಿಗಳು ಪುರಾವೆ ಸಮೇತ ತಿಳಿಸಿದ್ದಾರೆ.

ಈ ಸಂಬಂಧ ಅನೇಕ ವರ್ಷಗಳಿಂದಲೂ ಅಧ್ಯಯನ ಮತ್ತು ಸಂಶೋಧನೆಗಳು ನಡೆದಿದ್ದು, ಜೇಡಗಳು ಮನುಷ್ಯರಿಗೆ ಅಪಾಯಕಾರಿ ಅಲ್ಲ. ಬದಲಿಗೆ ಅವರಿಗೆ ಸಹಕಾರಿ ಎಂಬುದು ದೃಢಪಟ್ಟಿದೆ.

ಜೇಡ ಕೀಟಗಳ ಮಹತ್ವದ ಬಗ್ಗೆ ಒಂದು ಸ್ವಾರಸ್ಯಕರ ವಾಸ್ತವ ಸಂಗತಿಯನ್ನು ಉಲ್ಲೇಖಿಸಲಾಗಿದೆ. ಕಿಂಗ್ ಡೇವಿಡ್ ಎಂಬ ಬ್ರಿಟನ್ ದೊರೆ ಒಮ್ಮೆ ಶತ್ರುಗಳ ದಾಳಿಯಿಂದ ತಪ್ಪಿಸಿಕೊಂಡು ಅರಣ್ಯದ ಗುಹೆಯೊಳಗೆ ಅಡಗಿದ್ದ. ಆತನಿದ್ದ ಸ್ಥಳದಲ್ಲಿ ಜೇಡವೊಂದು ಬಲೆ ಕಟ್ಟುತ್ತಿತ್ತು.

ಆದರೆ, ಬಲೆ ಹೆಣೆಯುವ ಸಂದರ್ಭದಲ್ಲಿ ಅದು ಮತ್ತೆ ಮತ್ತೆ ಕೆಳಗೆ ಜಾರಿಬೀಳುತ್ತಿತ್ತು. ಆದರೂ ತಾನು ಸ್ರವಿಸುತ್ತಿದ್ದ ದಾರದಂತಹ ಪದಾರ್ಥದ ಸಹಾಯದಿಂದ ಮತ್ತೆ ಮತ್ತೆ ಮೇಲಕ್ಕೆ ಹತ್ತಿ ತನ್ನ ಬಲೆಯನ್ನು ಪೂರ್ಣವಾಗಿ ಹೆಣೆಯುವಲ್ಲಿ ಯಶಸ್ವಿಯಾಯಿತು. ಮರಳಿ ಯತ್ನವ ಮಾಡು ಎಂಬ ಮಾತಿಗೆ ಇದು ನಿದರ್ಶನವಾಗಿ, ಇದೇ ತತ್ವವನ್ನು ಮುಂದಿಟ್ಟುಕೊಂಡು ಕಿಂಗ್ ಡೇವಿಡ್ ಎರಡು ಬಾರಿ ಯತ್ನದಲ್ಲಿ ತನ್ನ ಎದುರಾಳಿಗಳನ್ನು ಜಯಿಸಿ ತನ್ನ ಚಕ್ರಾಧಿಪತ್ಯ ವಿಸ್ತರಿಸುವಲ್ಲಿ ಸಫಲನಾದನು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ