ಈಗಿನ ಸ್ಪರ್ಧಾತ್ಮಕ ಯುಗಕ್ಕೆ ತಕ್ಕಂತೆ ವಿದ್ಯಾರ್ಥಿಗಳನ್ನು ಸಜ್ಜುಗೊಳಿಸಬೇಕು-ಡಿಸಿಎಂ ಡಾ.ಆಶ್ವತ್ಥನಾರಾಯಣ

ಬೆಂಗಳೂರು, ಸೆ.17-ರಾಜ್ಯದ ವಿಶ್ವವಿದ್ಯಾನಿಲಯಗಳು ಜಾಗತಿಕ ಮಟ್ಟದಲ್ಲಿ ರ್ಯಾಂಕಿಂಗ್ ಗಳಿಸುವ ನಿಟ್ಟಿನಲ್ಲಿ ಮಾರ್ಗದರ್ಶಕ ಸೂತ್ರಗಳನ್ನು ರೂಪಿಸಲು ಮುಂದಾಗಬೇಕೆಂದು ಉಪಮುಖ್ಯಮಂತ್ರಿ ಹಾಗೂ ಉನ್ನತ ಶಿಕ್ಷಣ ಸಚಿವ ಅಶ್ವತ್ಥನಾರಾಯಣ ವಿಶ್ವವಿದ್ಯಾನಿಲಯಗಳ ಉಪಕುಲಪತಿಗಳಿಗೆ ಕರೆ ನೀಡಿದ್ದಾರೆ.

ಉನ್ನತ ಶಿಕ್ಷಣ ಇಲಾಖೆ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಕರ್ನಾಟಕ ರಾಜ್ಯ ವಿಶ್ವವಿದ್ಯಾನಿಲಯಗಳ ರೇಟಿಂಗ್ ಫ್ರೇಮ್ ವರ್ಕ್‍ನ 2019ರ ವರದಿ ಬಿಡುಗಡೆ ಮಾಡಿ ಮಾತನಾಡಿದರು.

ರಾಜ್ಯ ಮತ್ತು ರಾಷ್ಟ್ರದ ವಿಶ್ವವಿದ್ಯಾನಿಲಯಗಳ ಗುಣಮಟ್ಟವನ್ನು ಉನ್ನತ ದರ್ಜೆಗೇರಿಸುವ ಅಗತ್ಯತೆ ನಮ್ಮ ಮುಂದಿರುವ ಬಹುದೊಡ್ಡ ಸವಾಲು. ಹೀಗಾಗಿ ವಿವಿಗಳಿಗೆ ನಿರಂತರವಾಗಿ ಹೊಸ ಚೈತನ್ಯ ತುಂಬಿ ಮುಂದಿನ 5 ವರ್ಷಗಳಲ್ಲಿ ಕೆಲವು ವಿಶ್ವವಿದ್ಯಾನಿಲಯಗಳಾದರೂ ಜಾಗತಿಕ ಮಟ್ಟದಲ್ಲಿ ರ್ಯಾಂಕಿಂಗ್ ಗಳಿಸುವಂತೆ ಉತ್ತಮ ಪಡಿಸಲು ಉಪಕುಲಪತಿಗಳು ಮುಂದಾಗಬೇಕೆಂದು ಸಲಹೆ ಮಾಡಿದರು.

ಜಾಗತಿಕ ಮಟ್ಟದಲ್ಲಿ ಭಾರತದ ವಿಶ್ವವಿದ್ಯಾನಿಲಯಗಳು ರ್ಯಾಂಕಿಂಗ್ ಪಟ್ಟಿಯಲ್ಲಿ ಇಲ್ಲದಿರುವುದು ಅತ್ಯಂತ ನೋವಿನ ಸಂಗತಿ. ನಮ್ಮ ವಿವಿಗಳಲ್ಲಿ ಉತ್ತಮ ಗುಣಮಟ್ಟದ ಶಿಕ್ಷಣ ಸೌಲಭ್ಯ, ಮೂಲಭೂತ ಸೌಕರ್ಯಗಳು ಇದ್ದರೂ ಜಾಗತಿಕ ಮಟ್ಟಕ್ಕೆ ತಕ್ಕಂತೆ ವಿದ್ಯಾರ್ಥಿಗಳನ್ನು ರೂಪಿಸಲು ಸಾಧ್ಯವಾಗುತ್ತಿಲ್ಲ. ಈಗಿನ ಸ್ಪರ್ಧಾತ್ಮಕ ಯುಗಕ್ಕೆ ತಕ್ಕಂತೆ ವಿದ್ಯಾರ್ಥಿಗಳನ್ನು ಸಜ್ಜುಗೊಳಿಸುವಂತೆ ತಿಳಿಸಿದರು.

ವಿವಿಗಳ ರೇಟಿಂಗ್ ನೀಡಲು ಮಾನದಂಡಗಳನ್ನು ರೂಪಿಸಿದ್ದೇವೆ. ಇನ್ನು ಮುಂದೆ ಇಂಡಿಯನ್ ಸೆಂಟರ್ ಫಾರ್ ಅಕಾಡೆಮಿಕ್ ರ್ಯಾಂಕಿಂಗ್ ಅಂಡ್ ಎಕ್ಸಲೆನ್ಸಿ ಸಂಸ್ಥೆಯವರು ನೀಡುವ ವರದಿಯ ಮೇಲೆ ರೇಟಿಂಗ್ ವ್ಯವಸ್ಥೆ ನಿಗದಿಯಾಗಲಿದೆ.

ವಿವಿಗಳು ನಾಲ್ಕು ವಿಭಾಗಗಳಾಗಿ ವಿಂಗಡಣೆ ಮಾಡಲಾಗುವುದು. ವಿವಿಗಳ ಸಂಸ್ಥಾಪನಾ ವರ್ಷ,ಯುವ ವಿವಿಗಳು, ವಿಶಿಷ್ಟ ವಿವಿಗಳು, ಸಂಸ್ಥಾಪಿತ ವಿವಿಗಳು. ಇವು ಹೊಂದಿರುವ ವೈಶಿಷ್ಟ್ಯತೆ ಆಧಾರದ ಮೇಲೆ ರೇಟಿಂಗ್ ನಿಗದಿಯಾಗಲಿದೆ ಎಂದು ಹೇಳಿದರು.

ರಾಜ್ಯಸರ್ಕಾರದ ನಿವೃತ್ತ ಮುಖ್ಯ ಕಾರ್ಯದರ್ಶಿ ಹಾಗೂ ಕರ್ನಾಟಕ ಉನ್ನತ ಶಿಕ್ಷಣ ಪರಿಷತ್‍ನ ಉಪಾಧ್ಯಕ್ಷ ಎಸ್.ವಿ.ರಂಗನಾಥ್ ಮಾತನಾಡಿ, ಗುಜರಾತ್‍ನಲ್ಲಿ ಕಾಲೇಜುಗಳಿಗೂ ರೇಟಿಂಗ್ ನೀಡುವ ವ್ಯವಸ್ಥೆ ಇದೆ. ಈ ಮಾದರಿಯನ್ನು ರಾಜ್ಯದಲ್ಲೂ ಅಳವಡಿಸಿಕೊಳ್ಳುವಂತೆ ಸಲಹೆ ಮಾಡಿದರು.

ನಮ್ಮಲ್ಲಿ ವಿವಿಗಳಿಗೆ ಮಾತ್ರ ರೇಟಿಂಗ್ ವ್ಯವಸ್ಥೆಯನ್ನು ನೀಡುತ್ತೇವೆ. ಗುಜರಾತ್‍ನಲ್ಲಿ ಪದವಿ ಪೂರ್ವ ಹಾಗೂ ಪದವಿ ಕಾಲೇಜುಗಳಿಗೂ ರೇಟಿಂಗ್ ವ್ಯವಸ್ಥೆ ನಿಗದಿ ಮಾಡಲಾಗುತ್ತದೆ.ಈ ವ್ಯವಸ್ಥೆಯನ್ನು ನಮ್ಮಲ್ಲೂ ಅಳವಡಿಸಿಕೊಂಡರೆ ಶಿಕ್ಷಣ ಗುಣಮಟ್ಟ ಸುಧಾರಿಸಬಹುದು ಎಂದು ಹೇಳಿದರು.

ಕರ್ನಾಟಕ ಉನ್ನತ ಶಿಕ್ಷಣದಲ್ಲಿ ದೇಶದ ಯಾವ ರಾಜ್ಯಗಳಿಗೂ ಕಡಿಮೆ ಇಲ್ಲ. ಇಲ್ಲಿ ನುರಿತ ಶಿಕ್ಷಣ ತಜ್ಞರು, ಉತ್ತಮವಾದ ಮೂಲಭೂತ ಸೌಕರ್ಯಗಳು, ಪರಿಸರಸ್ನೇಹಿ ಶಿಕ್ಷಣ ಸೇರಿದಂತೆ ಪೂರಕವಾದ ಅಂಶಗಳಿವೆ. ಇದನ್ನು ಅಳವಡಿಸಿಕೊಂಡು ವಿದ್ಯಾರ್ಥಿಗಳನ್ನು ಪ್ರೋತ್ಸಾಹ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟರು.

ಐಸಿಎಆರ್ ಅಧ್ಯಕ್ಷ ಡಾ.ಕೆ.ಶ್ರೀಧರ್ ಮಾತನಾಡಿ, ಭಾರತ ಇಂದು ಉನ್ನತ ಶಿಕ್ಷಣದಲ್ಲಿ ವಿಶ್ವದಲ್ಲೇ ಅಮೆರಿಕ, ಚೀನಾ ಹೊರತುಪಡಿಸಿದರೆ ಮೂರನೇ ಸ್ಥಾನದಲ್ಲಿದೆ.

ವಿಶ್ವದ 200 ಅತ್ಯುತ್ತಮ ವಿವಿಗಳಲ್ಲಿ 10 ಭಾರತಕ್ಕೆ ಸೇರಿವೆ. 900 ವಿವಿಗಳು, 39 ಸಾವಿರ ಶಿಕ್ಷಣ ಸಂಸ್ಥೆಗಳು ಇಂದು ಮುಂಚೂಣಿಯಲ್ಲಿವೆ. ಭಾರತ ಯಾವುದೇ ರಾಷ್ಟ್ರಕ್ಕೂ ಕಡಿಮೆಯಿಲ್ಲದಂತೆ ಶೀಕ್ಷಣದಲ್ಲಿ ಬೆಳೆದು ನಿಂತಿದೆ ಎಂಧು ಪ್ರಶಂಸಿಸಿದರು.

ಇದೇ ಸಂದರ್ಭದಲ್ಲಿ ಮಣಿಪಾಲ್, ಕೆಎಲ್‍ಇ, ಕುವೆಂಪು, ಕರ್ನಾಟಕ, ವಿಶ್ವೇಶ್ವರಯ್ಯ ತಾಂತ್ರಿಕ, ಮಂಗಳೂರು, ಬೆಂಗಳೂರು, ಕಲಬುರಗಿ, ಮೈಸೂರು ಹಾಗೂ ತುಮಕೂರು ವಿವಿಗಳಿಗೆ ರೇಟಿಂಗ್ ಆಧಾರದ ಮೇಲೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ