ಶಿಕ್ಷಣ, ನೀರಾವರಿ ಕ್ಷೇತ್ರಗಳ ಅಭಿವೃದ್ಧಿ, ಪಾರದರ್ಶಕ ಆಡಳಿತ ನಡೆಸಲು ಆದ್ಯತೆ: ಸಚಿವರಾದ ಪ್ರಭು ಚವ್ಹಾಣ್

ಬೀದರ, ಸೆ.17 ಜಿಲ್ಲೆಯಲ್ಲಿ ಶಿಕ್ಷಣ ಮತ್ತು ನೀರಾವರಿ ಕ್ಷೇತ್ರಗಳ ಅಭಿವೃದ್ಧಿಗೆ ಮೊದಲ ಆದ್ಯತೆ ನೀಡಲಾಗುವುದು ಜೊತೆಗೆ ಆಡಳಿತವು ಪಾರದರ್ಶಕವಾಗಿ ನಡೆಯುವಂತೆ ನೋಡಿಕೊಳ್ಳಲಾಗುವುದು ಎಂದು ಪಶು ಸಂಗೋಪನೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಪ್ರಭು ಚವ್ಹಾಣ್ ಅವರು ತಿಳಿಸಿದರು.

ನಗರದ ಪೊಲೀಸ್ ಪರೇಡ್ ಮೈದಾನದಲ್ಲಿ ಸೆ.17ರಂದು ನಡೆದ ಕಲ್ಯಾಣ ಕರ್ನಾಟಕ ಉತ್ಸವ ದಿನಾಚರಣೆಯಲ್ಲಿ ಧ್ವಜಾರೋಹಣ ನೆರವೇರಿಸಿ, ಗೌರವ ವಂದನೆ ಸ್ವೀಕರಿಸಿದ ಬಳಿಕ ಅವರು ಮಾತನಾಡಿದರು.

ನಮ್ಮ ದೇಶಕ್ಕೆ 1947ರಲ್ಲಿ ಸ್ವಾತಂತ್ರ್ಯ ಸಿಕ್ಕಿತು. ಈ ಭಾಗದ ಅನೇಕ ಮಹನೀಯರ ಹೋರಾಟದ ಫಲವಾಗಿ ನಿಜಾಮರ ಆಳ್ವಿಕೆಯಲ್ಲಿದ್ದ ಹೈದ್ರಾಬಾದ್ ಕರ್ನಾಟಕದ ಭಾಗವು ಭಾರತದ ಒಕ್ಕೂಟಕ್ಕೆ ಸೇರಿತು. ಅಂಧಕಾರದಿಂದ ತುಂಬಿಕೊಂಡಿದ್ದ ಈ ನಾಡಿಗೆ ಬೆಳಕು ನೀಡಿದ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಕೊಡುಗೆಯನ್ನು ಹಾಗೂ ಸ್ವಾತಂತ್ರ್ಯಕ್ಕಾಗಿ ತ್ಯಾಗ ಬಲಿದಾನ ಮಾಡಿದ ಜಿಲ್ಲೆಯ ಗೋರ್ಟಾ ಸೇರಿದಂತೆ ಎಲ್ಲಾ ಹೋರಾಟಗಾರರನ್ನು ಸ್ಮರಿಸಬೇಕು ಎಂದು ಅವರು ತಿಳಿಸಿದರು.

ಮಾನ್ಯ ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪ ಅವರ ನೇತೃತ್ವದ ಸರ್ಕಾರವು ಹೈದ್ರಾಬಾದ್ ಕರ್ನಾಟಕ ಪ್ರವೇಶವನ್ನು ಕಲ್ಯಾಣ ಕರ್ನಾಟಕ ಎಂದು ಮರುನಾಮಕಣ ಮಾಡಿರುವುದು ಐತಿಹಾಸಿಕ ನಿರ್ಣಯವಾಗಿದೆ. ಅಲ್ಲದೇ ರಾಜ್ಯದ ಜನತೆಯ ಬಹುದಿನಗಳ ಬೇಡಿಕೆಯಂತೆ ಹೈದ್ರಾಬಾದ್ ಕರ್ನಾಟಕ ವಿಮೋಚನಾ ದಿನಾಚರಣೆಯನ್ನು ಕಲ್ಯಾಣ ಕರ್ನಾಟಕ ಉತ್ಸವ ದಿನಾಚರಣೆಯನ್ನಾಗಿ ಆಚರಿಸಲು ರಾಜ್ಯ ಸರ್ಕಾರ ಅವಕಾಶ ಮಾಡಿಕೊಟ್ಟಿರುವುದಕ್ಕಾಗಿ ಮಾನ್ಯ ಮುಖ್ಯಮಂತ್ರಿಯವರಿಗೆ ಅಭಿನಂದನೆಗಳನ್ನು ಸಲ್ಲಿಸುತ್ತೇನೆ ಎಂದು ತಿಳಿಸಿದರು.

ಕಲ್ಯಾಣ ಕರ್ನಾಟಕ ಉತ್ಸವ ದಿನಾಚರಣೆಯಲ್ಲಿ ಧ್ವಜಾರೋಹಣ ನೆರವೇರಿಸುವ ಸೌಭಾಗ್ಯ ದೊರೆತಿರುವುದಕ್ಕೆ ಸಂತೋಷವಾಗಿದೆ ಎಂದು ತಿಳಿಸಿದ ಅವರು, ಸರ್ಕಾರವು ಅಧಿಕಾರಕ್ಕೆ ಬಂದು ಒಂದು ತಿಂಗಳಾಗಿವೆ. ಬಡವರು, ರೈತರು ಏಳಿಗೆ ಸೇರಿದಂತೆ ಹಲವು ಜನಪರ ಕಾರ್ಯಕ್ರಮಗಳನ್ನು ಹಾಕಿಕೊಳ್ಳಲಾಗುತ್ತಿದೆ. ರೈತರು, ನೇಕಾರರ ಸಾಲಮನ್ನಾ, ಹೈದ್ರಾಬಾದ್ ಕರ್ನಾಟಕಕ್ಕೆ ಕಲ್ಯಾಣ ಕರ್ನಾಟಕ ಎಂದು ಮರುನಾಮಕರಣ ಸೇರಿದಂತೆ ಹಲವು ಪ್ರಮುಖ ನಿರ್ಣಯಗಳನ್ನು ಕೈಗೊಳ್ಳಲಾಗಿದೆ ಎಂದು ಹೇಳಿದರು.

ಎಲ್ಲಾ ಜನಪ್ರತಿನಿಧಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಬೀದರ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಮಾಸ್ಟರ್ ಪ್ಲಾನ್ ತಯಾರಿಸಲಾಗುವುದು. ಬಡವರು, ರೈತರಿಗೆ ನ್ಯಾಯ ಕೊಡಿಸಲು ಪ್ರಯತ್ನಿಸಲಾಗುವುದು. ಬೀದರ ಜಿಲ್ಲೆಯೊಂದಿಗೆ ಯಾದಗಿರಿ ಜಿಲ್ಲೆಯ ಉಸ್ತುವಾರಿಯ ಜವಾಬ್ದಾರಿ ವಹಿಸಲಾಗಿದೆ. ಅಧಿಕಾರಿಗಳು ಸಹ ನಿಷ್ಠೆಯಿಂದ ಕೆಲಸ ಮಾಡಬೇಕಿದೆ ಎಂದು ತಿಳಿಸಿದರು.

ಜಿಲ್ಲೆಯಲ್ಲಿ ವಿಮಾನ ನಿಲ್ದಾಣ ಆರಂಭಿಸುವುದು, ಮಿನಿ ವಿಧಾನಸೌಧ ನಿರ್ಮಾಣ, ಬೀದರ-ನಾಂದೇಡ್ ರಸ್ತೆ ನಿರ್ಮಾಣ, ಬ್ರಿಡ್ಜ್ ಕಂ ಬ್ಯಾರೇಜ್‍ಗಳನ್ನು ನಿರ್ಮಿಸುವುದು ಹಾಗೂ ಬಾಕಿ ಉಳಿದಿರುವ ಕಾಮಗಾರಿಗಳನ್ನು ಪೂರ್ಣಗೊಳಿಸಲು ಒತ್ತು ಕೊಡಲಾಗುವುದು. ಬೀದರ ಜಿಲ್ಲೆಯ ಐತಿಹಾಸಿಕ ಬಿದ್ರಿ ಕಲೆಯು ದೇಶ ಮತ್ತು ವಿಶ್ವದಾದ್ಯಂತ ಪರಿಚಯಿಸಲಾಗುವುದು ಎಂದು ಹೇಳಿದರು.

ಗೋವುಗಳ ರಕ್ಷಣೆ ಮಾಡಿ: ಜಿಲ್ಲೆಯಲ್ಲಿ ಗೋವುಗಳನ್ನು ಸಂರಕ್ಷಿಸಲು ಮುಂದಾಗಬೇಕು. ಪ್ರತಿ ಮನೆಯಲ್ಲಿ ಗೋವುಗಳು ಇರುವಂತೆ ನೋಡಿಕೊಳ್ಳಬೇಕು ಎಂದು ಸಚಿವರು, ಜಿಲ್ಲೆಯ ಜನತೆಯಲ್ಲಿ ಮನವಿ ಮಾಡಿದರು. ಪರಿಸರಕ್ಕೆ ಹಾನಿಯುಂಟು ಮಾಡುವ ಪ್ಲಾಸ್ಟಿಕನ್ನು ಬಳಸುವುದು ತಪ್ಪು. ಪ್ಲಾಸ್ಟಿಕ್ ವಸ್ತುಗಳನ್ನು ತಿಂದು ಗೋವುಗಳು ಸಾವನಪ್ಪುತ್ತಿವೆ. ಹಾಗಾಗಿ ಪ್ಲಾಸ್ಟಿಕ್ ತ್ಯಾಜ್ಯವನ್ನು ಎಲ್ಲೆಂದರಲ್ಲಿ ಬೀಸಾಡದಿರಿ ಎಂದು ಸಚಿವರು ಸಲಹೆ ಮಾಡಿದರು.
ಗಿಡ-ಮರ ಬೆಳೆಸಿ: ಪರಿಸರ ಸಂರಕ್ಷಣೆಯು ನಮ್ಮೆಲ್ಲರ ಹೊಣೆಯಾಗಿದೆ. ಈ ನಿಟ್ಟಿನಲ್ಲಿ ಗಿಡ-ಮರಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಬೆಳೆಸಲು ಒತ್ತು ಕೊಡೋಣ. ಇದರಿಂದ ಹೆಚ್ಚಿನ ಪ್ರಮಾಣದಲ್ಲಿ ಮಳೆಯಾಗಿ ನೀರಿನ ಸಮಸ್ಯೆ ತಪ್ಪಲಿದೆ ಎಂದು ಸಚಿವರು ತಿಳಿಸಿದರು.

ಜಯ ಘೋಷಣೆ: ಕಲ್ಯಾಣ ಕರ್ನಾಟಕ ಉತ್ಸವ ದಿನಾಚರಣೆಯ ಸಂದೇಶವನ್ನು ಆರಂಭಿಸುವ ಮೊದಲು ಸಚಿವರಾದ ಪ್ರಭು ಚವ್ಹಾಣ್ ಅವರು, “ಭಾರತ್ ಮಾತಾಕೀ ಜೈ.. ಕರ್ನಾಟಕ ಮಾತಾಕೀ ಜೈ.. ಬೀದರ ಕೀ ಜೈ..’’ ಎನ್ನುವ ಜಯಘೋಷಣೆಗಳನ್ನು ಕೂಗಿ ಸಾರ್ವಜನಿಕರಲ್ಲಿ ಉತ್ಸಾಹ ಹೆಚ್ಚಿಸಿದರು.
ಯಾದಗಿರಿ ಜನತೆಗೆ ಶುಭಾಷಯ: ಬೀದರ ಜಿಲ್ಲೆಯ ಜೊತೆಗೆ ಯಾದಗಿರಿ ಜಿಲ್ಲೆಯ ಉಸ್ತುವಾರಿಯನ್ನು ಕೂಡ ನನಗೆ ವಹಿಸಿಕೊಡಲಾಗಿದೆ. ಆದ್ದರಿಂದ ಕಲ್ಯಾಣ ಕರ್ನಾಟಕ ಉತ್ಸವ ದಿನಾಚರಣೆಯ ಈ ಸಂದರ್ಭದಲ್ಲಿ ಯಾದಗಿರಿ ಜಿಲ್ಲೆಯ ಜನತೆಗೂ ಕೂಡ ಶುಭಾಷಯಗಳನ್ನು ಸಲ್ಲಿಸುತ್ತೇನೆ ಎಂದು ಸಚಿವರು ತಿಳಿಸಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಗೀತಾ ಪಂಡಿತರಾವ್ ಚಿದ್ರಿ, ಲೋಕಸಭೆ ಸದಸ್ಯರಾದ ಭಗವಂತ ಖೂಬಾ, ಶಾಸಕರಾದ ರಹೀಮ ಖಾನ್, ಬಂಡೆಪ್ಪ ಖಾಶೆಂಪೂರ, ವಿಧಾನ ಪರಿಷತ್ ಸದಸ್ಯರಾದ ರಘುನಾಥರಾವ ಮಲ್ಕಾಪೂರೆ, ವಿಜಯಸಿಂಗ್, ಅರವಿಂದಕುಮಾರ ಅರಳಿ, ಜಿಲ್ಲಾ ಪಂಚಾಯತ್ ಸದಸ್ಯರಾದ ಅನೀಲ ಗುಂಡಪ್ಪ, ಜಿಲ್ಲಾಧಿಕಾರಿಗಳಾದ ಡಾ.ಹೆಚ್.ಆರ್.ಮಹಾದೇವ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗ್ಯಾನೇಂದ್ರಕುಮಾರ ಗಂಗವಾರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಟಿ.ಶ್ರೀಧರ್, ಅಪರ ಜಿಲ್ಲಾಧಿಕಾರಿ ರುದ್ರೇಶ ಗಾಳಿ, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಸ್.ಬಿ.ಪಾಟೀಲ, ಬೀದರ ಸಹಾಯಕ ಆಯುಕ್ತರಾದ ಶಂಕರ ವಣಕ್ಯಾಳ, ಬೀದರ ತಹಸೀಲ್ದಾರರಾದ ಕೀರ್ತಿ ಚಾಲಕ ಹಾಗೂ ಇತರರು ಉಪಸ್ಥಿತರಿದ್ದರು. ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಪ್ರಾಂಶುಪಾಲರಾದ ಚನ್ನಬಸವ ಹೆಡೆ ಅವರು ನಿರೂಪಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ