ಕಲ್ಯಾಣ ಕರ್ನಾಟಕ ಭಾಗದ ಅಭಿವೃದ್ದಿಗಾಗಿ ಪ್ರತ್ಯೇಕ ಸಚಿವಾಲಯ ಸ್ಥಾಪನೆ-ಸಿಎಂ ಯಡಿಯೂರಪ್ಪ

ಕಲಬುರಗಿ,ಸೆ.17- ಕಲ್ಯಾಣ ಕರ್ನಾಟಕ ಭಾಗದ ಆರು ಜಿಲ್ಲೆಗಳ ಸರ್ವಾಂಗೀಣ ಅಭಿವೃದ್ದಿಗಾಗಿ ಪ್ರತ್ಯೇಕ ಸಚಿವಾಲಯ ಸ್ಥಾಪನೆ ಹಾಗೂ ಮುಂದಿನ ಬಜೆಟ್‍ನಲ್ಲಿ ವಿಶೇಷ ಹಣಕಾಸಿನ ನೆರವು ನೀಡಲಿದ್ದೇವೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಇಂದಿಲ್ಲಿ ಘೋಷಿಸಿದರು.

ಕಲ್ಯಾಣ ಕರ್ನಾಟಕ ಉತ್ಸವ ದಿನಾಚರಣೆ ಹಿನ್ನೆಲೆಯಲ್ಲಿ ನಗರದ ಎಸ್‍ವಿಪಿ ವೃತ್ತದ ಬಳಿ ಇರುವ ಸರದಾರ್ ವಲ್ಲಭಬಾಯ್ ಪಟೇಲ್ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಅವರು ಮಾತನಾಡಿದರು.

ಹಿಂದುಳಿದಿರುವ ಕಲ್ಯಾಣ ಕರ್ನಾಟಕವನ್ನು ಅಭಿವೃದ್ದಿಪಡಿಸಲು ಸಂವಿಧಾನದ 371(ಜೆ)ನೇ ವಿಧಿಯ ಮೂಲಕ ಈ ಭಾಗದ ಆರು ಜಿಲ್ಲೆಗಳಿಗೆ ಶೀಘ್ರದಲ್ಲೇ ಪ್ರತ್ಯೇಕವಾದ ಸಚಿವಾಲಯ ತೆರೆಯಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಲಾಗುವುದು ಎಂದರು.

ಮುಂಬರುವ ಬಜೆಟ್‍ನಲ್ಲಿ ಕಲ್ಯಾಣ ಕರ್ನಾಟಕದ ಸಮಗ್ರ ಅಭಿವೃದ್ದಿಗೆ ನನ್ನದೇ ಆದ ದೂರದೃಷ್ಟಿ ಇಟ್ಟುಕೊಂಡಿದ್ದೇನೆ. ಹೀಗಾಗಿ ಬಜೆಟ್‍ನಲ್ಲಿ ಹಣಕಾಸು ನೆರವು ನೀಡಿ ಅಭಿವೃದ್ದಿಗೆ ವಿಶೇಷ ಗಮನಹರಿಸುವುದಾಗಿ ಹೇಳಿದರು.

ಸ್ವತಂತ್ರ ಬಂದ ನಂತರ ಹೈದರಾಬಾದ್ ಕರ್ನಾಟಕವು ನಿಜಾಮರ ವಶದಲ್ಲಿತ್ತು. ಇದನ್ನು ಮುಕ್ತಿಗೊಳಿಸಿ ಕರ್ನಾಟಕಕ್ಕೆ ಸೇರ್ಪಡೆ ಮಾಡಲು ಅಂದು ಗೃಹಸಚಿವರರಾಗಿದ್ದ ಸರದಾರ್‍ವಲ್ಲಭಬಾಯ್ ಪಟೇಲ್ ದಿಟ್ಟತನದ ನಿರ್ಧಾರ ಕೈಗೊಂಡರು.

ಇಂದು 2ನೇ ಸರದಾರ್ ವಲ್ಲಭಬಾಯ್ ಪಟೇಲ್ ಎಂದೇ ಗುರುತಿಸಿಕೊಂಡಿರುವ ಪ್ರಧಾನಿ ನರೇಂದ್ರಮೋದಿ ಅವರು ಕಲ್ಯಾಣ ಕರ್ನಾಟಕಕ್ಕಾಗಿ ವಿಶೇಷ ಒತ್ತು ನೀಡಿದ್ದಾರೆ. ಅದರಲ್ಲೂ ಅವರ ಹುಟ್ಟುಹಬ್ಬದ ದಿನವಾದ ಇಂದು ಕಲ್ಯಾಣ ಕರ್ನಾಟಕ ಎಂದು ನಾಮಕರಣ ಮಾಡಿ ಉತ್ಸವ ಆಚರಿಸುತ್ತಿರುವುದು ನಮ್ಮೆಗೆಲ್ಲರಿಗೂ ಅತ್ಯಂತ ಸಂತಸ ತಂದಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಈ ಭಾಗದ ಅಭಿವೃದ್ಧಿಗೆ ತಾರತಮ್ಯ ಮಾಡದೆ ಹೆಚ್ಚಿನ ಹಣಕಾಸು ನೆರವು ನೀಡಲಿದ್ದೇನೆ.ಮುಂದಿನ ಸಚಿವ ಸಂಪುಟ ವಿಸ್ತರಣೆಯಲ್ಲಿ ಈ ಭಾಗಕ್ಕೂ ಆದ್ಯತೆ ಸಿಗಲಿದೆ. ಈ ಬಗ್ಗೆ ಯಾರಿಗೂ ಅನುಮಾನ ಬೇಡ ಎಂದು ಸ್ಪಷ್ಟಪಡಿಸಿದರು.

ಕಾರ್ಯಕ್ರಮದಲ್ಲಿ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ.ಮಾಧುಸ್ವಾಮಿ, ಸಂಸದ ಉಮೇಶ್ ಜಾಧವ್, ಶಾಸಕರು ಸೇರಿದಂತೆ ಮತ್ತಿತರರು ಇದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ