ಸುಪ್ರೀಂನಲ್ಲಿ ಅನರ್ಹ ಶಾಸಕರಿಗೆ ಭಾರೀ ಹಿನ್ನಡೆ; ರಾಜಕೀಯ ಭವಿಷ್ಯ ಮತ್ತಷ್ಟು ಕಗ್ಗಂಟು

ಬೆಂಗಳೂರುಕಾಂಗ್ರೆಸ್​-ಜೆಡಿಎಸ್​​ ಮೈತ್ರಿ ಸರ್ಕಾರವನ್ನು ಬೀಳಿಸಿದ್ದ ಅನರ್ಹ ಶಾಸಕರಿಗೆ ಸುಪ್ರೀಂಕೋರ್ಟ್ನಲ್ಲಿ ಭಾರೀ ಹಿನ್ನಡೆಯಾಗಿದೆ. ಸ್ಪೀಕರ್​​ ಆದೇಶವನ್ನು ಪ್ರಶ್ನಿಸಿ ಸಲ್ಲಿಸಿರುವ ಅರ್ಜಿಯನ್ನು ತುರ್ತು ವಿಚಾರಣೆ ಮಾಡಲು ನ್ಯಾಯಾಲಯವೂ ನಿರಾಕರಿಸಿದೆಅಲ್ಲದೇ ನ್ಯಾಯಾಲಯದಲ್ಲಿ ಎಲ್ಲಾ ಪ್ರಕರಣಗಳನ್ನು ಸರದಿಯ ಪ್ರಕಾರವೇ ವಿಚಾರಣೆ ನಡೆಸಲಾಗುತ್ತಿದೆ. ನಿಮ್ಮ ಸರದಿ ಬರೆವವರೆಗೂ ಕಾಯಬೇಕು. ನೀವು ಹೇಳಿದಾಗೇ ಅರ್ಜಿ ತುರ್ತು ವಿಚಾರಣೆ ಮಾಡಲು ಸಾಧ್ಯವಿಲ್ಲ ಎಂದು ಸುಪ್ರೀಂಕೋರ್ಟ್ನ್ಯಾಯಮೂರ್ತಿ ಎನ್ ವಿ ರಮಣ ತಿಳಿಸಿದ್ದಾರೆ.

ಅನರ್ಹ ಶಾಸಕರ ಅರ್ಜಿ ವಿಚಾರಣೆಗೆ ನಿಗದಿಯಾಗಿದ್ದ ದಿನಾಂಕ ರದ್ದು ಮಾಡಲಾಗಿತ್ತು. ರದ್ದು ಮಾಡಿದ ಸುಪ್ರೀಂ ಕೋರ್ಟ್​ ಆದೇಶ ಪ್ರಶ್ನಿಸುತ್ತಾ 17 ಅನರ್ಹ ಶಾಸಕರ ಅರ್ಜಿಯನ್ನು ಪಟ್ಟಿಯಲ್ಲಿ ಕೈಬಿಡದಂತೆ ಹಿರಿಯ ವಕೀಲ ರಾಕೇಶ್​​ ದ್ವಿವೇದಿ ಮನವಿ ಮಾಡಿದರು. ಅನರ್ಹ ಶಾಸಕರ ಪರ ವಕೀಲರ ಮನವಿಗೆ ಸುಪ್ರೀಂ ಕೋರ್ಟ್​ ಸ್ಪಂದಿಸಿಲ್ಲ. ಹಾಗಾಗಿ ಪ್ರಕರಣದ ವಿಚಾರಣೆ ನಡೆಯುವವರೆಗೂ ಯಾವ ತೀರ್ಪು ಬರಲಿದೆ ಎಂದು ಕಾದು ನೋಡಬೇಕಾದ ಪರಿಸ್ಥಿತಿ ಉಂಟಾಗಿದೆ. ಆದ್ದರಿಂದಲೇ ಅನರ್ಹ ಶಾಸಕರು ತಮ್ಮ ರಾಜಕೀಯ ಭವಿಷ್ಯದ ಬಗ್ಗೆ ಭಾರೀ ಆಂತಕಕ್ಕೀಡಾಗಿದ್ದಾರೆ.

ಸಮ್ಮಿಶ್ರ ಸರ್ಕಾರ ಉರುಳಿಸಿ ಬಿಜೆಪಿ ಸರ್ಕಾರ ರಚನೆಗೆ ದಾರಿ ಮಾಡಿಟ್ಟಿದ್ದ ಅನರ್ಹ ಶಾಸಕರ ತ್ರಿಶಂಕು ಸ್ಥಿತಿ ಮುಕ್ತಾಯಗೊಳ್ಳುವ ಸೂಚನೆ ಕಾಣುತ್ತಿಲ್ಲ. ಬಿಜೆಪಿಯ ಭರವಸೆಗಳನ್ನು ನೆಚ್ಚಿಕೊಂಡು ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳನ್ನ ತೊರೆದಿರುವ ಈ ಶಾಸಕರು ಇದೀಗ ಅನರ್ಹತೆಯ ಪ್ರಕರಣ ಇತ್ಯರ್ಥವಾಗದೇ ಸಂದಿಗ್ಧ ಸ್ಥಿತಿಯಲ್ಲಿದ್ದಾರೆ. ಇವರ ಪರ ವಕೀಲ ಮುಕುಲ್ ರೋಹಟಗಿ ಅವರು ಸುಪ್ರೀಂ ಕೋರ್ಟ್​ನಲ್ಲಿ ಇವರ ಪ್ರಕರಣವನ್ನು ಪ್ರಸ್ತಾಪ ಮಾಡದೇ ಇರಲು ನಿರ್ಧರಿಸಿದ್ದಾರೆ.

ಕೇಂದ್ರ ಸರ್ಕಾರದ ಮಾಜಿ ಅಟಾರ್ನಿ ಜನರಲ್ ಆಗಿರುವ ಮುಕುಲ್ ರೋಹಟಗಿ ಅವರು ಅನರ್ಹ ಶಾಸಕರ ಪರವಾಗಿ ಸುಪ್ರೀಂ ಕೋರ್ಟ್​ನಲ್ಲಿ ವಕಾಲತು ವಹಿಸಿಕೊಂಡಿದ್ದಾರೆ. ನ್ಯಾ| ಎನ್.ವಿ. ರಮಣ ನೇತೃತ್ವದ ದ್ವಿಸದಸ್ಯ ಸುಪ್ರೀಂ ಪೀಠದಲ್ಲಿ ಕೇಸ್ ಮೆನ್ಷನ್ ಮಾಡಲು ರೋಹಟಗಿ ಅವರು ಮುಂಚೆಯೇ ಹಿಂದೇಟು ಹಾಕಿದ್ದರೆಂದು ಮೂಲಗಳು ಹೇಳುತ್ತಿವೆ. ಆದರೆ, ಅನರ್ಹ ಶಾಸಕರ ಒತ್ತಡಕ್ಕೆ ಕಟ್ಟುಬಿದ್ದು ಇವತ್ತು ಪ್ರಕರಣ ಪ್ರಸ್ತಾಪ ಮಾಡಲು ಅವರು ಒಪ್ಪಿಕೊಂಡಿದ್ದರು. ಅವರ ಕಿರಿಯ ವಕೀಲರೂ ಕೂಡ ಕೇಸ್ ಮೆನ್ಷನ್​ಗೆ ಎಲ್ಲಾ ಸಿದ್ಧತೆಯನ್ನೂ ಮಾಡಿಕೊಂಡು ಬಂದಿದ್ದರೆನ್ನಲಾಗಿದೆ. ಆದರೆ, ಕಡೆಯ ಕ್ಷಣದಲ್ಲಿ ಮುಕುಲ್ ರೋಹಟಗಿ ಅವರು ತಮ್ಮ ಕಿರಿಯ ವಕೀಲರಿಗೆ ಈ ಕೇಸ್ ಮೆನ್ಷನ್ ಮಾಡುವುದು ಬೇಡ ಎಂದು ಸೂಚಿಸಿದರಂತೆ.

ಮುಕುಲ್ ರೋಹಟಗಿ ಅವರ ಈ ನಿರ್ಧಾರದ ಹಿಂದೆ ಬೇರೊಂದೂ ಅಂದಾಜಿದೆ. ಹಿಂದೊಮ್ಮೆ ಅನರ್ಹ ಶಾಸಕರ ಪ್ರಕರಣದ ತುರ್ತು ವಿಚಾರಣೆ ನಡೆಸಲು ನ್ಯಾ| ಅರುಣ್ ಮಿಶ್ರಾ ನೇತೃತ್ವದ ನ್ಯಾಯಪೀಠ ನಿರಾಕರಿಸಿತ್ತು. ಕೋರ್ಟ್ ತುರ್ತು ವಿಚಾರಣೆಗೆ ಒಪ್ಪದೇ ಇರಬಹುದು ಎಂಬ ಅಂದಾಜಿಸಿ ಕೇಸ್ ಪ್ರಸ್ತಾಪ ಮಾಡಲಿಲ್ಲವೆನ್ನಲಾಗಿದೆ. ಮುಖ್ಯ ನ್ಯಾಯಮೂರ್ತಿಗಳ ಮುಂದೆ ಮುಕುಲ್ ರೋಹಟಗಿ ಅವರು ಈ ಕೇಸ್ ಬಗ್ಗೆ ಮನವಿ ಮಾಡುವ ಸಾಧ್ಯತೆಯೂ ಇದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ