ಮತ್ತೆ ಕೋಟ್ಯಂತರ ರೂ. ದಾನ ಮಾಡಿದ ಅಜೀಂ ಪ್ರೇಂಜಿ: 7,300 ಕೋಟಿ ರೂ. ಮೌಲ್ಯದ ಷೇರು ಮಾರಾಟ

ಬೆಂಗಳೂರು: ವಿಪ್ರೋ ಸಂಸ್ಥಾಪಕ ಅಧ್ಯಕ್ಷ ಅಜೀಂ ಪ್ರೇಂಜಿ, ತಮ್ಮ ಹೆಸರಿನಲ್ಲಿದ್ದ 7,300 ಕೋಟಿ ರೂ. ಮೌಲ್ಯದ ವಿಪ್ರೋ ಸಂಸ್ಥೆಯ ಷೇರುಗಳನ್ನು ಮಾರಾಟ ಮಾಡಿದ್ಧಾರೆ. ಈ ಹಣ ನೇರವಾಗಿ ಅಜೀಂ ಪ್ರೇಂಜಿ ಟ್ರಸ್ಟ್‌ಗೆ ವರ್ಗಾವಣೆಯಾಗಲಿದ್ದು, ಲೋಕಕಲ್ಯಾಣಕ್ಕಾಗಿ ಬಳಕೆಯಾಗಲಿದೆ. 224 ದಶಲಕ್ಷ ಷೇರುಗಳನ್ನು ಈವರೆಗೆ ವಿಪ್ರೋ ಅಧ್ಯಕ್ಷ ಅಜೀಂ ಪ್ರೇಂಜಿ ಮಾರಾಟ ಮಾಡಿದ್ದಾರೆ ಎಂದು ಸಂಸ್ಥೆ ಪ್ರಕಟಿಸಿದೆ. ತಮ್ಮಲ್ಲಿರುವ ಒಟ್ಟು ಷೇರುಗಳ ಪೈಕಿ ಈವರೆಗೆ ಶೇ. 3.96ರಷ್ಟು ಷೇರುಗಳನ್ನು ಮಾತ್ರ ಪ್ರೇಂಜಿ ಮಾರಾಟ ಮಾಡಿದ್ದಾರೆ.

ಕಳೆದ ಮಾರ್ಚ್‌ನಲ್ಲಿ ಪ್ರೇಂಜಿ ತಮ್ಮ ಬಳಿಯಿದ್ದ ವಿಪ್ರೋ ಸಂಸ್ಥೆಯ ಶೇ.67ರಷ್ಟು ಷೇರುಗಳನ್ನು ಮಾರಾಟ ಮಾಡಿದ್ದರು. ಮಾರಾಟದ ಬಳಿಕ ಲಭ್ಯವಾದ 1.45 ಲಕ್ಷ ಕೋಟಿ ರೂ. ಹಣವನ್ನು ಅಜೀಂ ಪ್ರೇಂಜಿ ಪ್ರತಿಷ್ಠಾನಕ್ಕೆ ವರ್ಗಾವಣೆ ಮಾಡಿದ್ದರು. ಈವರೆಗೂ ತಮ್ಮ ಪ್ರತಿಷ್ಠಾನಕ್ಕೆ ಅಜೀಂ ಪ್ರೇಂಜಿ ವರ್ಗಾಯಿಸಿರುವ ಹಣವೆಲ್ಲವೂ ಲೋಕಕಲ್ಯಾಣ ಕಾರ್ಯಕ್ರಮಗಳಿಗಾಗಿಯೇ ಬಳಕೆಯಾಗಲಿದೆ ಎಂದು ಅಜೀಂ ಪ್ರೇಂಜಿ ಪ್ರತಿಷ್ಠಾನದ ಮುಖ್ಯ ಅಧಿಕಾರಿ ಕೆ. ಆರ್. ಲಕ್ಷ್ಮೀನಾರಾಯಣನ್ ತಿಳಿಸಿದ್ದಾರೆ.
ಅಜೀಂ ಪ್ರೇಂಜಿ ಪ್ರತಿಷ್ಠಾನದ ಮೂಲಕ ಅಪೌಷ್ಠಿಕತೆ ಸಮಸ್ಯೆಗೆ ಪರಿಹಾರ ನೀಡುವ ನಿಟ್ಟಿನಲ್ಲಿ ಕೆಲಸ ಮಾಡಲಾಗುತ್ತಿದೆ. ಕೌಟುಂಬಿಕ ಹಿಂಸೆಗೆ ತುತ್ತಾಗುತ್ತಿರುವವರಿಗೆ ಸಹಾಯ ಹಸ್ತ ನೀಡಲಾಗುತ್ತಿದೆ. ಸ್ವತಂತ್ರ್ಯ ಮಾಧ್ಯಮಕ್ಕೆ ಪ್ರೋತ್ಸಾಹ ನೀಡಲಾಗುತ್ತಿದೆ. ಬಾಲಕಿಯರ ಶಿಕ್ಷಣ ಹಾಗೂ ಸ್ವಾವಲಂಬನೆಗೆ ಪ್ರತಿಷ್ಠಾನ ಶ್ರಮಿಸುತ್ತಿದೆ.
ಭಾರತ ಮಧ್ಯಮ ವರ್ಗದ ಆದಾಯ ಗಳಿಸುತ್ತಿರುವ ದೇಶವಾಗಿ ಅಭಿವೃದ್ಧಿ ಹೊಂದುತ್ತಿರುವ ಬೆನ್ನಲ್ಲೇ, ವಿದೇಶಗಳ ದಾನಿಗಳ ಪ್ರಮಾಣ ಕಡಿಮೆಯಾಗುತ್ತಿದೆ. ಈ ಸಂದರ್ಭದಲ್ಲಿ ಅಜೀಂ ಪ್ರೇಂಜಿ ಪ್ರತಿಷ್ಠಾನದಂಥಾ ಸಂಸ್ಥೆಗಳು ದೇಶದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮುಂದೆ ಬರುವ ಅಗತ್ಯವಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ