ನಾವು ಚಂದ್ರನನ್ನು ತಲುಪಿದ್ದೇವೆ, ಪಾಕಿಸ್ತಾನ ಇನ್ನೂ ಕತ್ತೆ ಮಾರುತ್ತಿದೆ!

ಹೊಸದಿಲ್ಲಿ: ಕೇಂದ್ರ ಸಚಿವ ಗಿರಿರಾಜ್ ಸಿಂಗ್ ಪಾಕಿಸ್ತಾನದ ವಿರುದ್ಧ ಹರಿಹಾಯ್ದಿದ್ದಾರೆ. ಭಾರತದ ಯಶಸ್ಸು ಹಾಗೂ ಸೋಲುಗಳ ಬಗ್ಗೆ ಆಡಿಕೊಳ್ಳೋದನ್ನು ಬಿಟ್ಟು, ತಮ್ಮ ದೇಶದ ಆರ್ಥಿಕ ದುಸ್ಥಿತಿ ಬಗ್ಗೆ ಚಿಂತೆ ಮಾಡಲಿ ಎಂದು ತಿರುಗೇಟು ಕೊಟ್ಟಿದ್ದಾರೆ.

ಎರಡೂ ದೇಶಕ್ಕೆ ಒಂದೇ ಬಾರಿ ಸ್ವಾತಂತ್ರ್ಯ ಸಿಕ್ಕಿತು. ಅವರು ನಮ್ಮೊಂದಿಗೆ ಕಿತ್ತಾಡಿಕೊಂಡು ಬೇರೆ ಬೇರೆಯಾದ್ರು. ಹೀಗಾಗಿ, ಚಂದ್ರಯಾನ-2 ಯೋಜನೆಯ ಯಶಸ್ಸು, ಸೋಲಿನ ಬಗ್ಗೆ ಅವರೇಕೆ ನಮ್ಮನ್ನು ಆಡಿಕೊಳ್ಳುತ್ತಿದ್ದಾರೆ ಎಂದು ಗಿರಿರಾಜ್ ಸಿಂಗ್ ಪ್ರಶ್ನಿಸಿದ್ದಾರೆ. ನಾವೇನೋ ಚಂದ್ರನ ಅಂಗಳ ತಲುಪಿದ್ದೇವೆ, ಆದ್ರೆ ಪಾಕಿಸ್ತಾನ ಆರ್ಥಿಕ ದುಸ್ಥಿತಿಯ ಹೊಡೆತಕ್ಕೆ ಸಿಲುಕಿ ಕತ್ತೆಗಳನ್ನು ವಿದೇಶಗಳಿಗೆ ಮಾರಾಟ ಮಾಡ್ತಿದೆ ಎಂದು ಲೇವಡಿ ಮಾಡಿದ್ದಾರೆ.

ಭಾರತದ ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಅವರು ಪ್ರಯಾಣಿಸುತ್ತಿದ್ದ ವಿಮಾನ ಪಾಕಿಸ್ತಾನದ ವಾಯುಸೀಮೆ ಪ್ರವೇಶಿಸೋದಕ್ಕೆ ಅನುಮತಿಯನ್ನೇ ನೀಡಲಿಲ್ಲ. ಇದು ಪಾಕಿಸ್ತಾನದ ತಪ್ಪು ನಿರ್ಧಾರ ಎಂದ ಸಚಿವ ಗಿರಿರಾಜ್ ಸಿಂಗ್, ಅಂತಾರಾಷ್ಟ್ರೀಯ ಮಟ್ಟದಲ್ಲಿ ಪಾಕಿಸ್ತಾನ ಏಕಾಂಗಿಯಾಗಿದೆ ಎಂದು ಕುಟುಕಿದ್ರು.

ಪಾಕ್ ನಡೆಯಿಂದ ನಮಗೆ ಬೇಸರವಾಯ್ತು, ಪಾಕಿಸ್ತಾನದ ನೀಚಬುದ್ಧಿಯ ಅರಿವಾಯ್ತು. ಹಾಗೆ ನೋಡಿದ್ರೆ, ಕಾಶ್ಮೀರ ವಿಚಾರವಾಗಿ ಪಾಕಿಸ್ತಾನ ವಿಶ್ವಸಂಸ್ಥೆಯ ಮೊರೆ ಹೋಗಿತ್ತು. ಆದ್ರೆ, ಬರಿಗೈಯಲ್ಲಿ ಬರಬೇಕಾಯ್ತು. ಪಾಕಿಸ್ತಾನದ ಈ ನಿರ್ಧಾರಗಳಿಂದ ಎಂದಿಗೂ ಒಳ್ಳೆಯದಾಗಲ್ಲ ಎಂದು ಗಿರಿರಾಜ್ ಸಿಂಗ್ ಕಿಡಿ ಕಾರಿದ್ದಾರೆ.

ಪಾಕಿಸ್ತಾನ ನಮ್ಮೊಂದಿಗೆ ಸ್ಪರ್ಧೆ ಮಾಡುವುದಾದರೆ ವಿಜ್ಞಾನ, ತಂತ್ರಜ್ಞಾನ ಹಾಗೂ ಅಭಿವೃದ್ಧಿಯಲ್ಲಿ ಸ್ಪರ್ಧೆ ಮಾಡಲಿ ಎಂದು ಸವಾಲು ಹಾಕಿದ್ದಾರೆ. ಬಡತನ, ಹಸಿವನ್ನು ನೀಗಿಸಿ, ನಮ್ಮ ಪರಿಸ್ಥಿತಿ ಸುಧಾರಿಸಿಕೊಳ್ಳುತ್ತಿದ್ದೇವೆ ಎಂದು ಇಡೀ ವಿಶ್ವಕ್ಕೇ ಸಂದೇಶ ಕೊಡಿ. ಇವೆಲ್ಲವನ್ನೂ ಬಿಟ್ಟು ನಮ್ಮೊಂದಿಗೆ ಗುದ್ದಾಡಲು ಬಂದ್ರೆ ಹೀನಾಯ ಸೋಲು ಅನುಭವಿಸಬೇಕಾದೀತು ಎಂದು ಎಚ್ಚರಿಕೆ ನೀಡಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ