ಡಿ.ಕೆ.ಶಿವಕುಮಾರ್‍ರವರ ಬಂಧನ ಖಂಡಿಸಿ ಕಾಂಗ್ರೆಸ್ ಕಾರ್ಯಕರ್ತರ ಪ್ರತಿಭಟನೆ

ಬೆಂಗಳೂರು,ಸೆ.4- ಡಿ.ಕೆ.ಶಿವಕುಮಾರ್ ಅವರ ಬಂಧನವನ್ನು ಖಂಡಿಸಿ ಬೆಂಗಳೂರಿನ, ಮೌರ್ಯ ಸರ್ಕಲ್, ಬ್ರಿಗೇಡ್ ರಸ್ತೆ, ನವರಂಗ್ ವೃತ್ತ ಸೇರಿದಂತೆ ಹಲವು ಕಡೆ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.

ಮೌರ್ಯ ವೃತ್ತದಲ್ಲಿ ನಡೆದ ಪ್ರತಿಭಟನೆಯಲ್ಲಿ ರಾಜ್ಯ ಕಾಂಗ್ರೆಸ್ ನಾಯಕರು ಭಾಗವಹಿಸಿದ್ದರೆ, ವಿಧಾನಸಭಾ ಕ್ಷೇತ್ರವಾರು ನಡೆದ ಪ್ರತಿಭಟನೆಯಲ್ಲಿ ಸ್ಥಳೀಯ ನಾಯಕರು ಭಾಗವಹಿಸಿದ್ದರು. ಎಲ್ಲೆಡೆ ಟೈರ್‍ಗೆ ಬೆಂಕಿ ಹಚ್ಚಿ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಷಾ ವಿರುದ್ಧ ಧಿಕ್ಕಾರ ಕೂಗಲಾಯಿತು.

ನಗರದ ಮೌರ್ಯ ಸರ್ಕಲ್‍ನಲ್ಲಿ ಜಿಲ್ಲಾ ಕಾಂಗ್ರೆಸ್ ವತಿಯಿಂದ ನಡೆದ ಪ್ರತಿಭಟನೆ ವೇಳೆ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಅವರನ್ನು ರಾಜಕೀಯವಾಗಿ ಎದುರಿಸಲಾಗದೆ ಜಾರಿ ನಿರ್ದೇಶನಾಲಯವನ್ನು ಚೂ ಬಿಟ್ಟು ಬಿಜೆಪಿ ಹೇಡಿತನದ ರಾ ಜಕಾರಣ ಮಾಡುತ್ತಿದೆ ಎಂದು ಆರೋಪ ಮಾಡಿದರು.

ಕಾಂಗ್ರೆಸ್ ಪಕ್ಷ ಎಲ್ಲ ಷಡ್ಯಂತರಗಳನ್ನು ಸಮರ್ಥವಾಗಿ ಎದುರಿಸಲಿದೆ. ಯಾವುದಕ್ಕೂ ಹೆದರುವ ಪ್ರಶ್ನೆಯೇ ಇಲ್ಲ. ಡಿಕೆಶಿ ಅವರಿಗೆ ಪಕ್ಷದ ಸಂಪೂರ್ಣ ಬೆಂಬಲವಿದೆ ಎಂದು ಸ್ಪಷ್ಟಪಡಿಸಿದರು.

ಬಿಜೆಪಿಯಲ್ಲಿ ಯಾರೂ ಭ್ರಷ್ಟರು ಇಲ್ಲವೇ? ಕಾಂಗ್ರೆಸ್ ಕಾರ್ಯಕರ್ತರು, ಮುಖಂಡರು, ಬೆಂಬಲಿಗರು, ಜೆಡಿಎಸ್ ನಾಯಕರ ಮೇಲೆ ಮಾತ್ರ ಯಾಕೆ ಐಟಿ, ಸಿಬಿಐ ದಾಳಿಗಳು ಆಗುತ್ತಿವೆ. ಹಿಂದೆ ಚುನಾವಣೆ ಸಂದರ್ಭದಲ್ಲಿ ಕೇವಲ ಕಾಂಗ್ರೆಸ್, ಜೆಡಿಎಸ್ ನಾಯಕರನ್ನೇ ಗುರಿಯಾಗಿಸಿಕೊಂಡು ದಾಳಿ ನಡೆಸಲಾಗಿತ್ತು.

ಈಗ ವಿಧಾನಸಭೆಯ ಉಪಚುನಾವಣೆ ಎದುರಾಗುತ್ತಿದೆ. ಹಾಗಾಗಿ ಕಾಂಗ್ರೆಸ್ ನಾಯಕರಿಗೆ ಕೆಟ್ಟ ಹೆಸರು ತರಬೇಕು, ಅವರ ಹೆಸರುಗಳಿಗೆ ಮಸಿ ಬಳಿಯಬೇಕು ಎಂಬ ಕಾರಣಕ್ಕಾಗಿ ಬಿಜೆಪಿ ಹುನ್ನಾರ ನಡೆಸುತ್ತಿದೆ.

ಡಿ.ಕೆ.ಶಿವಕುಮಾರ್ ಅವರು ತನಿಖೆಗೆ ಎಲ್ಲ ರೀತಿ ಸಹಕಾರ ನೀಡಿದ್ದಾರೆ. ನಾಲ್ಕು ದಿನ ವಿಚಾರಣೆಗೆ ಹಾಜರಾಗಿದ್ದಾರೆ. ಅವರ ಕುಟುಂಬದ ತಾಯಿ, ಪತ್ನಿ ಮತ್ತು ಮಕ್ಕಳನ್ನು ವಿಚಾರಣೆಗೆ ಕರೆದೊಯ್ದಿದ್ದಾರೆ. ಅವರು ದೇಶ ಬಿಟ್ಟು ಹೋಗಿರಲಿಲ್ಲ. ಆದರೂ ಬಂಧಿಸಿದ್ದೇಕೆ ಎಂದು ಪ್ರಶ್ನಿಸಿದರು.

ಕೇಂದ್ರದ ಮಾಜಿ ಸಚಿವ ಚಿದಂಬರಂ ಕೂಡ ಎಲ್ಲ ರೀತಿ ಸಹಕಾರ ನೀಡುತ್ತಿದ್ದರು. ಆದರೆ ರಾತ್ರೋರಾತ್ರಿ ಅವರ ಮನೆಗೆ ನುಗ್ಗಿ ಗೇಟ್ ಹತ್ತಿ ಗೋಡೆ ಹಾರಿ ಅವರನ್ನು ಬಂಧಿಸಲಾಗಿದೆ. ಇದೆಲ್ಲ ಯಾವ ಉದ್ದೇಶಕ್ಕಾಗಿ ಮಾಡುತ್ತಿದ್ದೀರಾ? ಕೇವಲ ಕಾಂಗ್ರೆಸ್ ನಾಯಕರು ಮಾತ್ರ ನಿಮಗೆ ಕಣ್ಣಿಗೆ ಬೀಳುತ್ತಿದ್ದಾರಾ ಬಿಜೆಪಿಗೆ ಬೇರ್ಯಾರು ಕಾಣುವುದಿಲ್ಲವೇ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಆದಾಯ ತೆರಿಗೆ ತನ್ನ ಸ್ವಾಯತತೆಯನ್ನು ಕಳೆದುಕೊಂಡಿದೆ. ಬಿಜೆಪಿಯ ಕೈಗೊಂಬೆಯಂತೆ ವರ್ತಿಸುತ್ತಿದೆ. ಕೇಂದ್ರದ ಬಿಜೆಪಿ ನಾಯಕರು ಸೂಚಿಸಿದ ವ್ಯಕ್ತಿಗಳ ಮೇಲೆ ಮಾತ್ರ ಐಟಿ ದಾಳಿ ನಡೆಯುತ್ತಿದೆ. ಆಪರೇಷನ್ ಕಮಲದಲ್ಲಿ ನೂರಾರು ಕೋಟಿ ರೂ.ಗಳ ವಹಿವಾಟು ನಡೆದಿದೆ.

ಈಗಿನ ಉಪಮುಖ್ಯಮಂತ್ರಿ ಅಶ್ವಥ್ ನಾರಾಯಣ್, ಶಾಸಕ ಎಸ್.ಆರ್.ವಿಶ್ವನಾಥ್ ಅವರು ನನಗೆ 5 ಕೋಟಿ ಕೊಟ್ಟರು ಎಂದು ಜೆಡಿಎಸ್ ಶಾಸಕ ಶ್ರೀನಿವಾಸ್ ಗೌಡ ವಿಧಾನಸಭೆಯಲ್ಲಿ ಹೇಳಿಕೆ ನೀಡಿದ್ದಾರೆ. ಯಡಿಯೂರಪ್ಪ ಅವರು ಶಾಸಕರ ಖರೀದಿಗೆ ಹಣದ ಬಗ್ಗೆ ಮಾತನಾಡಿರುವ ಆಡಿಯೋ ಟೇಪ್ ಇದೆ. ಇವುಗಳು ಯಾಕೆ ತನಿಖೆಯಾಗಿಲ್ಲ, ಗುಜರಾತ್ ಶಾಸಕರನ್ನು ರಕ್ಷಿಸಿದ್ದಕ್ಕಾಗಿ ಡಿ.ಕೆ.ಶಿವಕುಮಾರ್ ಅವರನ್ನು ಗುರಿಯಾಗಿಟ್ಟುಕೊಂಡಿದ್ದೇಕೆ ಎಂದು ಪ್ರಶ್ನಿಸಿದರು.

ಮಾಧ್ಯಮಗಳ ಸ್ವಾತಂತ್ರ್ಯ ಹರಣವಾಗಿದೆ. ಮೋದಿ ಅವರನ್ನು ಟೀಕಿಸಿದ ಮಾಧ್ಯಮಗಳಿಗೆ ನೋಟಿಸ್ ನೀಡಿ ತೊಂದರೆ ಕೊಡಲಾಗುತ್ತಿದೆ. ಅಭಿವ್ಯಕ್ತಿ ಸ್ವಾತಂತ್ರ್ಯ ನಾಶವಾಗಿದೆ ಎಂದು ಅವರು ಕಿಡಿಕಾರಿದರು.

ಪ್ರತಿಭಟನೆಯಲ್ಲಿ ಮಾಜಿ ಸಂಸದ ಕೆ.ಎಚ್.ಮುನಿಯಪ್ಪ, ಶಾಸಕಿ ಸೌಮ್ಯರೆಡ್ಡಿ , ಹಿರಿಯ ನಾಯಕರಾದ ವೀರಣ್ಣ ಮತ್ತಿಕಟ್ಟಿ,ವಿ.ಆರ್.ಸುದರ್ಶನ್, ಸಿ.ನಾರಾಯಣಸ್ವಾಮಿ ಮತ್ತಿತರರು ಭಾಗವಹಿಸಿದ್ದರು. ಕಾರ್ಯಕರ್ತರು ಟೈರ್‍ಗೆ ಬೆಂಕಿ ಹಚ್ಚಿ ಆಕ್ರೋಶವನ್ನು ವ್ಯಕ್ತಪಡಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ