ಒಂದೆಡೆ ಅತಿವೃಷ್ಟಿ ಮತ್ತೊಂದೆಡೆ ಬರ ಪರಿಸ್ಥಿತಿ

ಬೆಂಗಳೂರು,ಸೆ.3-ಅತಿವೃಷ್ಟಿ ಹಾಗೂ ಪ್ರವಾಹದಿಂದ ರಾಜ್ಯದ ಅರ್ಧ ಭಾಗ ತತ್ತರಿಸಿದ್ದರೂ 1685 ಕೆರೆಗಳಿಗೆ ನೀರೇ ಬಂದಿಲ್ಲ. ಈ ಬಾರಿ ರಾಜ್ಯ ಒಂದೆಡೆ ಅತಿವೃಷ್ಟಿ ಮತ್ತೊಂದೆಡೆ ಬರ ಪರಿಸ್ಥಿತಿಯನ್ನು ಎದುರಿಸುತ್ತಿದೆ.

ರಾಜ್ಯದ 3611 ಸಣ್ಣ ಕೆರೆಗಳ ಪೈಕಿ ಪೂರ್ಣ ಪ್ರಮಾಣದಲ್ಲಿ ಭರ್ತಿಯಾಗಿರುವುದು 944 ಕೆರೆಗಳು ಮಾತ್ರ. ಜೂನ್-ಜುಲೈನಲ್ಲಿ ತೀವ್ರವಾದ ಮಳೆ ಕೊರತೆಯಿಂದಾಗಿ ಮುಂಗಾರು ಹಂಗಾಮಿನ ಬೆಳೆಗೆ ಹಿನ್ನಡೆಯಾಗಿರುವುದಲ್ಲದೆ ಕೆರೆಕಟ್ಟೆಗಳಿಗೂ ನಿರೀಕ್ಷಿತ ಪ್ರಮಾಣದಲ್ಲಿ ನೀರು ಬಂದಿಲ್ಲ.

ಜೂನ್, ಜುಲೈ ತಿಂಗಳಿನಲ್ಲಿ ವಾಡಿಕೆಗಿಂತ ಕಡಿಮೆ ಪ್ರಮಾಣದಲ್ಲಿ ಮಳೆಯಾದ ಪರಿಣಾಮ ತೇವಾಂಶ ಕಡಿಮೆಯಾಗಿ ಅಂತರ್ಜಲವು ಕುಸಿತ ಕಂಡಿದೆ.

ಆದರೆ ಆಗಸ್ಟ್ ತಿಂಗಳಿನಲ್ಲಿ ಹೆಚ್ಚು ಕಡಿಮೆ ಹಲವು ಕಡೆಗಳಲ್ಲಿ ಸಾಧಾರಣ ಪ್ರಮಾಣದ ಮಳೆಯಾಗಿದೆ. ಆದರೂ ಬರದ ಛಾಯೆ ಮಾತ್ರ ದೂರವಾಗಿಲ್ಲ. ಕರ್ನಾಟಕ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ಮಾಹಿತಿ ಪ್ರಕಾರ ಆಗಸ್ಟ್‍ವರೆಗೆ ರಾಜ್ಯದ 3611 ಸಣ್ಣ ಕೆರೆಗಳ ಪೈಕಿ 1685 ಕೆರೆಗಳಿಗೆ ನೀರೇ ಬಂದಿಲ್ಲ. ಆ ಕೆರೆಗಳು ನೀರಿಲ್ಲದೆ ಒಣಗುವಂತಾಗಿದೆ.

ಕೋಲಾರ 125, ಚಿಕ್ಕಬಳ್ಳಾಪುರ 173, ತುಮಕೂರು 297, ಚಿತ್ರದುರ್ಗ 116, ದಾವಣಗೆರೆ 64, ಚಾಮರಾಜನಗರ 51, ಮಂಡ್ಯ 37, ಹಾಸನ 54, ಬಳ್ಳಾರಿ 76, ಕೊಪ್ಪಳ 40, ರಾಯಚೂರು 21, ಕಲಬುರಗಿ 93, ಬೀದರ್ 123, ಬೆಳಗಾವಿ 74, ಬಾಗಲಕೋಟೆ 54, ವಿಜಯಪುರ 111, ಯಾದಗಿರಿ 67, ಚಿಕ್ಕಮಗಳೂರು 30 ಕೆರೆಗಳಿಗೆ ನೀರೇ ಬಾರದ ಸ್ಥಿತಿ ಇದೆ.

ಆದರೆ ಶಿವಮೊಗ್ಗ , ಕೊಡಗು, ದಕ್ಷಿಣ ಕನ್ನಡ, ಉಡುಪಿ, ಹಾವೇರಿ, ಉತ್ತರ ಕನ್ನಡ ಜಿಲ್ಲೆಗಳಲ್ಲಿ ಹೆಚ್ಚಿನ ಕೆರೆಗಳು ಸೇರಿದಂತೆ 994 ಕೆರೆಗಳು ಪೂರ್ಣ ಪ್ರಮಾಣದಲ್ಲಿ ಭರ್ತಿಯಾಗಿವೆ. 652 ಕೆರೆಗಳಿಗೆ ಶೇ.30ರಷ್ಟು ನೀರು ಬಂದಿದ್ದರೆ 150 ಕೆರೆಗಳಿಗೆ ಅರ್ಧದಷ್ಟು ಮಾತ್ರ ನೀರು ಬಂದಿದೆ. ಅರ್ಧಕ್ಕಿಂತ ಹೆಚ್ಚಿನ ಪ್ರಮಾಣದ ನೀರು 180 ಕೆರೆಗಳಲ್ಲಿ ಸಂಗ್ರಹವಾಗಿದೆ.

ಗ್ರಾಮೀಣ ಭಾಗದ ಜೀವನಾಡಿಯಾಗಿರುವ ಸಣ್ಣಕೆರೆಗಳು ಇನ್ನೆರಡು ತಿಂಗಳಲ್ಲಿ ಭರ್ತಿಯಾಗದಿದ್ದರೆ ಜಾನುವಾರುಗಳ ಕುಡಿಯುವ ನೀರಿಗೆ ತೊಂದರೆ ಉಂಟಾಗಲಿದೆ.

ಸಣ್ಣಕೆರೆಗಳ ವ್ಯಾಪ್ತಿಯಲ್ಲೂ ನೀರಾವರಿ ಪ್ರದೇಶ ಇದ್ದು ಇತ್ತೀಚಿನ ವರ್ಷಗಳಲ್ಲಿ ಭರ್ತಿಯಾಗದೆ ಬರದ ಛಾಯೆ ಮುಂದುವರೆಯುತ್ತಿರುವುದರಿಂದ ಕೃಷಿ ಚಟುವಟಿಕೆ ಕುಂಠಿತಗೊಂಡಿದೆ.

ಉತ್ತಮ ಪ್ರಮಾಣದ ಮಳೆ ಬಯಲುಸೀಮೆ, ಹಳೇಮೈಸೂರು ಹಾಗೂ ಹೈದರಾಬಾದ್ ಕರ್ನಾಟಕ ಪ್ರದೇಶಗಳಲ್ಲಿ ಬಂದರೆ ಮಾತ್ರ ಈ ಕೆರೆಗಳು ಭರ್ತಿಯಾಗಲು ಸಾಧ್ಯವಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ