ನಿಗಮ ಮಂಡಳಿ, ಅಕಾಡೆಮಿ ಮತ್ತು ಪ್ರಾಧಿಕಾರಗಳಿಗೆ ಮುಖ್ಯಸ್ಥರ ನೇಮಕ-ಭರ್ಜರಿ ಲಾಬಿ ಆರಂಭ

ಬೆಂಗಳೂರು,ಆ.30-ಸಚಿವ ಸಂಪುಟ ವಿಸ್ತರಣೆ ಹಾಗೂ ಪ್ರಮುಖ ಖಾತೆಗಳ ಹಂಚಿಕೆ ನಂತರ ಇದೀಗ ಆಡಳಿತಾರೂಢ ಬಿಜೆಪಿಯಲ್ಲಿ ನಿಗಮ ಮಂಡಳಿ, ಅಕಾಡೆಮಿ ಮತ್ತು ಪ್ರಾಧಿಕಾರಗಳ ಅಧ್ಯಕ್ಷ ಸ್ಥಾನ ಗಿಟ್ಟಿಸಲು ಭರ್ಜರಿ ಲಾಬಿ ಆರಂಭವಾಗಿದೆ.
ಸಚಿವರಿಗೆ ಖಾತೆ ಹಂಚಿಕೆಯಲ್ಲೇ ತಲೆ ಬಿಸಿ ಮಾಡಿಕೊಂಡಿದ್ದ ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ನಿಗಮ ಮಂಡಳಿ, ಅಕಾಡೆಮಿ ಮತ್ತು ಪ್ರಾಧಿಕಾರಗಳಿಗೆ ಮುಖ್ಯಸ್ಥರನ್ನು ನೇಮಕ ಮಾಡುವುದು ಮತ್ತೊಂದು ತಲೆನೋವಾಗಿ ಪರಿಣಮಿಸಿದೆ.
ಈ ಹಿಂದೆ 2008ರಲ್ಲಿ ಬಿಜೆಪಿ ಅಧಿಕಾರದಲ್ಲಿದ್ದ ವೇಳೆ ನಿಗಮ ಮಂಡಳಿಗಳಿಗೆ ಪಕ್ಷದ ನಿಷ್ಠಾವಂತರನ್ನು ಕಡೆಗಣಿಸಿ ವಲಸೆ ಬಂದವರಿಗೆ ಆದ್ಯತೆ ನೀಡಿದ್ದರಿಂದ ಸಂಘಟನೆಗೆ ಭಾರೀ ಹೊಡೆತ ಬಿದ್ದಿತ್ತು.
ಯಡಿಯೂರಪ್ಪ ಬಿಜೆಪಿ ತೊರೆದು ಕೆಜೆಪಿ ಕಟ್ಟಿದಾಗ ಸಂಪುಟ ಮತ್ತು ಆಯಾ ಹುದ್ದೆಯಲ್ಲಿ ಅಧಿಕಾರದ ರುಚಿ ಅನುಭವಿಸಿದವರು ಮಾತೃ ಪಕ್ಷವನ್ನು ತೊರೆದು ಹೋರ ಹೋಗಿದ್ದರಿಂದ ಮೂಲ ಕಾರ್ಯಕರ್ತರು ಮುನಿಸಿಕೊಂಡಿದ್ದರು.
ಪಕ್ಷದ ಧ್ವಜ ಕಟ್ಟಲು ನಾವು ಬೇಕು. ಅಧಿಕಾರ ಅನುಭವಿಸಲು ಮತ್ತೊಬ್ಬರು ಬೇಕು ಎಂದು ವರಿಷ್ಠರ ಮೇಲೆ ಕಣ್ಣು ಕೆಂಪು ಮಾಡಿಕೊಂಡಿದ್ದರು. ಇದೀಗ ಬಿಜೆಪಿ ಅಧಿಕಾರದಲ್ಲಿರುವುದರಿಂದ ತಮ್ಮನ್ನೇ ಪ್ರಮುಖ ಹುದ್ದೆಗಳಿಗೆ ಪರಿಗಣಿಸುವಂತೆ ಆಕಾಂಕ್ಷಿಗಳು ತೆರೆಮರೆಯಲ್ಲಿ ತಮ್ಮ ತಮ್ಮ ಗಾಡ್‍ಫಾದರ್‍ಗಳ ಮೂಲಕ ಒತ್ತಡದ ತಂತ್ರ ಅನುಸರಿಸುತ್ತಿದ್ದಾರೆ.
ಗಂಜಿಕೇಂದ್ರಗಳು: ರಾಜಕೀಯ ಪರಿಭಾಷೆಯಲ್ಲಿ ನಿಗಮ ಮಂಡಳಿ, ಅಕಾಡೆಮಿ ಮತ್ತು ಪ್ರಾಧಿಕಾರ ಹುದ್ದೆಗಳನ್ನು ಅನಾದಿ ಕಾಲದಿಂದಲೂ ಗಂಜಿ ಕೇಂದ್ರವೆಂದೇ ಕರೆಯಲಾಗುತ್ತದೆ.
ಮೂಲತಃ ಪಕ್ಷಕ್ಕೆ ದುಡಿದವರನ್ನು ಇಂತಹ ಹುದ್ದೆಗಳಿಗೆ ತಂದು ಕೂರಿಸುವ ಪರಿಪಾಠ ಜಮಾನದಿಂದಲೂ ನಡೆದುಕೊಂಡು ಬಂದಿದೆ. ಅದರಲ್ಲೂ ಎಸ್.ಎಂ.ಕೃಷ್ಣ ಮುಖ್ಯಮಂತ್ರಿಯಾಗಿದ್ದ ವೇಳೆ ದಾಖಲೆ ಪ್ರಮಾಣದಲ್ಲಿ ನಿಗಮ ಮಂಡಳಿಗಳಿಗೆ ಅಧ್ಯಕ್ಷರನ್ನು ನೇಮಕ ಮಾಡಿದ್ದರು.
ನಂತರ ಬಂದ ಸರ್ಕಾರಗಳು ಬಿಳಿ ಆನೆಯಂತಿರುವ ಕೆಲವು ನಿಗಮಮಂಡಳಿಗಳನ್ನು ರದ್ದುಪಡಿಸಿದವು. ಸದ್ಯಕ್ಕೆ ಸರ್ಕಾರದಲ್ಲಿ 100ಕ್ಕೂ ಹೆಚ್ಚು ನಿಗಮಮಂಡಳಿಗಳು, 35ಕ್ಕೂ ಹೆಚ್ಚು ಪ್ರಾಧಿಕಾರಗಳು, 30ಕ್ಕೂ ಹೆಚ್ಚು ಅಕಾಡೆಮಿಗಳು ಸೇರಿದಂತೆ ಒಟ್ಟು 210 ನಿಗಮಂಡಳಿಗಳಿವೆ.
ಪಕ್ಷಕ್ಕೆ ದುಡಿದವರು, ಸಮಾಜ ಸೇವಕರು ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದವರನ್ನು ಸಾಮಾನ್ಯವಾಗಿ ಇಂತಹ ಹುದ್ದೆಗಳಿಗೆ ನೇಮಕ ಮಾಡಲಾಗುತ್ತಿತ್ತು. ಆದರೆ ಇತ್ತೀಚೆಗೆ ಸಂಪುಟದಲ್ಲಿ ಸಚಿವ ಸ್ಥಾನ ಸಿಗದೆ ಮುನಿಸಿಕೊಂಡವರು, ರಾಜಕೀಯ ಪಕ್ಷಗಳ ಹಿಂಬಾಲಕರು, ಮುಖ್ಯಮಂತ್ರಿಗಳ ಆಪ್ತರು, ಅವರ ಕುಟುಂಬ ವರ್ಗದವರು, ಸಚಿವರು ಮತ್ತು ಶಾಸಕರ ಬಾಲಬಡುಕರು, ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಪಕ್ಷಕ್ಕೆ ಸೇರಿದವರನ್ನೇ ನೇಮಕ ಮಾಡುವಂತಹ ಕೆಟ್ಟ ಸಂಪ್ರದಾಯ ಆರಂಭವಾಗಿದೆ.
ಎಸ್.ಎಂ.ಕೃಷ್ಣ ಕಾಲದಲ್ಲಿ ಪ್ರಾರಂಭವಾದ ಈ ಸಂಪ್ರದಾಯವನ್ನು ನಂತರ ಬಂದ ಧರಂಸಿಂಗ್, ಎಚ್.ಡಿ.ಕುಮಾರಸ್ವಾಮಿ, ಯಡಿಯೂರಪ್ಪ , ಸಿದ್ದರಾಮಯ್ಯ, ಸಮ್ಮಿಶ್ರ ಸರ್ಕಾರದ ಮುಖ್ಯಸ್ಥರಾಗಿದ್ದ ಕುಮಾರಸ್ವಾಮಿ ಅವರು ಮುಂದುವರೆಸಿದರು.
ಇದೀಗ ಯಡಿಯೂರಪ್ಪ ಕೂಡ ಇದನ್ನೇ ಮುಂದುವರೆಸಬೇಕಾದ ಅನಿವಾರ್ಯತೆ ಇದೆ. ಈಗಾಗಲೇ ಸಚಿವ ಸ್ಥಾನ ಸಿಗದೆ ಮುನಿಸಿಕೊಂಡಿರುವವರನ್ನು ತೃಪ್ತಿಪಡಿಸಲು ಆರ್ಥಿಕವಾಗಿ ಸದೃಢವಾಗಿರುವ ಗಂಜಿ ಕೇಂದ್ರಗಳಿಗೆ ಕೆಲವು ಶಾಸಕರನ್ನು ಅಧ್ಯಕ್ಷರನ್ನಾಗಿ ಮಾಡುವ ತೀರ್ಮಾನಕ್ಕೆ ಬಂದಿದ್ದಾರೆ.
ಪ್ರಮುಖ ಹುದ್ದೆಗಳಿಗೆ ಲಾಬಿ:
ಮುಖ್ಯವಾಗಿ ಭೂ ಸೇನೆ, ಆಹಾರ ಮತ್ತು ನಾಗರಿಕ ಪೂರೈಕೆ, ಅರಣ್ಯ ಅಭಿವೃದ್ದಿ, ಉಗ್ರಾಣ ನಿಗಮ, ರಾಯಚೂರು ಚಿನ್ನದ ಗಣಿ, ಕೊಳಚೆ ನಿರ್ಮೂಲನ ಮಂಡಳಿ, ನಗರ ನೀರು ಕುಡಿಯುವ ಪೂರೈಕೆ, ಕಿಯೋನಿಕ್ಸ್ , ಕೆಎಸ್‍ಆರ್‍ಟಿಸಿ, ಬಿಎಂಟಿಸಿ, ಬಿಡಿಎ, ಸಣ್ಣ ಕೈಗಾರಿಕೆ, ಮಲೆನಾಡು ಅಭಿವೃದ್ದಿ ಮಂಡಳಿ, ಕಂಠೀರವ ಸ್ಟುಡಿಯೋ, ಕವಿಕಾ, ಡಾ.ಬಾಬು ಜಗಜೀವನರಾಮ್ ಅಭಿವೃದ್ದಿ , ಖಾದಿ ಮತ್ತು ಗ್ರಾಮೋದ್ಯೋಗ , ಎಂಎಸ್‍ಐಎಲ್, ಬಿಡಬ್ಲ್ಯೂಎಸ್‍ಎಸ್‍ಬಿ, ಕೆಐಎಡಿಬಿ, ಬಿಎಂಆರ್‍ಡಿಎ, ದೇವರಾಜು ಅರಸು ಅಭಿವೃದ್ದಿ ನಿಗಮ, ಕೃಷ್ಣ ಜಲಭಾಗ್ಯ, ಮೈಸೂರು ಪೇಪರ್ ಮಿನರಲ್ಸ್ ಸೇರಿದಂತೆ ಮತ್ತಿತರ ಮಂಡಳಿಗೆ ಲಾಬಿ ಆರಂಭವಾಗಿದೆ.
ಇನ್ನು ನಾಟಕ ಅಕಾಡೆಮಿ, ಪುಸ್ತಕ, ಲಲಿತಾ ಕಲಾ ಅಕಾಡೆಮಿ, ಸಂಗೀತ, ಜನಪದ, ಚಲನಚಿತ್ರ, ಮಾಧ್ಯಮ ಅಕಾಡೆಮಿಗಳಿಗೂ ಸಿಎಂ ಮೇಲೆ ಪ್ರಭಾವ ಬೀರುತ್ತಿದ್ದಾರೆ.
ಇದೇ ರೀತಿ ಕನ್ನಡ ಅಭಿವೃದ್ದಿ ಪ್ರಾಧಿಕಾರ , ಗಡಿ ಅಭಿವೃದ್ದಿ ಪ್ರಾಧಿಕಾರ, ಕರಾವಳಿ ಅಭಿವೃದ್ಧಿ ಪ್ರಾಧಿಕಾರ, ಮಲೆನಾಡು ಅಭಿವೃದ್ಧಿ, ಬಯಲು ಸೀಮೆ, ಹೈದರಾಬಾದ್ ಕರ್ನಾಟಕ ಅಭಿವೃದ್ದಿ ಪ್ರಾಧಿಕಾರ, ದೆಹಲಿ ವಿಶೇಷ ಪ್ರತಿನಿಧಿ, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಗಳ ಹುದ್ದೆಗೆ ಆಗಲೇ ಲಾಬಿ ನಡೆಯುತ್ತಿದೆ.
ಆದರೆ ಸಂಪುಟ ವಿಸ್ತರಣೆ, ನೆನೆಗುದಿಗೆ ಬಿದ್ದಿರುವುದರಿಂದ ಯಡಿಯೂರಪ್ಪ ಅಸಮಾಧಾನಗೊಂಡಿರುವ ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲು ಗಂಜಿ ಕೇಂದ್ರಕ್ಕೆ ನೇಮಕ ಮಾಡುವ ಸಾಧ್ಯತೆಗಳು ಹೆಚ್ಚಳವಾಗಿವೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ