ಇಂದಿರಾ ಕ್ಯಾಂಟೀನ್ ಹೆಸರನ್ನು ಬದಲಾವಣೆ ಮಾಡಲು ಚಿಂತನೆ

ಬೆಂಗಳೂರು, ಆ.27-ಆಯಾ ಜಿಲ್ಲೆಗಳ ಅತ್ಯಂತ ಪ್ರಮುಖರ ಹೆಸರನ್ನು ಇಡುವ ಮೂಲಕ ಇಂದಿರಾ ಕ್ಯಾಂಟೀನ್‍ಗಳಿಗೆ ಎಳ್ಳು ನೀರು ಬಿಡಲು ಬಿಜೆಪಿ ಮುಂದಾಗಿದೆ.
ಕೆಲವೆಡೆ ಇಂದಿರಾ ಕ್ಯಾಂಟೀನ್‍ಗಳಲ್ಲಿ ಅವ್ಯವಹಾರ ನಡೆದಿದೆ ಎಂಬ ಆರೋಪಗಳು ಕೇಳಿ ಬಂದಿವೆ. ಮತ್ತೆ ಕೆಲವೆಡೆ ಆಹಾರದ ಗುಣಮಟ್ಟ ಸರಿಯಿಲ್ಲ ಎನ್ನುವವರು ಇದ್ದಾರೆ. ಆದರೆ ಬಹಳಷ್ಟು ಜನರಿಗೆ ಇಂದಿರಾ ಕ್ಯಾಂಟೀನ್‍ಗಳು ಉಪಯುಕ್ತವಾಗಿವೆ. ಆದರೂ ಬಿಜೆಪಿ ಸರ್ಕಾರ ಇಂದಿರಾ ಕ್ಯಾಂಟೀನ್ ಹೆಸರನ್ನು ಬದಲಾವಣೆ ಮಾಡಲು ಚಿಂತನೆ ನಡೆಸಿದೆ.

ಇಂದಿರಾ ಹೆಸರು ತೆಗೆದು ಆಯಾ ಜಿಲ್ಲೆಗಳ ಸಾಧಕರ ಹೆಸರನ್ನು ಇಡಲು ಸರ್ಕಾರ ಇಚ್ಛಿಸಿದ್ದು, ಮೈಸೂರಿನಲ್ಲಿ ಜಯಚಾಮರಾಜ ಒಡೆಯರ್, ತುಮಕೂರಿನಲ್ಲಿ ಶಿವಕುಮಾರಸ್ವಾಮೀಜಿ, ಬೆಂಗಳೂರಿನಲ್ಲಿ ಕೆಂಪೇಗೌಡರ ಹೆಸರು ಹೀಗೆ ಕ್ಯಾಂಟೀನ್‍ಗಳಿಗೆ ಸಾಧಕರ ಹೆಸರಿಡಲು ಸರ್ಕಾರ ಇಚ್ಛಿಸಿದೆ ಎಂದು ಮೂಲಗಳು ತಿಳಿಸಿವೆ.
ಆಯಾ ಜಿಲ್ಲೆಗಳಲ್ಲಿ ಸಾಧಕರ ಹೆಸರನ್ನು ಕ್ಯಾಂಟೀನ್‍ಗೆ ನಾಮಕಾರಣ ಮಾಡಿದರೆ ಯಾರಿಂದಲೂ ವಿರೋಧ ವ್ಯಕ್ತವಾಗುವುದಿಲ್ಲ ಎಂಬ ಅನಿಸಿಕೆಯನ್ನು ಬಿಜೆಪಿ ಹೊಂದಿದೆ.
ಅವ್ಯವಹಾರದ ಹೆಸರಲ್ಲಿ ಇಂದಿರಾ ಕ್ಯಾಂಟೀನ್ ಯೋಜನೆ ಬಗ್ಗೆ ತನಿಖೆ ನಡೆಸಲು ಮುಂದಾಗಿರುವ ಸರ್ಕಾರ, ಆಯಾ ಜಿಲ್ಲೆಯ ಪ್ರಸಿದ್ಧ ವ್ಯಕ್ತಿ ಅಥವಾ ಸಾಧಕರ ಹೆಸರನಿಟ್ಟು ಇಂದಿರಾ ಗಾಂಧಿ ಹೆಸರನ್ನು ನೇಪಥ್ಯಕ್ಕೆ ಸರಿಸಲು ಮುಂದಾಗಿದ್ದು, ಸದ್ದಿಲ್ಲದೆ ಕಾಂಗ್ರೆಸ್ ಯೋಜನೆಗಳಿಗೆ ಎಳ್ಳುನೀರು ಬಿಡಲು ಮುಂದಾಗಿದೆ ಎಂದು ತಿಳಿದು ಬಂದಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ