ಕಾಮಗಾರಿಯಲ್ಲಿ ಭ್ರಷ್ಟಾಚಾರ ಹಿನ್ನಲೆ-ವೈಟ್ ಟ್ಯಾಪಿಂಗ್‍ನ ಟೆಂಡರ್ ಪ್ರಕ್ರಿಯೆಗೆ ತಡೆ

ಬೆಂಗಳೂರು, ಆ.18- ಟೆಂಡರ್ ಶೂರ್ ಯೋಜನೆಯಡಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ ಕೈಗೊಂಡಿರುವ ವೈಟ್ ಟಾಪಿಂಗ್‍ನ ಟೆಂಡರ್ ಪ್ರಕ್ರಿಯೆಯನ್ನು ತಕ್ಷಣವೇ ತಡೆಹಿಡಿಯುವಂತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನಗರಾಭಿವೃದ್ಧಿ ಇಲಾಖೆಯ ಅಪರ ಮುಖ್ಯಕಾರ್ಯದರ್ಶಿಗೆ ಸೂಚಿಸಿದ್ದಾರೆ.

ಮೂರನೇ ಹಂತದ 89 ರಸ್ತೆಗಳ 1139 ಕೋಟಿ ಮೊತ್ತದ ಟೆಂಡರ್ ಪ್ರಕ್ರಿಯೆಯನ್ನು ಕೂಡಲೇ ತಡೆಹಿಡಿಯಬೇಕು ಎಂದು ನಗರಾಭಿವೃದ್ಧಿ ಇಲಾಖೆಯ ಅಪರ ಕಾರ್ಯದರ್ಶಿಗೆ ತಿಳಿಸಿದ್ದಾರೆ.

ಟೆಂಡರ್ ಶೂರ್ ಯೋಜನೆಯಡಿ 25 ರಸ್ತೆಗಳ ಅಭಿವೃದ್ಧಿ ಹೆಸರಿನಲ್ಲಿ 430 ಕೋಟಿ ಮೊತ್ತದ ಅನುದಾನದಲ್ಲಿ ದೊಡ್ಡ ಪ್ರಮಾಣದ ಅವ್ಯವಹಾರ ನಡೆದಿದೆ ಎಂಬ ಆರೋಪಗಳು ಕೇಳಿ ಬಂದಿದೆ. ಕೂಡಲೇ ಈ ಬಗ್ಗೆ ತನಿಖಾ ವರದಿಯನ್ನು ನೀಡುವಂತೆಯೂ ಸಿಎಂ ಸೂಚನೆ ಕೊಟ್ಟಿದ್ದಾರೆ.

ವೈಟ್ ಟಾಪಿಂಗ್ ಯೋಜನೆಯ ಎರಡನೇ ಹಂತದ 1490 ಕೋಟಿ ಮೊತ್ತದ 70 ರಸ್ತೆಗಳ ಕಾಮಗಾರಿಯಲ್ಲಿ ಅಪಾರ ಪ್ರಮಾಣದ ಭ್ರಷ್ಟಾಚಾರ ನಡೆದಿದೆ ಎಂಬ ದೂರುಗಳು ಬಂದಿವೆ. ಈ ಬಗ್ಗೆ ತುರ್ತಾಗಿ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಹೇಳಿದ್ದಾರೆ.

ಮೂರನೇ ಹಂತದ ತನಿಖಾ ವರದಿ ಬಂದ ನಂತರವೇ 1139 ಕೋಟಿ ಮೊತ್ತದ 89 ರಸ್ತೆಗಳ ಟೆಂಡರ್ ಪ್ರಕ್ರಿಯೆ ನಡೆಸಬೇಕು.ಅಲ್ಲಿಯವರೆಗೂ ಯಾವುದೇ ರೀತಿಯ ಯೋಜನೆಯನ್ನು ನಡೆಸಬಾರದೆಂದು ನಗರಾಭಿವೃದ್ಧಿಯ ಅಪರ ಕಾರ್ಯದರ್ಶಿಗೆ ಯಡಿಯೂರಪ್ಪ ಕಟ್ಟುನಿಟ್ಟಿನ ತಾಕೀತು ಮಾಡಿದ್ದಾರೆ.

ಟೆಂಡರ್ ಯೋಜನೆಯಡಿ ಕೈಗೊಂಡ ವೈಟ್‍ಟಾಪಿಂಗ್‍ನಲ್ಲಿ ಭಾರೀ ಪ್ರಮಾಣದ ಭ್ರಷ್ಟಾಚಾರ ನಡೆದಿದೆ ಎಂಬ ಆರೋಪ ಸಾರ್ವಜನಿಕ ವಲಯದಲ್ಲಿ ಕೇಳಿಬಂದಿತ್ತು.

ರಾಷ್ಟ್ರೀಯ ಹೆದ್ದಾರಿಯ ಒಂದು ಕಿ.ಮೀ. ರಸ್ತೆಗೆ ವೆಚ್ಚವಾಗುವ ಹಣಕ್ಕಿಂತಲೂ ಬಿಬಿಎಂಪಿ ವ್ಯಾಪ್ತಿಯಲ್ಲಿ ದುಪ್ಪಟ್ಟು ಹಣ ಖರ್ಚು ಮಾಡಲಾಗಿದೆ ಎಂಬ ಗುಮಾನಿ ಹಬ್ಬಿತ್ತು.

ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ವೈಟ್ ಟಾಪಿಂಗ್ ಹಗರಣವನ್ನು ಈಗಾಗಲೇ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ತನಿಖೆ ನಡೆಸಿ ವರದಿ ನೀಡುವಂತೆ ಸೂಚಿಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ