ನೌಹೀರಾ ಶೇಖ್ ಒಡೆತನದ 300 ಕೋಟಿ ಆಸ್ತಿ ಜಪ್ತಿ

Varta Mitra News

ಬೆಂಗಳೂರು,ಆ.17- ಬ್ಯಾಂಕ್‍ಗಳಿಗಿಂತ ಅಧಿಕ ಬಡ್ಡಿ ನೀಡುವ ಆಮಿಷ ಒಡ್ಡಿ ದೇಶದ ವಿವಿಧ ರಾಜ್ಯಗಳ ಜನತೆಗೆ ವಂಚನೆ ಮಾಡಿದ್ದ ಹೀರಾ ಗೋಲ್ಡ್ ಕಂಪೆನಿ ಹೆಸರಿನ ನೌಹೀರಾ ಶೇಖ್ ಒಡೆತನದ 300 ಕೋಟಿ ಆಸ್ತಿ, ಹಣವನ್ನು ಜಾರಿನಿರ್ದೇಶನಾಲಯದ(ಇಡಿ)ಅಧಿಕಾರಿಗಳು ಜಪ್ತಿ ಮಾಡಿದ್ದಾರೆ.
ಕರ್ನಾಟಕ, ಕೇರಳ, ಮಹಾರಾಷ್ಟ್ರ ತೆಲಂಗಾಣ, ದೆಹಲಿ ಸೇರಿದಂತೆ ಅನೇಕ ರಾಜ್ಯಗಳ ಜನರಿಗೆ ಸಾವಿರಾರು ಕೋಟಿ ಪಂಗನಾಮ ಹಾಕಿದ್ದ ಎಂಇಪಿ ಪಕ್ಷದ ಮುಖ್ಯಸ್ಥೆ ನೌಹೀರಾ ಶೇಕ್‍ಗೆ ಸೇರಿದ ಸುಮಾರು 300 ಕೋಟಿಗೂ ಅಧಿಕ ಆಸ್ತಿ ಹಾಗೂ ಹಣವನ್ನು ಜಾರಿ ನಿರ್ದೇಶನಾಲಯ(ಇಡಿ) ಅಧಿಕಾರಿಗಳು ಜಪ್ತಿ ಮಾಡಿದ್ದಾರೆ.

ಕಳೆದ ವರ್ಷ ವಿಧಾನಸಭೆ ಚುನಾವಣೆ ವೇಳೆ ಇಂಡಿಯನ್ ಮಹಿಳಾ ಎಂಪವರ್‍ಮೆಂಟ್ ಪಾರ್ಟಿ ಹೆಸರಿನಲ್ಲಿ ರಾಜ್ಯದಲ್ಲಿ ತಮ್ಮ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದ ನೌಹೀರಾ ಶೇಕ್ ಕಾಂಗ್ರೆಸ್ ಹಾಗೂ ಜೆಡಿಎಸ್ ಮತಗಳನ್ನು ಒಡೆದಿದ್ದರು, ಅಲ್ಲದೆ ತೆಲಂಗಾಣದಲ್ಲೂ ಅಭ್ಯರ್ಥಿಗಳನ್ನು ಕಣಕ್ಕಿಳಿಸುವುದಾಗಿ ಅಲ್ಲಿನ ಮುಖ್ಯಮಂತ್ರಿ ಚಂದ್ರಶೇಖರ್ ರಾವ್ ಅವರಿಗೆ ಬೆದರಿಕೆ ಒಡ್ಡಿದ್ದರು. ಈ ಸಂದರ್ಭದಲ್ಲಿ ಇವರ ವಿರುದ್ಧ ಹಣ ವಂಚನೆ ಆರೋಪ ಕೇಳಿ ಬಂದಿತ್ತು. ಹೀಗಾಗಿ ಚುನಾವಣೆಗೆ ಕೆಲವೇ ದಿನ ಬಾಕಿ ಇದ್ದಂತೆ ತೆಲಂಗಾಣ ಪೆÇಲೀಸರು ಈಕೆಯನ್ನು ಬಂಧಿಸಿದ್ದರು.

ವಂಚನೆ ಆರೋಪವೇನು?
ಹೀರಾ ಗೋಲ್ಡ್ ಕಂಪನಿ ಮುಖ್ಯಸ್ಥರೂ ಆಗಿರುವ ನೌಹೀರಾ, ಬ್ಯಾಂಕ್‍ಗಳಿಗಿಂತ ಹೆಚ್ಚಿನ ಬಡ್ಡಿ ನೀಡುವುದಾಗಿ ದೇಶದಾದ್ಯಂತ ನೂರಾರು ಕೋಟಿ ರೂ.ಗಳನ್ನು ಕಲೆಹಾಕಿ ವಂಚಿಸಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು.ಈ ಆರೋಪದಲ್ಲಿ ಹಲವು ರಾಜ್ಯಗಳ ಜನರು ಆಕೆಯ ಮೇಲೆ ದೂರು ನೀಡಿದ್ದ ಹಿನ್ನೆಲೆಯಲ್ಲಿ ಇಂದು ಹೈದರಾಬಾದ್‍ನಲ್ಲಿ ಬಂಧಿಸಲಾಗಿದೆ.ಇತ್ತೀಚೆಗಷ್ಟೇ ಹೀರಾ ಗೋಲ್ಡ್ ಕಂಪನಿಯಿಂದ ಮೋಸಕ್ಕೊಳಗಾದ 100ಕ್ಕೂ ಹೆಚ್ಚು ಸಂತ್ರಸ್ತರು ಹೈದರಾಬಾದ್‍ನಲ್ಲಿ ಸಾರ್ವಜನಿಕವಾಗಿ ಪ್ರತಿಭಟನೆ ನಡೆಸಿದ್ದರು.

ಯಾರು ಈ ನೌಹೀರಾ ಶೇಖ್?:
ನೌಹೀರಾ ಶೇಖ್ ಮೂಲತಃ ಆಂಧ್ರಪ್ರದೇಶದ ತಿರುಪತಿಯವರು.1973ರಲ್ಲಿ ಶೇಖ್ ಮೋಹಿಯುದ್ದೀನ್ ಸಾಹೇಬ್ ಕೋಲ್ಕರ್ ಮತ್ತು ಶೇಖ್ ಬಾಲ್ಕಿಜ್ ದಂಪತಿಗೆ ಜನಿಸಿದ ನೌಹೀರಾ, ಸಣ್ಣ ವಯಸ್ಸಿನಲ್ಲೇ ತಂದೆ ನಡೆಸುತ್ತಿದ್ದ ಉದ್ಯಮಗಳಲ್ಲಿ ತೊಡಗಿಕೊಂಡರು.

ಇಸ್ಲಾಂ ಧರ್ಮದ ಬಗ್ಗೆ ಆಸಕ್ತಿ ಹೊಂದಿದ್ದ ನೌಹೀರಾ, ಧರ್ಮದ ಬಗ್ಗೆ ಹೆಚ್ಚು ಸಂಶೋಧನೆಗಳನ್ನು ಮಾಡಿದರು.ನಂತರ ಇಸ್ಲಾಂ ವೈಜ್ಞಾನಿಕ ಸಂಶೋಧನೆಯಲ್ಲಿ ಪದವೀಧರೆಯಾದರು.ಜತೆಗೆ, ಇಸ್ಲಾಂ ಕುರಿತಾಗಿ ಮಹಿಳೆಯರಿಗೆ ಪ್ರವಚನವನ್ನೂ ನೌಹೀರಾ ನೀಡುತ್ತಿದ್ದರು.ಕೊಲಂಬೋ ಅಂತಾರಾಷ್ಟ್ರೀಯ ಮುಕ್ತ ವಿಶ್ವವಿದ್ಯಾನಿಲಯದಿಂದ ಗೌರವ ಡಾಕ್ಟರೇಟ್ ಕೂಡ ನೌಹೀರಾಗೆ ಲಭಿಸಿತ್ತು.

2014ರ ಮೇ+ ತಿಂಗಳಿನಲ್ಲಿ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಹೀರಾ ಸಮೂಹ ಸಂಸ್ಥೆಗಳ ಅಕ್ರಮ ಪತ್ತೆಗಾಗಿ ಆಂಧ್ರ ಪ್ರದೇಶದ ಟೋಲಿ ಚೌಕಿಯಲ್ಲಿರುವ ಕಚೇರಿಯಲ್ಲಿ ಹುಡುಕಾಟ ನಡೆಸಿದ್ದರು.ನಂತರ ಅಧಿಕಾರಿಗಳು ವಿದೇಶಿ ವಿನಿಮಯ ನಿರ್ವಹಣಾ ಕಾಯಿದೆಯಡಿ ಪ್ರಕರಣವನ್ನು ದಾಖಲಿಸಿಕೊಂಡಿದ್ದರು.
ಹೀರಾ ಗ್ರೂಪ್ ಭಾರತ ಮತ್ತು ವಿದೇಶಗಳಲ್ಲಿ ಕಂಪನಿಗಳನ್ನು ಹೊಂದಿದೆ ಮತ್ತು ಅದು ಹವಾಲಾ ಅವ್ಯವಹಾರಗಳಂತಹ ಗಂಭೀರ ಆರೋಪಗಳನ್ನು ಎದುರಿಸುತ್ತಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ