ಎಲ್ಲರನ್ನೂ ಕಾಡುತ್ತಿರುವ ಅನರ್ಹ ಶಾಸಕರ ಮುಂದಿನ ನಡೆ

ಬೆಂಗಳೂರು,ಆ.17- ಸಮ್ಮಿಶ್ರ ಸರ್ಕಾರದ ವಿರುದ್ಧ ಬಂಡಾಯದ ಬಾವುಟ ಹಾರಿಸಿ ಸರ್ಕಾರ ಪಥನಕ್ಕೆ ಕಾರಣರಾದ ಅನರ್ಹ ಶಾಸಕರ ಮುಂದಿನ ನಡೆ ಏನು ಎಂಬ ಪ್ರಶ್ನೆ ಇದೀಗ ಎಲ್ಲರನ್ನೂ ಕಾಡುತ್ತಿದೆ.

ನ್ಯಾಯಾಲಯದಲ್ಲಿ ತಮ್ಮ ರಾಜಕೀಯ ಭವಿಷ್ಯದ ತೀರ್ಪು ಪ್ರಕಟವಾಗಬೇಕಾದ ಹಿನ್ನೆಲೆಯಲ್ಲಿ ಕ್ಷೇತ್ರದಲ್ಲಿ ತಮ್ಮದೇ ಸಿದ್ಧತೆ ಮಾಡಿಕೊಳ್ಳತೊಡಗಿದ್ದಾರೆ.ಒಂದು ವೇಳೆ ನ್ಯಾಯಾಲಯದಲ್ಲಿ ಹಿನ್ನಡೆಯಾದರೆ ಕೆಲವು ಶಾಸಕರು ತಮ್ಮ ಉತ್ತರಾಧಿಕಾರಿಗಳನ್ನು ಅಖಾಡಕ್ಕೆ ಇಳಿಸುವ ಸಿದ್ಧತೆ ಮಾಡಿಕೊಳ್ಳತೊಡಗಿದ್ದಾರೆ.
ಕೆಲವರು ಚುನಾವಣಾ ರಾಜಕಾರಣದ ಸಹವಾಸವೇ ಬೇಡ ಎಂದು ನಿವೃತ್ತಿಯ ಚಿಂತನೆ ನಡೆಸಿದ್ದರೆ, ಮತ್ತೆ ಕೆಲವರು ನ್ಯಾಯಾಲಯದ ತೀರ್ಪು ನೋಡಿ ಮುಂದಿನ ತೀರ್ಮಾನ ಮಾಡೋಣ ಎಂಬ ನಿರ್ಧಾರಕ್ಕೆ ಬಂದಿದ್ದಾರೆ.

ಕೆಲವು ಅನರ್ಹ ಶಾಸಕರು ಅನಿವಾರ್ಯ ಪರಿಸ್ಥಿತಿ ಎದುರಾದರೆ ತಮ್ಮ ಉತ್ತರಾಧಿಕಾರಿಗಳನ್ನು ಅಖಾಡಕ್ಕೆ ಇಳಿಸಲು ಸಿದ್ಧತೆ ನಡೆಸಿದ್ದಾರೆ.ತಮ್ಮ ಉತ್ತರಾಧಿಕಾರಿ ಮುಂದೆ ಕೂಡ ತಮ್ಮ ಮಾತು ಕೇಳಬೇಕು. ಇಲ್ಲ ತಾವು ಬಯಸಿದಾಗ ತಮಗೆ ಅವಕಾಶ ಮಾಡಿಕೊಡಬೇಕು ಅಂತವರನ್ನೇ ಉತ್ತರಾಧಿಕಾರಿಯಾಗಿ ಚುನಾವಣಾ ಅಖಾಡಕ್ಕೆ ಇಳಿಸುವ ಲೆಕ್ಕಾಚಾರದಲ್ಲಿದ್ದಾರೆ.

ಈಗಾಗಲೇ 17 ಅನರ್ಹ ಶಾಸಕರ ಪೈಕಿ 13 ಮಂದಿ ತಮ್ಮ ಉತ್ತಾರಧಿಕಾರಿಗಳನ್ನು ಗುರುತಿಸಿದ್ದಾರೆ. ನ್ಯಾಯಾಲಯದ ತೀರ್ಪು ವ್ಯತಿರಿಕ್ತವಾಗಿ ಬಂದರೆ ತಮ್ಮ ಪರವಾಗಿ ತಮ್ಮ ಉತ್ತರಾಧಿಕಾರಿಗಳನ್ನು ಚುನಾವಣಾ ಅಖಾಡಕ್ಕೆ ಇಳಿಸುವ ಪ್ಲಾನ್ ಮಾಡಿದ್ದಾರೆ. ಅದರಲ್ಲಿ ಮೂವರು ಶಾಸಕರು ತಮ್ಮ ಪತ್ನಿಯರನ್ನು ಅಖಾಡಕ್ಕೆ ಇಳಿಸಲು ಸಿದ್ಧತೆ ಮಾಡಿಕೊಂಡಿದ್ದಾರೆ.

ಅಥಣಿ ಶಾಸಕ ಮಹೇಶ್ ಕುಮುಟಳ್ಳಿ ಸಹೋದರನನ್ನು ಅಖಾಡಕ್ಕೆ ಇಳಿಸಿದರೆ, ಚಿಕ್ಕಬಳ್ಳಾಪುರ ಶಾಸಕ ಸುಧಾಕರ್ ತಮ್ಮ ತಂದೆಯವರನ್ನು ಆಖಾಡಕ್ಕಿಳಿಸಲು ವೇದಿಕೆ ಸಿದ್ದಪಡಿಸುತ್ತಿದ್ದಾರೆ.
ಆರಿ ಅನರ್ಹ ಶಾಸಕರು ತಮ್ಮ ಮಕ್ಕಳನ್ನ ಉತ್ತರಾಧಿಕಾರಿಯಾಗಿಸಲು ಮುಂದಾಗಿದ್ದು, 5 ಶಾಸಕರ ಗಂಡು ಮಕ್ಕಳು ಹಾಗೂ ಬಿ.ಸಿ.ಪಾಟೀಲ್ ಮಗಳನ್ನು ಉತ್ತರಾಧಿಕಾರಿಯಾಗಿ ಅಖಾಡಕ್ಕೆ ಇಳಿಸಲು ಕಸರತ್ತು ಅರಂಭಿಸಿದ್ದಾರೆ.

ಬೆಳಗಾವಿ ಮಾಜಿ ಶಾಸಕ ರಮೇಶ್ ಜಾರಕಿಹೋಳಿ ತಮ್ಮ ಅಳಿಯನನ್ನು ಉತ್ತರಾಧಿಕಾರಿ ಮಾಡಲು ಮುಂದಾದರೆ, ಆನಂದ್ ಸಿಂಗ್ ಮಗ ಅಥವಾ ಅಳಿಯ ಇಬ್ಬರಲ್ಲಿ ಒಬ್ಬರನ್ನು ಸ್ಪರ್ಧೆಗಿಳಿಸುವುದು ಖಚಿತವಾಗಿದೆ.

17ರಲ್ಲಿ 13 ಅನರ್ಹ ಶಾಸಕರು ತಮ್ಮ ಉತ್ತರಾಧಿಕಾರಿಗಳನ್ನು ಸಿದ್ಧಪಡಿಸಿಕೊಂಡಿದ್ದಾರೆ.ಉಳಿದ ನಾಲ್ವರಲ್ಲಿ ಇಬ್ಬರು ಚುನಾವಣಾ ಅಖಾಡದಿಂದಲೆ ಹಿಂದಕ್ಕೆ ಸರಿಯಲು ನಿರ್ಧರಿಸಿದ್ದಾರೆ.ಉಳಿದಿಬ್ಬರು ನ್ಯಾಯಾಲಯದ ತೀರ್ಪಿಗಾಗಿ ಕಾಯಲು ತೀರ್ಮಾನಿಸಿದ್ದಾರೆ ಎನ್ನಲಾಗಿದೆ.
17 ಅನರ್ಹ ಶಾಸಕರ ಪೈಕಿ ಎಚ್.ವಿಶ್ವನಾಥ್ ಹಾಗೂ ನಾರಾಯಣ ಗೌಡ ರಾಜಕಾರದಿಂದಲೇ ನಿವೃತ್ತರಾಗಲು ತೀರ್ಮಾನಿಸಿದ್ದರೆ, ಮುನಿರತ್ನ ಹಾಗೂ ಆರ್.ಶಂಕರ್ ಕಾದು ನೋಡುವ ತಂತ್ರಕ್ಕೆ ಮೊರೆ ಹೋಗಿದ್ದಾರೆ.ಆದರೆ ಉಳಿದ 13 ಅನರ್ಹರು ಮಾತ್ರ ತಮ್ಮ ಉತ್ತರಾಧಿಕಾರಿಗಳನ್ನು ಈಗಾಗಲೇ ಸಿದ್ಧಪಡಿಸಿಕೊಂಡಿದ್ದು ಅಖಾಡಕ್ಕೆ ಧುಮುಕಲು ಸಜ್ಜಾಗಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ