ಸಿಎಂ ತುರ್ತು ಸುದ್ದಿಗೋಷ್ಠಿ; ಎಷ್ಟೇ ಖರ್ಚಾದ್ರೂ ನಿರಾಶ್ರಿತರಿಗೆ ಪುನರ್ವಸತಿ ಕಲ್ಪಿಸುವ ಆಶ್ವಾಸನೆ!

ಬೆಂಗಳೂರು; ರಾಜ್ಯದಲ್ಲಿ ನೆರೆ ಪರಿಸ್ಥಿತಿ ಕೈ ಮೀರಿದೆ. 16 ಜಿಲ್ಲೆಯ 80 ತಾಲೂಕುಗಳು ಪ್ರವಾಹಕ್ಕೆ ತುತ್ತಾಗಿವೆ, ಅಪಾರ ಸಂಖ್ಯೆಯ ಜನ ಮನೆಮಠ ಕಳೆದುಕೊಂಡು ನಿರಾಶ್ರಿತರಾಗಿದ್ದಾರೆ. ಆದರೆ, ಇವರು ಧೈರ್ಯಗುಂದುವ ಅಗತ್ಯವಿಲ್ಲ. ಮುಖ್ಯಮಂತ್ರಿ ಹರಿಹಾರ ನಿಧಿಗೆ ಅಪಾರ ಪ್ರಮಾಣದ ದೇಣಿಗೆ ಹರಿದುಬರುತ್ತಿದ್ದು, ಎಷ್ಟೇ ಖರ್ಚಾದರೂ ಎಲ್ಲರಿಗೂ ರಾಜ್ಯ ಸರ್ಕಾರ ಪುನರ್ವಸತಿ ಕಲ್ಪಿಸಿಕೊಡಲಿದೆ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಆಶ್ವಾಸನೆ ನೀಡಿದ್ದಾರೆ.

ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ತುರ್ತು ಪತ್ರಿಕಾಗೋಷ್ಠಿ ನಡೆಸಿ ರಾಜ್ಯದಲ್ಲಿ ನೆರೆಯಿಂದ ಉಂಟಾಗಿರುವ ನಷ್ಟ ಹಾಗೂ ಪರಿಹಾರ ಕಾರ್ಯಕ್ರಮದ ಕುರಿತು ಮಾಹಿತಿ ನೀಡಿದ ಸಿಎಂ ಯಡಿಯೂರಪ್ಪ, “ಕಳೆದ ಒಂದು ವಾರದಿಂದ ಮಹಾರಾಷ್ಟ್ರ, ಉತ್ತರ ಕರ್ನಾಟಕ ಹಾಗೂ ಮಲೆನಾಡು ಭಾಗದಲ್ಲಿ ಭಾರಿ ಪ್ರಮಾಣದ ಮಳೆಯಾಗುತ್ತಿದೆ. ಪರಿಣಾಮ ರಾಜ್ಯದ ಅರ್ಧದಷ್ಟು ಜನ ಮಳೆಯ ರೌದ್ರನರ್ತನದಿಂದ ಸಂಕಷ್ಟ ಎದುರಿಸುತ್ತಿದ್ದಾರೆ. ಕಳೆದ 45 ವರ್ಷದಲ್ಲಿ ಮೊದಲ ಬಾರಿಗೆ ರಾಜ್ಯ ಇಂತಹ ಮಳೆಯನ್ನು ಕಾಣುತ್ತಿದೆ.

16 ಜಿಲ್ಲೆಯ 80 ತಾಲೂಕುಗಳು ಈವರೆಗೆ ಪ್ರವಾಹ ಪೀಡಿತ ಪರಿಸ್ಥಿತಿಗೆ ಒಳಗಾಗಿದೆ. ಈ ತಾಲೂಕುಗಳನ್ನು ಪ್ರವಾಹಪೀಡಿತ ತಾಲೂಕುಗಳು ಎಂದು ಘೋಷಿಸಲಾಗಿದೆ. ಪ್ರವಾಹದಿಂದ ಈವರೆಗೆ 24 ಜನ ಸಾವನ್ನಪ್ಪಿದ್ದರೆ, 2.35 ಲಕ್ಷ ಜನರನ್ನು ಸ್ಥಳಾಂತರ ಮಾಡಲಾಗಿದೆ. 220 ಜಾನುವಾರುಗಳು ಬಲಿಯಾಗಿವೆ, ಪರಿಹಾರಕೇಂದ್ರಗಳಲ್ಲಿ 1.57 ಲಕ್ಷ ಜನ ಆಶ್ರಯ ಪಡೆದಿದ್ದಾರೆ. 3.22 ಲಕ್ಷ ಹೆಕ್ಟೇರ್ ಪ್ರದೇಶಗಳ ಬೆಳೆ ಹಾನಿಯಾಗಿದೆ, 12,651 ಮನೆಗಳು ಸಂಪೂರ್ಣ ಹಾನಿಯಾಗಿದ್ದು ಜನ ಮನೆಮಠ ಕಳೆದುಕೊಂಡು ಬೀದಿಗೆ ಬಿದ್ದಿದ್ದಾರೆ. ಆದರೆ ಇವರು ಎದೆಗುಂದುವ ಅಗತ್ಯವಿಲ್ಲ ಎಷ್ಟೇ ಖರ್ಚಾದರೂ ನಿರಾಶ್ರಿತರಿಗೆ ರಾಜ್ಯ ಸರ್ಕಾರ ಪುನರ್ವಸತಿ ಕಲ್ಪಿಸಲಿದೆ” ಎಂದು ಸಿಎಂ ಆಶ್ವಾಸನೆ ನೀಡಿದ್ದಾರೆ.

ಉತ್ತರ ಕರ್ನಾಟಕದಲ್ಲಿ ಪ್ರವಾಹ ವಿಪರೀತವಾಗಿದ್ದು ಪ್ರವಾಹವನ್ನು ನಿಭಾಯಿಸಲು ಈಗಾಗಲೇ ಕೇಂದ್ರ ಸರ್ಕಾರ 100 ಕೋಟಿ ಹಣವನ್ನು ಬಿಡುಗಡೆ ಮಾಡಿದೆ.

ಎನ್​ಡಿಆರ್​ಎಫ್​ 20 ತಂಡಗಳು, ಸೇನೆಯ 5 ತಂಡಗಳು, ವಾಯುಪಡೆಯ 4 ಹೆಲಿಕಾಫ್ಟರ್​ಗಳು ರಕ್ಷಣಾ ಕಾರ್ಯಾಚರಣೆ ನಡೆಸುತ್ತಿವೆ. ಅಗತ್ಯವಿದ್ದರೆ ಇನ್ನೂ ಅಧಿಕ ಸಿಬ್ಬಂದಿಗಳ ಬಳಕೆಗೆ ಕ್ರಮ ವಹಿಸಲಾಗುವುದು ಎಂದು ಅವರು ತಿಳಿಸಿದರು.

ಸಿಎಂ ಪರಿಹಾರ ನಿಧಿಗೂ ಅಪಾರ ಪ್ರಮಾಣದ ಹಣ ದೇಣಿಗೆ ರೂಪದಲ್ಲಿ ಹರಿದುಬರುತ್ತಿದೆ. ಸರ್ಕಾರಿ ನೌಕರರ ಸಂಘ ತಮ್ಮ ಒಂದು ದಿನ ಸಂಬಳ 150 ಕೋಟಿ ಹಣವನ್ನು ದೇಣಿಗೆಯಾಗಿ ನೀಡಿದ್ದಾರೆ. ಇತರೆ ಸಂಘ ಸಂಸ್ಥೆಗಳು ಸಹ ಜನರ ಸಹಾಯಕ್ಕೆ ಮುಂದೆ ಬರಬೇಕು ಎಂದು ಸಿಎಂ ಯಡಿಯೂರಪ್ಪ ಒತ್ತಾಯಿಸಿದ್ದಾರೆ.

ಅಲ್ಲದೆ ವದಂತಿಗೆ ಕಿವಿಗೊಡಬೇಡಿ ಅಧಿಕಾರಗಳ ಜೊತೆಗೆ ನಿರಂತರ ಸಭೆ ನಡೆಸುತ್ತಿದ್ದು, ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಸೂಕ್ತ ಪಡಿಹಾರ ಒದಗಿಸಲು ಸರ್ಕಾರ ಕ್ರಮ ಕೈಗೊಳ್ಳುತ್ತಿದೆ ಇನ್ನೂ ನಾಲ್ಕೈದು ದಿನದಲ್ಲಿ ಪರಿಸ್ಥಿತಿ ಸಂಪೂರ್ಣ ಹತೋಟಿಗೆ ಬರಲಿದೆ ಎಂದು ಯಡಿಯೂರಪ್ಪ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ