ಹೆದರುವ ಅಗತ್ಯವಿಲ್ಲ, ಅರುಣ್​ ಜೇಟ್ಲಿ ಆರೋಗ್ಯ ಸ್ಥಿರವಾಗಿದೆ; ಏಮ್ಸ್​ ಆಸ್ಪತ್ರೆ ವೈದ್ಯರ ಸ್ಪಷ್ಟನೆ

ನವದೆಹಲಿ: ತೀವ್ರ ಅನಾರೋಗ್ಯ ಹಿನ್ನೆಲೆಯಲ್ಲಿ ದೆಹಲಿ ಏಮ್ಸ್​ ಆಸ್ಪತ್ರೆ ಆಸ್ಪತ್ರೆಗೆ ದಾಖಲಾಗಿರುವ ಮಾಜಿ ಹಣಕಾಸು ಸಚಿವ ಹಾಗೂ ಬಿಜೆಪಿ ಹಿರಿಯ ನಾಯಕ ಅರುಣ್​ ಜೇಟ್ಲಿ ಆರೋಗ್ಯ ಸ್ಥಿರವಾಗಿದೆ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

ಶುಕ್ರವಾರ ಅವರಿಗೆ ತೀವ್ರ ಉಸಿರಾಟ ಸಮಸ್ಯೆ ಕಾಣಿಸಿಕೊಂಡಿತ್ತು. ಈ ಹಿನ್ನೆಲೆಯಲ್ಲಿ ಅವರನ್ನು ದೆಹಲಿಯ ಏಮ್ಸ್​ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಅಲ್ಲಿ ವಿಶೇಷ ಘಟಕದಲ್ಲಿ ಅವರಿಗೆ ಚಿಕಿತ್ಸೆ ನೀಡಲಾಗಿತ್ತು. ಈಗ ಜೇಟ್ಲಿ ಆರೋಗ್ಯದಲ್ಲಿ ಚೇತರಿಕೆ ಕಂಡಿದೆ.

ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಮತ್ತು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್​ ಶಾ, ಲೋಕಸಭಾ ಸ್ಪೀಕರ್​ ಓಂ ಬಿರ್ಲಾ ಸೇರಿ ಹಲವು ರಾಜಕೀಯ ಮುಖಂಡರು ಈಗಾಗಲೇ ಆಸ್ಪತ್ರೆಗೆ ಭೇಟಿ ನೀಡಿ ಜೇಟ್ಲಿ ಆರೋಗ್ಯ ವಿಚಾರಣೆ ನಡೆಸಿದ್ದಾರೆ.

ಅರುಣ್​ ಜೇಟ್ಲಿ ಮೂಲತಃ ವಕೀಲರಾಗಿದ್ದು, ನರೇಂದ್ರ ಮೋದಿಉವರ ಸಚಿವ ಸಂಪುಟದಲ್ಲಿ ಪ್ರಭಾವಿ ನಾಯಕರಾಗಿದ್ದವರು. ಜತೆಗೆ ಮೋದಿ ಸರ್ಕಾರದ ಟ್ರಬಲ್​ ಶೂಟರ್​ ಎಂದೂ ಕರೆಸಿಕೊಂಡಿದ್ದಾರೆ.

2019ರ ಜನವರಿಯಲ್ಲಿ ಜೇಟ್ಲಿ ಅಮೆರಿಕಾದಲ್ಲಿ ಎಡಗಾಲಿನಲ್ಲಿ ಆಗಿದ್ದ ಸಾಫ್ಟ್​ ಟಿಶ್ಯು ಕ್ಯಾನ್ಸರ್​ ಆಪರೇಷನ್​ಗೆ ಒಳಗಾಗಿದ್ದರು. ಮೋದಿ ಸರ್ಕಾರದ ಆರನೇ ಮತ್ತು ಕೊನೆಯ ಬಜೆಟ್​ ಮಂಡನೆ ಮಾಡಲೂ ಸಾಧ್ಯವಾಗದೇ ಪೀಯುಷ್​ ಗೋಯಲ್​ ಬಜೆಟ್​ ಮಂಡಿಸಿದ್ದರು. ಮೋದಿ ನೇತೃತ್ವದ ಬಿಜೆಪಿ ಲೋಕಸಭಾ ಚುನಾವಣೆಯಲ್ಲಿ ಪ್ರಚಂಡ ಬಹುಮತದೊಂದಿಗೆ ಎರಡನೇ ಬಾರಿ ಅಧಿಕಾರಕ್ಕೆ ಬಂದಾಗ ಜೇಟ್ಲಿ ಅವರೇ ಸಚಿವ ಸಂಪುಟದಿಂದ ದೂರ ಉಳಿಯುವ ನಿರ್ಧಾರವನ್ನು ತಿಳಿಸಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ