ಬೈಕಿಗೆ ಡಿಕ್ಕಿ ಹೊಡೆದ ಐಎಎಸ್ ಅಧಿಕಾರಿಯೊಬ್ಬರ ಕಾರು-ಘಟನೆಯಲ್ಲಿ ಪತ್ರಕರ್ತನ ಸಾವು

ತಿರುವನಂತಪುರಂ, ಆ. 3- ಪಾನಮತ್ತರಾಗಿದ್ದರೆಂದು ಹೇಳಲಾದ ಐಎಎಸ್ ಅಧಿಕಾರಿಯೊಬ್ಬರು ಚಾಲನೆ ಮಾಡುತ್ತಿದ್ದ ಕಾರು, ಮೋಟಾರು ಬೈಕಿಗೆ ಡಿಕ್ಕಿ ಹೊಡೆದು ಪತ್ರಕರ್ತರೊಬ್ಬರು ಮೃತಪಟ್ಟ ಘಟನೆ ಇಂದು ಮುಂಜಾನೆ ಕೇರಳದ ರಾಜಧಾನಿ ತಿರುವನಂತಪುರನಲ್ಲಿ ನಡೆದಿದೆ.

ಸರ್ವೇ ಇಲಾಖೆ ನಿರ್ದೇಶಕ ಶ್ರೀರಾಮ್ ವೆಂಕಿಟ್‍ರಮಣ್ ಚಾಲನೆ ಮಾಡುತ್ತಿದ್ದ ಕಾರು ಡಿಕ್ಕಿ ಹೊಡೆದ ಪರಿಣಾಮ ಬೈಕಿನಲ್ಲಿದ್ದ ಮಹಮ್ಮದ್ ಬಶೀರ್(35) ಸ್ಥಳದಲ್ಲೇ ಮೃತಪಟ್ಟರು.

ಶಿರಾಜ್ ವಾರ್ತಾ ಪತ್ರಿಕೆಯ ತಿರುವನಂತಪುರದ ಬ್ಯೂರೋ ಚೀಫ್ ಆಗಿ ಬಶೀರ್ ಕಾರ್ಯನಿರ್ವಹಿಸುತ್ತಿದ್ದರು.

ಇಂದು ಒಂದು ಗಂಟೆ ನಸುಕಿನಲ್ಲಿ ಈ ಅಪಘಾತ ಸಂಭವಿಸಿದೆ. ಐಎಎಸ್ ಅಧಿಕಾರಿ ಚಾಲನೆ ಮಾಡುತ್ತಿದ್ದ ಕಾರಿನಲ್ಲಿ ಯುವತಿಯೊಬ್ಬರು ಸಹ ಇದ್ದರು. ಚಾಲಕ ಪಾನಮತ್ತರಾಗಿದ್ದರೆಂದು ಅಪಘಾತ ಸ್ಥಳದಲ್ಲಿ ಕೆಲ ಮಂದಿ ತಿಳಿಸಿದ್ದಾರೆ.

ಯುವ ಐಎಎಸ್ ಅಧಿಕಾರಿಯನ್ನು ವಿಚಾರಣೆಗೆ ಒಳಪಡಿಸಿದಾಗ ತಮ್ಮ ಗೆಳತಿ ಕಾರು ಚಾಲನೆ ಮಾಡುತ್ತಿದ್ದರು ಎಂದು ಹೇಳಿಕೆ ನೀಡಿದ್ದಾರೆ. ಆದರೆ ಯುವತಿಯನ್ನು ವಿಚಾರಣೆಗೆ ಒಳಪಡಿಸಿದಾಗ ವೆಂಕಿಟ್‍ರಮಣ್ ಅವರೇ ವಾಹನ ಚಾಲನೆ ಮಾಡುತ್ತಿದ್ದರು ಎಂದು ಸ್ಪಷ್ಟಪಡಿಸಿದ್ದಾರೆ.

ಈ ಸಂಬಂಧ ಪ್ರಕರಣ ದಾಖಲಾಗಿದೆ. ರಕ್ತದ ಕಲೆಗಳನ್ನು ಪ್ರಯೋಗಾಲಯಕ್ಕೆ ರವಾನಿಸಲಾಗಿದೆ. ಬಶೀರ್ ಅವರ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಕೂಲಂಕಷ ವಿಚಾರಣೆ ನಂತರ ಮುಂದಿನ ಕ್ರಮ ಕೈಗೊಳ್ಳುವುದಾಗಿ ತಿರುವನಂತಪುರಂ ಪೊಲೀಸ್ ಆಯುಕ್ತ ದೀನೇಂದ್ರ ಕಶ್ಯಪ್ ತಿಳಿಸಿದ್ದಾರೆ.

ಈ ಘಟನೆಯ ಸತ್ಯಾಸತ್ಯತೆ ತಿಳಿಯಲು ಕೂಲಂಕಷ ತನಿಖೆ ನಡೆಸಬೇಕೆಂದು ಕೇರಳ ಕಾರ್ಯನಿರತ ಪತ್ರಕರ್ತರ ಸಂಘ ಸರ್ಕಾರ ಮತ್ತು ಪೊಲೀಸ್ ಇಲಾಖೆಯನ್ನು ಆಗ್ರಹಿಸಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ