ಸಿದ್ಧಾರ್ಥ ಮೃತದೇಹದಲ್ಲಿ ಕಾಣೆಯಾದ ಶರ್ಟ್, ಬನಿಯನ್; ಇದು ಆತ್ಮಹತ್ಯೆಯೋ, ಕೊಲೆಯೋ?

ಮಂಗಳೂರು: ಎಸ್.ಎಂ. ಕೃಷ್ಣ ಅಳಿಯ ಹಾಗೂ ಕೆಫೆ ಕಾಫಿ ಡೇ ಮಾಲೀಕ ಸಿದ್ದಾರ್ಥ್ ಸಾವು ಇಡೀ ದೇಶವನ್ನು ಬೆಚ್ಚಿಬೀಳಿಸಿದೆ. ನೇತ್ರಾವತಿ ನದಿಯ ನೀರಿನಲ್ಲಿ ಸಿದ್ಧಾರ್ಥ್ ಮೃತದೇಹ ಪತ್ತೆಯಾಗಿದೆ. ಇಷ್ಟು ದೊಡ್ಡ ಸಾಮ್ರಾಜ್ಯದ ಸಾಮ್ರಾಟನ ಅಂತ್ಯ ಈ ರೀತಿ ಆಗಿದ್ದು ಎಲ್ಲರಿಗೂ ಅಚ್ಚರಿ ಮೂಡಿಸಿದೆ. ಆದರೆ, ಈ ನಡುವೆ ಸಿದ್ಧಾರ್ಥ್ ಮೃತದೇಹದಲ್ಲಿ ಪ್ಯಾಂಟ್ ಮಾತ್ರ ಇರುವುದು; ಹಾಗೂ ಶರ್ಟ್ ಮತ್ತು ಬನಿಯನ್ ಕಾಣೆಯಾಗಿರುವುದು ಸಾಕಷ್ಟು ಅನುಮಾನಗಳಿಗೆ ಕಾರಣವಾಗಿದೆ. ಇದು ಆತ್ಮಹತ್ಯೆಯೋ ಅಥವಾ ಕೊಲೆಯೋ ಎಂಬ ಸಂದೇಹಗಳಿಗೆ ಆಸ್ಪದವಾಗಿದೆ.

ಸೋಮವಾರ ಸಂಜೆ 7ಗಂಟೆ ಸುಮಾರಿನ ಹೊತ್ತಿನಲ್ಲಿ ಸಿದ್ಧಾರ್ಥ್ ಅವರು ನೇತ್ರಾವತಿ ನದಿಯ ಸೇತುವೆಯ ಬಳಿ ನಾಪತ್ತೆಯಾಗಿದ್ದರು. ಇವತ್ತು ಬೆಳಗ್ಗೆ 6:30ಕ್ಕೆ ಹೊಯಿಗೆ ಬಜಾರ್ ಬಳಿ ಅವರ ಮೃತ ದೇಹ ಪತ್ತೆಯಾಗಿದೆ. ಆದರೆ, ನಾಪತ್ತೆಯಾಗುವ ಮುನ್ನ ಸಿದ್ಧಾರ್ಥ್ ಅವರು ಬ್ಲೇಜರ್ ಸಮೇತ ಸಂಪೂರ್ಣ ಉಡುಗೆ ತೊಟ್ಟಿದ್ದಾರೆ. ಈಗ ಮೃತದೇಹದಲ್ಲಿ ಪ್ಯಾಂಟ್ ಮಾತ್ರ ಇರುವುದು ಅಚ್ಚರಿ ಮೂಡಿಸಿದೆ.

ನೀರಿನ ಸೆಳೆತಕ್ಕೆ ಸಿದ್ಧಾರ್ಥ್ ಅವರ ಮೇಲುಡುಗೆಗಳು ಕಿತ್ತುಹೋಗಿರಬಹುದಾ ಎಂಬ ಪ್ರಶ್ನೆಗೆ ಉತ್ತರ ಸಿಗಬೇಕಿದೆ. ಕಾಣೆಯಾಗಿರುವ ಅವರ ಬಟ್ಟೆಗಳು ಸಿಕ್ಕುವವರೆಗೂ ಈ ಪ್ರಶ್ನೆಗೆ ಉತ್ತರ ಸಿಗುವುದು ಕಷ್ಟವಾಗಬಹುದು.

ಸೋಮವಾರ ಸಿದ್ಧಾರ್ಥ್ ಅವರು ನಾಪತ್ತೆಯಾದ ಹೊತ್ತಿನಲ್ಲೇ ಅದೇ ಸ್ಥಳದಲ್ಲಿ ವ್ಯಕ್ತಿಯೊಬ್ಬ ಸೇತುವೆಯಿಂದ ನೀರಿಗೆ ಹಾರುತ್ತಿರುವುದನ್ನು ತಾನು ಕಂಡಿದ್ದಾಗಿ ನೇತ್ರಾವತಿ ನದಿ ತೀರದಲ್ಲಿದ್ದ ಮೀನುಗಾರರೊಬ್ಬರು ಹೇಳಿದ್ದರು.

ಸಿದ್ಧಾರ್ಥ್ ಅವರು ತಮ್ಮ ಕಂಪನಿಯ ನಿರ್ದೇಶಕರ ಮಂಡಳಿಗೆ ಬರೆದಿದ್ದಾರೆನ್ನಲಾದ ಪತ್ರದ ಪ್ರಕಾರ, ಅವರ ಮೇಲೆ ತೆರಿಗೆ ಅಧಿಕಾರಿಗಳ ಒತ್ತಡ ಇರುವುದು ತಿಳಿದುಬರುತ್ತದೆ.

ಇದೇ ವೇಳೆ, ಸಿದ್ಧಾರ್ಥ್ ಅವರ ತಂದೆ ಅವರು ಕೋಮಾ ಸ್ಥಿತಿಯಲ್ಲಿ ಮುಂದುವರಿದಿದ್ದಾರೆ. ಮೈಸೂರಿನ ಗೋಪಾಲಗೌಡ ಆಸ್ಪತ್ರೆಯಲ್ಲಿ ಗಂಗಯ್ಯ ಹೆಗ್ಡೆ ಅವರ ದಾಖಲಾತಿಯನ್ನು ಆಸ್ಪತ್ರೆ ಸಿಬ್ಬಂದಿ ಗೌಪ್ಯವಾಗಿಟ್ಟಿದ್ದಾರೆ. ಕೋಮಾದಲ್ಲಿರುವ ಅವರನ್ನು ತೀವ್ರ ನಿಗಾ ಘಟಕದಲ್ಲಿದ್ದು ಚಿಕಿತ್ಸೆ ನೀಡಲಾಗುತ್ತಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ