ಆಡಳಿತ ವ್ಯವಸ್ಥೆಗೆ ಚುರುಕು ಮುಟ್ಟಿಸಲು ಮುಂದಾಗಿರುವ ಸಿಎಂ ಯಡಿಯೂರಪ್ಪ

ಬೆಂಗಳೂರು,ಜು.31- ಆಡಳಿತ ವ್ಯವಸ್ಥೆಗೆ ಚುರುಕು ಮುಟ್ಟಿಸಲು ಮುಂದಾಗಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಐಎಎಸ್, ಐಪಿಎಸ್, ಐಎಫ್‍ಎಸ್ ಸೇರಿದಂತೆ ಮೇಜರ್ ಸರ್ಜರಿ ನಡೆಸಲು ಮುಂದಾಗಿದ್ದಾರೆ.

ಪ್ರಮುಖವಾಗಿ ಬೆಂಗಳೂರು ನಗರ ಪೊಲೀಸ್ ಆಯುಕ್ತ ಅಲೋಕ್ ಕುಮಾರ್, ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್, ಬಿಡಿಎ ಆಯುಕ್ತರು ಸೇರಿದಂತೆ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅಧಿಕಾರಾವಧಿಯಲ್ಲಿದ್ದ ಅಧಿಕಾರಿಗಳನ್ನು ಒಂದೆರಡು ದಿನಗಳಲ್ಲೇ ಎತ್ತಂಗಡಿ ಮಾಡಲಿದ್ದಾರೆ.

ಈಗಾಗಲೇ ಅಧಿಕಾರಿಗಳ ವರ್ಗಾವಣೆ ಪಟ್ಟಿ ಸಿದ್ಧವಾಗಿದ್ದು, ಕೆಲವು ಅಧಿಕಾರಿಗಳಿಗೆ ಮುಂಬಡ್ತಿ ಹಾಗೂ ಇನ್ನು ಕೆಲವು ವರ್ಗಾವಣೆಯ ಬಿಸಿ ತಟ್ಟಲಿದೆ.

ಮುಖ್ಯಮಂತ್ರಿಗಳ ಸಲಹೆಗಾರರಾಗಿ ನೇಮಕಗೊಂಡಿರುವ ನಿವೃತ್ತ ಐಎಎಸ್ ಅಧಿಕಾರಿ ಲಕ್ಷ್ಮಿನಾರಾಯಣ ಅವರು ಈಗಾಗಲೇ ಐಎಎಸ್, ಐಪಿಎಸ್, ಐಎಫ್‍ಎಸ್ ಹಾಗೂ ಕೆಎಎಸ್ ಅಧಿಕಾರಿಗಳ ವರ್ಗಾವಣೆ ಪಟ್ಟಿಯನ್ನು ಸಿದ್ದಪಡಿಸಿದ್ದು, ಒಂದೆರಡು ದಿನಗಳಲ್ಲಿ ಮುಖ್ಯಮಂತ್ರಿಯವರು ಅಂಕಿತ ಹಾಕಲಿದ್ದಾರೆ ಎಂದು ತಿಳಿದುಬಂದಿದೆ.

ಯಾರ್ಯಾರ ವರ್ಗಾವಣೆ:
ಪ್ರಮುಖವಾಗಿ ಬೆಂಗಳೂರು ನಗರ ಪೊಲೀಸ್ ಆಯುಕ್ತ ಎಂ.ಎನ್.ಅಲೋಕ್‍ಕುಮಾರ್ ವರ್ಗಾವಣೆಯಾಗುವ ಲಿಸ್ಟ್‍ನಲ್ಲಿದ್ದಾರೆ. ಅವರಿಂದ ತೆರವಾಗುವ ಈ ಸ್ಥಾನಕ್ಕೆ ಹಿರಿಯ ಅಧಿಕಾರಿಗಳಾದ ಅರುಣ್ ಚಕ್ರವರ್ತಿ, ಕಮಲ್‍ಪಂಥ್, ಮುರುಗನ್ ಹಾಗೂ ಭಾಸ್ಕರ್‍ರಾವ್ ಹೆಸರುಗಳು ಕೇಳಿಬಂದಿವೆ.

ಅಲೋಕ್‍ಕುಮಾರ್ ಅವರನ್ನು ಇದೇ ಹುದ್ದೆಯಲ್ಲಿ ಉಳಿಸಿಕೊಳ್ಳುವ ಬಗ್ಗೆ ಚಿಂತನೆ ನಡೆಸಿದ್ದಾರೆ. ಆದರೆ ಪ್ರಮುಖ ರಾಜಕಾರಣಿಯೊಬ್ಬರ ಜೊತೆ ಅತಿಯಾದ ಒಡನಾಟವೇ ಅವರಿಗೆ ಮುಳುಗುವಾಗಿ ಪರಿಣಮಿಸಿದೆ ಎಂದು ತಿಳಿದುಬಂದಿದೆ. ಹೀಗಾಗಿ ಒಲ್ಲದ ಮನಸ್ಸಿನಿಂದಲೇ ಅಲೋಕ್‍ಕುಮಾರ್ ಅವರನ್ನು ವರ್ಗಾವಣೆ ಮಾಡಲು ಯಡಿಯೂರಪ್ಪ ಚಿಂತನೆ ನಡೆಸಿದ್ದಾರೆ.

ಈ ಹಿಂದೆ ತಮ್ಮ ತವರು ಜಿಲ್ಲೆ ಶಿವಮೊಗ್ಗದಲ್ಲಿ ಎಸ್‍ಪಿಯಾಗಿ ಕಾರ್ಯ ನಿರ್ವಹಿಸಿದ್ದ ಕಮಲ್‍ಪಂಥ್, ಅರುಣ್ ಚಕ್ರವರ್ತಿ ಅವರ ಹೆಸರುಗಳು ಕೇಳಿಬರುತ್ತಿವೆ.

ಒಂದು ವೇಳೆ ಅರುಣ್ ಚಕ್ರವರ್ತಿ ಅವರನ್ನು ಪರಿಗಣಿಸಿದರೆ ಅವರಿಗೆ ಮುಂಬಡ್ತಿ ನೀಡಬೇಕಾದ ಅನಿವಾರ್ಯತೆ ಇದೆ. ಇದರ ಜೊತೆಗೆ ರಾಜ್ಯ ಪೊಲೀಸ್ ಮಹಾನಿರ್ದೇಶಕರಾದ ನೀಲಮಣಿ.ಎನ್ ರಾಜು ಅವರನ್ನು ವರ್ಗಾಯಿಸುವ ಬಗ್ಗೆಯೂ ಯಡಿಯೂರಪ್ಪ ಚಿಂತನೆ ನಡೆಸಿದ್ದಾರೆ.

ಹಿರಿಯ ಪೊಲೀಸ್ ಅಧಿಕಾರಿ ಪ್ರವೀಣ್ ಸೂದ್ ಅವರನ್ನು ಪೊಲೀಸ್ ಮಹಾನಿರ್ದೇಶಕರ ಹುದ್ದೆಗೆ ಮುಖ್ಯಮಂತ್ರಿ ಪರಿಗಣಿಸಿದ್ದಾರೆ ಎನ್ನಲಾಗಿದೆ. ಆದರೆ ನೀಲಮಣಿ ರಾಜು ಅವರ ಅಧಿಕಾರಾವಧಿ ಇನ್ನು ನಾಲ್ಕು ತಿಂಗಳು ಇರುವುದರಿಂದ ವರ್ಗಾವಣೆ ಮಾಡಬಾರದೆಂಬ ಚಿಂತನೆ ಇದೆ.

ಒಂದು ವೇಳೆ ಅವರು ನ್ಯಾಯಾಲಯದಲ್ಲಿ ಪ್ರಶ್ನಿಸಬಹುದು. ನಾಳೆ ವ್ಯತಿರಿಕ್ತ ತೀರ್ಪು ಬಂದರೆ ಸರ್ಕಾರಕ್ಕೆ ಮುಖಭಂಗವಾಗಬಾರದೆಂಬ ಕಾರಣಕ್ಕೆ ಎಚ್ಚರಿಕೆಯ ಹೆಜ್ಜೆಯನ್ನಿಡಲಾಗಿದೆ.

ಇನ್ನು ವಲಯ ಐಜಿಪಿಗಳು, ಗುಪ್ತಚರ ವಿಭಾಗ ಮುಖ್ಯಸ್ಥರು, ಬೆಂಗಳೂರು ಡಿಸಿಪಿಗಳು, ಜಿಲ್ಲಾ ಎಸ್‍ಪಿಗಳು, ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಮುಖ್ಯಸ್ಥರು ಸೇರಿದಂತೆ ಪೊಲೀಸ್ ಇಲಾಖೆಗೆ ಮೇಜರ್ ಸರ್ಜರಿ ನಡೆಯಲಿದೆ.

ಗುಪ್ತಚರ ವಿಭಾಗದ ಮುಖ್ಯಸ್ಥರಾಗಿ ಮಂಗಳೂರು ಪೊಲೀಸ್ ಆಯುಕ್ತರಾಗಿರುವ ಸಂದೀಪ್ ಪಾಟೀಲ್ ಅವರನ್ನು ನೇಮಕ ಮಾಡಲು ಬಿಎಸ್‍ವೈ ತೀರ್ಮಾನಿಸಿದ್ದಾರೆ ಎಂದು ತಿಳಿದುಬಂದಿದೆ.

ಐಎಎಸ್ ಅಧಿಕಾರಿಗಳ ವರ್ಗಾವಣೆ:
ಐಪಿಎಸ್‍ನಂತೆ ಐಎಎಸ್ ವಲಯದಲ್ಲೂ ಭಾರೀ ಬದಲಾವಣೆಯಾಗುವ ಸಂಭವವಿದೆ. ಮುಖ್ಯ ಕಾರ್ಯದರ್ಶಿ ವಿಜಯಭಾಸ್ಕರ್ ಅವರನ್ನು ಮುಂದುವರೆಸಲು ತೀರ್ಮಾನಿಸಲಾಗಿದ್ದು, ಉಳಿದಂತೆ ಹಿಂದಿನ ಸರ್ಕಾರದ ಅವಧಿಯಲ್ಲಿ ಆಯಾ ಕಟ್ಟಿನಲ್ಲಿದ್ದ ಪ್ರಮುಖರನ್ನು ಸದ್ಯದಲ್ಲೇ ಎತ್ತಂಗಡಿ ಮಾಡಲಿದ್ದಾರೆ.

ಮುಖ್ಯವಾಗಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಆಯುಕ್ತ ಮಂಜುನಾಥ್ ಪ್ರಸಾದ್ ಎತ್ತಂಗಡಿಯಾಗುವುದು ಬಹುತೇಕ ಖಚಿತ. ಕಳೆದ ಹಲವು ವರ್ಷಗಳಿಂದ ಈ ಹುದ್ದೆಯಲ್ಲಿರುವ ಅವರನ್ನು ವರ್ಗಾವಣೆ ಮಾಡುವುದು ಖಚಿತ.

ತೆರವಾಗಲಿರುವ ಈ ಸ್ಥಾನಕ್ಕೆ ಹಿರಿಯ ಅಧಿಕಾರಿಯೊಬ್ಬರನ್ನು ಆಯುಕ್ತರಾಗಿ ನೇಮಕ ಮಾಡುವ ಸಾಧ್ಯತೆ ಇದೆ. ಇದೇ ರೀತಿ ಬಿಡಿಎ ಆಯುಕ್ತರ ಹುದ್ದೆಯೂ ಸ್ಥಾನ ಪಲ್ಲಟವಾಗಲಿದೆ.

ವಲಯ ಆಯುಕ್ತರು, ಜಿಲ್ಲಾಧಿಕಾರಿಗಳು, ಸಚಿವಾಲಯದಲ್ಲಿರುವ ಪ್ರಮುಖ ಅಧಿಕಾರಿಗಳು ಕೂಡ ವರ್ಗಾವಣೆಯಾಗುವ ನಿರೀಕ್ಷೆಯಿದೆ. ಐಎಫ್‍ಎಸ್ ಮತ್ತು ಕೆಎಎಸ್ ವಲಯದಲ್ಲೂ ಮಹತ್ವದ ಬದಲಾವಣೆ ಮಾಡಲು ಯಡಿಯೂರಪ್ಪ ಮುಂದಾಗಿದ್ದಾರೆ ಎಂದು ತಿಳಿದುಬಂದಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ