ಕೆಫೆ ಕಾಫಿ ಡೇ(ಸಿಸಿಡಿ) ಮಾಲೀಕ ವಿ.ಜಿ.ಸಿದ್ದಾರ್ಥ್ ನಾಪತ್ತೆ ಹಿನ್ನಲೆ-ಮುಂಬೈ ಷೇರು ಪೇಟೆಯಲ್ಲಿ ಸಿಸಿಡಿ ಷೇರು ಮೌಲ್ಯ ಶೇ. 20ರಷ್ಟು ಕುಸಿತ

ಮುಂಬೈ,ಜು.30- ಭಾರತದ ಪ್ರಸಿದ್ಧ ಕೆಫೆ ಕಾಫಿ ಡೇ(ಸಿಸಿಡಿ) ಮಾಲೀಕ ಮತ್ತು ಮಾಜಿ ಮುಖ್ಯಮಂತ್ರಿ ಅಳಿಯ ವಿ.ಜಿ.ಸಿದ್ದಾರ್ಥ್ ನಾಪತ್ತೆಯಾದ ನಂತರ ಮುಂಬೈ ಷೇರು ಪೇಟೆಯಲ್ಲಿ ಸಿಸಿಡಿ ಷೇರು ಮೌಲ್ಯ ಶೇ. 20ರಷ್ಟು ಕುಸಿತ ಕಂಡಿದೆ.

ಇಂದು ಬೆಳಗಿನ ಆರಂಭಿಕ ವಹಿವಾಟಿನಲ್ಲಿ ಬಿಎಸ್‍ಇ (ಬಾಂಬೆ ಸ್ಟಾಕ್ ಎಕ್ಸೆಚೆಂಜ್) ಸೂಚ್ಯಂಕದಲ್ಲಿ ಕೆಫೆ ಕಾಫಿ ಡೇ ಷೇರು ಶೇ.20ರಷ್ಟು ಇಳಿಮುಖವಾಗಿದೆ. ಈಗ ಅದರ ಮೌಲ್ಯ 153.40ರೂ.ಗಳು.

ಕಳೆದ ಕೆಲವು ದಿನಗಳಿಂದ ಉತ್ತಮ ಸ್ಥಿತಿಯಲ್ಲಿದ್ದ, ಸಿಸಿಡಿ ಷೇರು ಮೌಲ್ಯ ಈಗ ಕುಸಿತ ಕಂಡಿರುವುದರಿಂದ ಸಂಸ್ಥೆಯ ಆಡಳಿತ ಮಂಡಳಿ ಆತಂಕಗೊಂಡಿದೆ.

ಯಶಸ್ವಿ ಉದ್ಯಮಿಯಾಗಿದ್ದ ಸಿದ್ದಾರ್ಥ್ 1993ರಲ್ಲಿ ಉದ್ಯಾನನಗರಿ ಬೆಂಗಳೂರಿನಲ್ಲಿ ಪ್ರಥಮ ಕೆಫೆ ಕಾಫಿ ಡೇ ಶಾಪ್ ಆರಂಭಿಸಿದರು.ಅಪಾರ ಪರಿಶ್ರಮದಿಂದ ಹಂತ ಹಂತವಾಗಿ ಬೆಳೆದ ಈ ಹೈಟೆಕ್ ಕಾಫಿ ಶಾಪ್ ಒಟ್ಟು 1,500 ಮಳಿಗೆಗಳನ್ನು ಹೊಂದಿದೆ.

ಮೂರು ದಶಕಗಳಿಗೂ ಹೆಚ್ಚು ಕಾಲ ಅಪಾರ ಪರಿಶ್ರಮದಿಂದ ಸಿದ್ದಾರ್ಥ್ ಬೆಳೆಸಿ ಮುನ್ನೆಡಿಸಿದ್ದರು. 30,000ಕ್ಕೂ ಹೆಚ್ಚು ಮಂದಿಗೆ ನೇರ ಮತ್ತು ಪರೋಕ್ಷ ಉದ್ಯೋಗ ನೀಡುವಲ್ಲಿ ಈ ಮಲ್ಟಿಪಲ್ ಚೈನ್ ಶಾಪ್ ಯಶಸ್ವಿಯಾಗಿತ್ತು.

ಉದ್ಯಮದಲ್ಲಿ ವಿಫಲತೆ ಮತ್ತು ಅದನ್ನು ಪುನಶ್ಚೇತನಗೊಳಿಸುವಲ್ಲಿ ಸೋಲು ಕಂಡಿದಕ್ಕೆ ಕ್ಷಮೆ ಕೋರಿರುವ ಸಿದ್ದಾರ್ಥ್ ಪತ್ರ ಇಂದು ಬೆಳಿಗ್ಗೆ ಮಾಧ್ಯಮಗಳಿಗೆ ಲಭಿಸಿದೆ.

ನಿನ್ನೆ ಸಂಜೆ ಮಂಗಳೂರಿನ ನೇತ್ರಾವತಿ ಸೇತುವೆ ಬಳಿ ಕಾರು ನಿಲ್ಲಿಸಿ.ತಾವು ವಾಯುವಿಹಾರ ಮಾಡಿ. ಒಂದು ಗಂಟೆ ನಂತರ ಹಿಂದಿರುಗುವುದಾಗಿ ಚಾಲಕನಿಗೆ ತಿಳಿಸಿ ಕೆಳಗೆ ಇಳಿದು ಬ್ರಿಡ್ಜ್ ಮೇಲೆ ನಡೆದು ಹೋದ ಸಿದ್ದಾರ್ಥ್ ನಾಪತ್ತೆಯಾಗಿದ್ದಾರೆ. ಅವರ ನಾಪತ್ತೆ ಪ್ರಕರಣ ಸಿಸಿಡಿ ಸಂಸ್ಥೆಯ ನೌಕರರಲ್ಲಿ ತೀವ್ರ ಆತಂಕ ಸೃಷ್ಟಿಸಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ