ಜೆಡಿಎಸ್​- ಕಾಂಗ್ರೆಸ್​ ನಡುವೆ ಭುಗಿಲೆದ್ದ ಅಸಮಾಧಾನ; ಕೆಎಂಎಫ್​ ಅಧ್ಯಕ್ಷ ಸ್ಥಾನಕ್ಕೆ ಮತ್ತೆ ಶುರುವಾಯ್ತು ಕಿತ್ತಾಟ

ಬೆಂಗಳೂರು: ಮೈತ್ರಿ ಸರ್ಕಾರ ಪತನವಾಗಿ ನಿನ್ನೆ ಬಿಜೆಪಿ ಅಧಿಕಾರದ ಗದ್ದುಗೆಯೇರಿ ಕುಳಿತಿದೆ. ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಬೆನ್ನಲ್ಲೇ ಕಾಂಗ್ರೆಸ್​- ಜೆಡಿಎಸ್ಅಸಮಾಧಾನ ಸ್ಫೋಟಗೊಂಡಿದೆ

ಕೆಎಂಎಫ್ ಅಧ್ಯಕ್ಷ ಸ್ಥಾನಕ್ಕಾಗಿ ಹೆಚ್.ಡಿ. ರೇವಣ್ಣ ಲಾಬಿ ಮಾಡುತ್ತಿದ್ದು, ಕಾಂಗ್ರೆಸ್​ ಶಾಸಕರಿಗೆ ಆ ಸ್ಥಾನ ಬಿಟ್ಟು ಕೊಡದೆ ತಾನೇ ಅಧ್ಯಕ್ಷರಾಗಲು ಪೈಪೋಟಿ ನಡೆಸಿದ್ದಾರೆ. ಸರ್ಕಾರ ಮುರಿದುಬಿದ್ದಿದ್ದರೂ ಮೈತ್ರಿ ಇನ್ನೂ ಮುಂದುವರೆದಿದೆ. ಕಾಂಗ್ರೆಸ್​ ಶಾಸಕ ಭೀಮಾ ನಾಯಕ್, ಹೆಚ್​.ಡಿ. ರೇವಣ್ಣ ನಡುವೆ ಪೈಪೋಟಿ ಶುರುವಾಗಿದೆ. ಜೆಡಿಎಸ್ ಶಾಸಕ ಹೆಚ್.ಡಿ. ರೇವಣ್ಣ ಕೆಎಂಎಫ್​ ಅಧ್ಯಕ್ಷ ಸ್ಥಾನಕ್ಕಾಗಿ ಭಾರೀ ಲಾಬಿ ನಡೆಸಿದ್ದಾರೆ.

ಜು. 29ರಂದು ನಡೆಯುವ ಕೆಎಂಎಫ್​ ಅಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ ಗೆಲ್ಲಲು ಹೆಚ್.ಡಿ. ರೇವಣ್ಣ ಭಾರೀ ತಂತ್ರ ರೂಪಿಸುತ್ತಿದ್ದಾರೆ. ಈಗಾಗಲೇ ತಮಗೆ ಮತ ಹಾಕಬೇಕೆಂದು ಹೆಚ್​.ಡಿ. ರೇವಣ್ಣ ಕಾಂಗ್ರೆಸ್​ನ ನಾಲ್ವರು ಸದಸ್ಯರನ್ನು ಕರೆದುಕೊಂಡು ಹೋಗಿದ್ದಾರೆ. ಭೀಮಾ ನಾಯಕ್ ಕೆಎಂಎಫ್​ ಅಧ್ಯಕ್ಷ ಸ್ಥಾನದ ಪ್ರಬಲ ಆಕಾಂಕ್ಷಿಯಾಗಿದ್ದಾರೆ. ತಮ್ಮ ಪಕ್ಷದ ನಾಲ್ವರನ್ನು ಕರೆದುಕೊಂಡು ಹೋಗಿ ಜೊತೆಯಲ್ಲಿಟ್ಟುಕೊಂಡಿರುವ ರೇವಣ್ಣನವರ ವರ್ತನೆಯಿಂದ ಕಾಂಗ್ರೆಸ್ ಶಾಸಕ ಭೀಮಾ ನಾಯಕ್ ಆಕ್ರೋಶಗೊಂಡಿದ್ದಾರೆ.

ಕೆಎಂಫ್​ ಅಧ್ಯಕ್ಷ ಸ್ಥಾನದ ಕಾಂಗ್ರೆಸ್​ನ ಪ್ರಬಲ ಆಕಾಂಕ್ಷಿಯಾಗಿರುವ ಭೀಮಾ ನಾಯಕ್ ಮತ್ತು ಹೆಚ್​.ಡಿ.ರೇವಣ್ಣ ನಡುವಿನ ಪೈಪೋಟಿಯನ್ನು ನೋಡಿ ಚುನಾವಣೆಯನ್ನು ಮುಂದೂಡಲಾಗಿದೆ. ಜು. 29ರಂದು ನಡೆಯುವ ಚುನಾವಣೆಯನ್ನು ಮುಖ್ಯಮಂತ್ರಿ ಬಿ.ಎಸ್​. ಯಡಿಯೂರಪ್ಪ ಮುಂದೂಡಿದ್ದಾರೆ.

ಕೆಎಂಎಫ್​ನಲ್ಲಿ ಒಟ್ಟು 12 ನಿರ್ದೇಶಕರಿದ್ದಾರೆ. ಅದರಲ್ಲಿ 3 ಜೆಡಿಎಸ್​ ಮತ್ತು 8 ಕಾಂಗ್ರೆಸ್​ ನಿರ್ದೇಶಕರು. ಹಾಗೇ, ಅತೃಪ್ತ ಶಾಸಕ ರಮೇಶ್ ಜಾರಕಿಹೊಳಿ ಅಮರನಾಥ ಜಾರಕಿಹೊಳಿ ಕೂಡ ಓರ್ವ ನಿರ್ದೇಶಕ. ಇದೀಗ ಕಾಂಗ್ರೆಸ್​ನ 4 ನಿರ್ದೇಶಕರನ್ನು ರೇವಣ್ಣ ತನ್ನೆಡೆಗೆ ಎಳೆದುಕೊಂಡಿರುವುದರಿಂದ ಭೀಮಾ ನಾಯಕ್ ಆಕ್ರೋಶಗೊಂಡಿದ್ದಾರೆ. ನಿನ್ನೆ ಇದೇ ವಿಷಯವಾಗಿ ಮಾಜಿ ಸಿಎಂ ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿದ್ದ ಭೀಮಾನಾಯಕ್ ಅವರಿಗೆ ಹೆಚ್ಡಿಕೆ ಸರಿಯಾಗಿ ಸ್ಪಂದಿಸಿಲ್ಲ. ಇದರಿಂದ ಬೇಸರಗೊಂಡಿರುವ ಭೀಮಾ ನಾಯಕ್ ಆಪ್ತರಲ್ಲಿ ಅಸಮಾಧಾನ ಹೊರಹಾಕಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ