ಆಪರೇಷನ್ ಕಮಲಕ್ಕೆ ತುತ್ತಾಗಿಲ್ಲ-ಶಾಸಕ ಎನ್.ಮಹೇಶ್

ಬೆಂಗಳೂರು, ಜು.24-ಸಂಪರ್ಕದ ಕೊರತೆಯಿಂದಾಗಿ ನಾನು ಅವಿಶ್ವಾಸ ಮತದಿಂದ ದೂರ ಉಳಿದಿದ್ದೆ.ಆಪರೇಷನ್ ಕಮಲಕ್ಕೆ ತುತ್ತಾಗಿಲ್ಲ.ಬಿಎಸ್‍ಪಿಯ ಶಾಸಕನಾಗಿಯೇ ಮುಂದುವರೆಯುತ್ತೇನೆ. ರಾಜಕೀಯವಾಗಿ ಯಾವುದೇ ಪಕ್ಷವನ್ನು ಬೆಂಬಲಿಸದೆ ತಟಸ್ಥವಾಗಿರುತ್ತೇನೆ ಎಂದು ಎನ್.ಮಹೇಶ್ ಸ್ಪಷ್ಟಪಡಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿಂದು ಮಾತನಾಡಿದ ಅವರು, ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್-ಬಿಎಸ್‍ಪಿ ಚುನಾವಣಾ ಪೂರ್ವ ಮೈತ್ರಿ ಮಾಡಿಕೊಳ್ಳಲಾಗಿತ್ತು.ಬಿಎಸ್‍ಪಿ 20 ಸ್ಥಾನಗಳಲ್ಲಿ, ಜೆಡಿಎಸ್ 204 ಸ್ಥಾನಗಳಲ್ಲಿ ಸ್ಪರ್ಧಿಸಿದ್ದವು.ಬಿಎಸ್‍ಪಿಯಿಂದ ಕೊಳ್ಳೆಗಾಲ ಕ್ಷೇತ್ರದಿಂದ ನಾನು ಆಯ್ಕೆಯಾದೆ.ಲೋಕಸಭೆ ಚುನಾವಣೆಯಲ್ಲಿ ಯಾವ ಪಕ್ಷದೊಂದಿಗೂ ಮೈತ್ರಿ ಬೇಡ, 28 ಕ್ಷೇತ್ರಗಳಲ್ಲೂ ಸ್ಪರ್ಧೆ ಮಾಡಿ ಎಂದು ಬಿಎಸ್‍ಪಿ ಹೈಕಮಾಂಡ್ ಆದ ಮಾಯಾವತಿ ಸೂಚನೆ ನೀಡಿದ್ದರು.ಅದರಂತೆ ನಾವು ಸ್ವತಂತ್ರವಾಗಿ ಸ್ಪರ್ಧೆ ಮಾಡಿ ರಾಜ್ಯದಲ್ಲಿ 4.12 ಲಕ್ಷ ಮತ ಪಡೆದಿದ್ದೇವೆ.

ಜೂ.23ಕ್ಕೆ ನಡೆದ ರಾಷ್ಟ್ರೀಯ ಕಾರ್ಯಕಾರಿ ಸಮಿತಿ ಸಭೆಯಲ್ಲಿ ನಾನು ಮುಂದೆ ತೆಗೆದುಕೊಳ್ಳಬೇಕಾದ ನಿರ್ಧಾರದ ಬಗ್ಗೆ ಮಾಯಾವತಿ ಅವರಿಂದ ಸ್ಪಷ್ಟನೆ ಕೇಳಿದಾಗ ತಟಸ್ಥವಾಗಿರುವಂತೆ ಸೂಚನೆ ನೀಡಿದ್ದರು. ವಿಶ್ವಾಸಮತ ಯಾಚನೆ ಸಂದರ್ಭದಲ್ಲೂ ನಾನು ನಮ್ಮ ಪಕ್ಷದ ಉಸ್ತುವಾರಿ ನಾಯಕರಾದ ಅಶೋಕ್ ಸಿದ್ಧಾರ್ಥ್ ಅವರನ್ನು ಕೇಳಿದಾಗ ತಟಸ್ಥವಾಗಿರುವಂಥೆ ಸೂಚನೆ ಬಂದಿತ್ತು. ಹಾಗಾಗಿ ಜು.15ರವರೆಗೂ ಕ್ಷೇತ್ರದಲ್ಲಿದ್ದೆ. ಜು.16 ರಿಂದ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು ಧ್ಯಾನಾಸಕ್ತ ಕೇಂದ್ರದಲ್ಲಿ ತಂಗಿದ್ದೆ. ಈ ಮಧ್ಯೆ ವಿಶ್ವಾಸಮತದ ಪರವಾಗಿ ಮತ ಹಾಕುವಂತೆ ಮಾಯಾವತಿ ಅವರು ಟ್ವಿಟರ್‍ನಲ್ಲಿ ಸೂಚನೆ ನೀಡಿದ್ದರು ಎನ್ನಲಾಗಿದೆ.ನಾನು ಟ್ವಿಟರ್ ಬಳಸುವುದಿಲ್ಲ. ಅದು ನನಗೆ ಗೊತ್ತಾಗಿಲ್ಲ. ಇಂದು ಬೆಳಗ್ಗೆ ಬೆಂಗಳೂರಿಗೆ ಬಂದಾಗ ಬಿಎಸ್‍ಪಿಯಿಂದ ನನ್ನನ್ನು ಉಚ್ಚಾಟನೆ ಮಾಡಿರುವುದಾಗಿ ಮಾಧ್ಯಮಗಳಿಂದ ತಿಳಿಯಿತು.

ಆ ಆದೇಶ ಕೂಡ ಟ್ವಿಟರ್‍ನಲ್ಲೇ ಪ್ರಕಟವಾಗಿರುವುದು ತಿಳಿದುಬಂದಿದೆ.ಇದೆಲ್ಲವೂ ಸಂಪರ್ಕದ ಕೊರತೆಯಿಂದಾಗಿರುವ ಸಣ್ಣಪುಟ್ಟ ಲೋಪದೋಷಗಳು.ನಾನು ಮಾಯಾವತಿ ಅವರ ಜೊತೆ ಮಾತನಾಡುತ್ತೇನೆ. ಎಲ್ಲವೂ ಸರಿಹೋಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಈ ಮೊದಲು ಸಮ್ಮಿಶ್ರ ಸರ್ಕಾರದಲ್ಲಿ ನನ್ನನ್ನು ಸಚಿವನನ್ನಾಗಿ ಮಡಲಾಗಿತ್ತು. 4 ತಿಂಗಳು ಶಿಕ್ಷಣ ಖಾತೆಯನ್ನು ನಿಭಾಯಿಸಿದ್ದೇನೆ. ಮಧ್ಯಪ್ರದೇಶ ಹಾಗೂ ರಾಜಸ್ಥಾನದಲ್ಲಿ ಕಾಂಗ್ರೆಸ್ ಮಹಾಘಟ್‍ಬಂಧನ್ ಒಪ್ಪಂದದಂತೆ ನಡೆದುಕೊಂಡಿಲ್ಲ. ಹಾಗಾಗಿ ಆ ಪಕ್ಷದ ಮೈತ್ರಿ ಇರುವ ಕರ್ನಾಟಕ ಸರ್ಕಾರದಲ್ಲಿ ನೀನು ಸಚಿವನಾಗಿರಬೇಡ ಎಂದು ಮಾಯಾವತಿ ಅವರು ಸೂಚನೆ ಕೊಟ್ಟರು. ಎರಡನೇ ಮಾತು ಆಡದೆ ರಾಜೀನಾಮೆ ಕೊಟ್ಟು ಹೊರಬಂದಿದ್ದೆ ಎಂದು ಮಹೇಶ್ ಸ್ಪಷ್ಟಪಡಿಸಿದರು.
ಈಗಲೂ ನಾನು ಬಿಎಸ್‍ಪಿ ಶಾಸಕನಾಗಿಯೇ ಇದ್ದೇನೆ. ಮುಂದೆಯೂ ಆಗಿರುತ್ತೇನೆ. ರಾಜಕೀಯವಾಗಿ ತಟಸ್ಥವಾಗಿರುತ್ತೇನೆ ಎಂದು ಸ್ಪಷ್ಟಪಡಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ