ತಮ್ಮದೇ ಆದ ರಣತಂತ್ರ ರಚಿಸುವಲ್ಲಿ ನಿರತರಾಗಿರುವ ಮೂರು ಪಕ್ಷಗಳು

ಬೆಂಗಳೂರು, ಜು.24- ವಿಶ್ವಾಸಮತ ಯಾಚನೆ ಮುಗಿದು ಸಮ್ಮಿಶ್ರ ಸರ್ಕಾರ ಪತನವಾದ ನಂತರವೂ ರಾಜಕೀಯ ಚಟುವಟಿಕೆಗಳು ನಿಂತಿಲ್ಲ. ನಿಜವಾದ ಆಟ ಶುರುವಾಗುತ್ತಿರುವುದು ಈಗಿನಿಂದ ಎಂಬಂತೆ ಮೂರೂ ಪಕ್ಷಗಳು ತಮ್ಮದೇ ಆದ ರಣತಂತ್ರ ರಚಿಸುವಲ್ಲಿ ಮುಳುಗಿವೆ.

ಬಿಜೆಪಿ ಕಳೆದ 15 ದಿನಗಳಿಂದ ರಣನೀತಿ ರಚಿಸಿ ದೋಸ್ತಿ ಸರ್ಕಾರವನ್ನು ಪತನಗೊಳಿಸುವಲ್ಲಿ ಯಶಸ್ವಿಯಾಗಿದ್ದು, ಮುಂದೆ ಸರ್ಕಾರ ರಚನೆಯ ಉತ್ಸಾಹದಲ್ಲಿದೆ.
ಪ್ರತಿಪಕ್ಷಗಳಾದ ಕಾಂಗ್ರೆಸ್-ಜೆಡಿಎಸ್ ಪಕ್ಷಗಳು ತಮ್ಮದೇ ಕಾರ್ಯತಂತ್ರದಲ್ಲಿ ಮುಳುಗಿವೆ. ಸರ್ಕಾರವನ್ನು ಪತನಗೊಳಿಸುವುದು ಒಂದು ಕಡೆಯಾದರೆ ಸರ್ಕಾರ ರಚಿಸುವುದು ಮತ್ತೊಂದು ಕಸರತ್ತಿನ ಭಾಗವಾಗಿದೆ.

ಬಿಜೆಪಿಯ ಪರೋಕ್ಷ ಆಶ್ರಯದಲ್ಲಿ ಮುಂಬೈನಲ್ಲಿರುವ ಶಾಸಕರು ಬೆಂಗಳೂರಿಗೆ ವಾಪಸ್ ಬರಲು ಮುಂದಾಗಿದ್ದಾರೆ.ಅವರನ್ನು ಯಾವುದೇ ಕಾರಣಕ್ಕೂ ಮತ್ತೆ ಪಕ್ಷಕ್ಕೆ ಸೇರಿಸಿಕೊಳ್ಳುವುದಿಲ್ಲ ಎಂದು ಕಾಂಗ್ರೆಸ್-ಜೆಡಿಎಸ್ ನಿರ್ಧಾರ ಮಾಡಿವೆ.

ಮುಂದುವರಿದ ರಾಜಕೀಯ ಸ್ಥಿತ್ಯಂತರದಲ್ಲಿ ಬಿಜೆಪಿ ಪ್ರಕಾರ, ವಿಶ್ವಾಸಮತ ಯಾಚನೆಗೆ ಮುಂದಾದರೆ ಅದನ್ನು ತಡೆಗಟ್ಟಲು ದೋಸ್ತಿ ಪಕ್ಷಗಳು ತೆರೆಮರೆಯಲ್ಲಿ ಪ್ರಯಾಸ ನಡೆಸುತ್ತಿವೆಯಾದರೂ ಸಂಖ್ಯಾಬಲದ ಕೊರತೆಯಿಂದ ಬಹಿರಂಗವಾಗಿ ಅಖಾಡಕ್ಕಿಳಿಯದೆ ತಡವರಿಸುತ್ತಿವೆ.
ಸ್ಪೀಕರ್ ನಡೆ ನಿಗೂಢ: 15 ಶಾಸಕರ ರಾಜೀನಾಮೆ ಪ್ರಕರಣದಲ್ಲಿ ಸ್ಪೀಕರ್ ನಿರ್ಧಾರ ಕರ್ನಾಟಕದ ರಾಜಕೀಯದಲ್ಲೇ ಹೊಸ ಮೈಲಿಗಲ್ಲು ಸೃಷ್ಟಿಸುವ ಸಾಧ್ಯತೆ ಇದ್ದು, ಎಲ್ಲರ ಚಿತ್ತ ಅತ್ತ ಹರಿದಿದೆ.

ಸದ್ಯದ ಆಯ್ಕೆಗಳ ಪ್ರಕಾರ ಸ್ಪೀಕರ್ ಅವರು ಅತೃಪ್ತರ ರಾಜೀನಾಮೆ ಅಂಗೀಕರಿಸಬೇಕು ಅಥವಾ ಅವರ ವಿರುದ್ದ ಶಾಸಕಾಂಗ ಪಕ್ಷದ ನಾಯಕರ ದೂರು ಆಧರಿಸಿ ಅನರ್ಹಗೊಳಿಸುವುದನ್ನು ಮೀರಿ ಯಾವುದೇ ಕ್ರಮ ಕೈಗೊಳ್ಳದೆಯೂ ತಟಸ್ಥವಾಗಿಯೂ ಇರಬಹುದು.

ಆದರೆ, ನಿನ್ನೆ ನಡೆದ ವಿಚಾರಣೆ ಪ್ರಕಾರ, ರಾಜೀನಾಮೆ ನೀಡಿದವರು 15 ಮಂದಿ ಅನರ್ಹಕ್ಕೆ ಅರ್ಹರು ಎಂದು ಕಾಂಗ್ರೆಸ್ ಶಾಸಕಾಂಗ ಪಕ್ಷದ ಪರ ವಕೀಲರು ವಾದ ಮಾಡಿದ್ದಾರೆ.ಅದೇ ಸಂದರ್ಭದಲ್ಲಿ ಅತೃಪ್ತರು ನಾಲ್ಕು ವಾರಗಳ ಕಾಲಾವಕಾಶ ಕೇಳಿ ರಕ್ಷಣಾತ್ಮಕ ಆಟವನ್ನು ಮುಂದುವರಿಸಿದ್ದಾರೆ.
ಒಂದು ವೇಳೆ ಸ್ಪೀಕರ್ ಅನರ್ಹತೆ ದಂಡ ಪ್ರಯೋಗಿಸಿದರೆ ನಿಗಮ ಮಂಡಳಿ ಸೇರಿದಂತೆ ಇನ್ನಿತರ ಅಧಿಕಾರ ಹಿಡಿಯುವ ಅವರು ಕನಸು ಭಗ್ನವಾಗಲಿದೆ.ಹೀಗಾಗಿ ಸ್ಪೀಕರ್ ಆದೇಶ ಹೊರಬಿದ್ದ ಕೂಡಲೇ ಮತ್ತೊಂದು ಸುತ್ತಿನ ರಾಜಕೀಯ ಸಮರ ಆರಂಭಗೊಳ್ಳುವ ಸಾಧ್ಯತೆ ಇದೆ.
ಕಾಂಗ್ರೆಸ್‍ಗೆ ವಿಪಕ್ಷ ನಾಯಕನ ಚಿಂತೆ: ಕಾಂಗ್ರೆಸ್‍ನ ಕೆಲವು ನಾಯಕರ ನಿರೀಕ್ಷೆಯಂತೆ ಸಮ್ಮಿಶ್ರ ಸರ್ಕಾರ ಪತನವಾಗಿದೆ. ಸೂಕ್ಷ್ಮ ಬೆಳವಣಿಗೆಯಲ್ಲಿ ವಿಪಕ್ಷ ನಾಯಕನ ಆಯ್ಕೆ ಕುರಿತಂತೆ ಈಗಾಗಲೇ ಪಕ್ಷದ ಲಾಬಿ ಆರಂಭಗೊಂಡಿದೆ.

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಸ್ತುತ ಶಾಸಕಾಂಗ ಪಕ್ಷದ ನಾಯಕರಾಗಿದ್ದು ಸಹಜ ಎಂಬಂತೆ ಅವರೇ ವಿಪಕ್ಷ ನಾಯಕನ ಸ್ಥಾನಕ್ಕೆ ಸೂಕ್ತ ಎಂಬ ಚರ್ಚೆಗಳು ನಡೆದಿವೆ. ಆದರೆ, ಟ್ರಬಲ್ ಶೂಟರ್ ಎಂದೇ ಗುರುತಿಸಿಕೊಂಡಿರುವ ಡಿ.ಕೆ.ಶಿವಕುಮಾರ್, ಡಾ.ಜಿ.ಪರಮೇಶ್ವರ್, ಅತ್ಯಂತ ಹಿರಿಯ ನಾಯಕರಾದ ಎಚ್.ಕೆ.ಪಾಟೀಲ್ ಸಹ ವಿಪಕ್ಷ ನಾಯಕ ಸ್ಥಾನದ ರೇಸ್‍ನಲ್ಲಿದ್ದಾರೆ.

ಜೆಡಿಎಸ್‍ಗೆ ಮೈತ್ರಿಯ ಚಿಂತೆ: ಸರ್ಕಾರ ಪತನವಾದ ನಂತರ ಜೆಡಿಎಸ್‍ಗೆ ನಂಬಿಕೆ ದ್ರೋಹ ಮಾಡಿದ ಅತೃಪ್ತರಿಗೆ ಪಾಠ ಕಲಿಸುವ ಜಿದ್ದಿನಲ್ಲಿದೆ. ಮುಂದಿನ ಉಪಚುನಾವಣೆಯಲ್ಲಿ ಸ್ಪರ್ಧಿಸುವ ರಾಜೀನಾಮೆ ನೀಡಿದ 15 ಮಂದಿಯ ಕ್ಷೇತ್ರಗಳಲ್ಲಿ ಪರ್ಯಾಯ ನಾಯಕತ್ವ ಹುಟ್ಟುಹಾಕಿ ಚುನಾವಣೆಯಲ್ಲಿ ಗೆಲ್ಲಿಸುವುದು ಜೆಡಿಎಸ್ ಹಾಗೂ ಕಾಂಗ್ರೆಸ್‍ನ ಪರಮ ಗುರಿಯಾಗಿದೆ.

ಆದರೆ, ಪ್ರತ್ಯೇಕವಾಗಿ ಸ್ಪರ್ಧಿಸುವುದೇ ಅಥವಾ ಲೋಕಸಭೆ ಚುನಾವಣೆಯಲ್ಲಿ ಮಾಡಿಕೊಂಡಿದ್ದಂತೆ ಪೂರ್ವಭಾವಿ ಮೈತ್ರಿಯ ರಣತಂತ್ರವನ್ನು ಪುನಃ ಅನುಸರಿಸುವುದೇ ಎಂದು ಆಲೋಚಿಸಲಾಗುತ್ತಿದ್ದು, ಒಂದು ವೇಳೆ ಪೂರ್ವ ಮೈತ್ರಿಯೊಂದಿಗೆ ಸ್ಪರ್ಧಿಸಿದರೆ ಫಲಿತಾಂಶ ಏರುಪೇರಾಗುವ ಸಾಧ್ಯತೆಯಿದೆ. ಹಾಗಾಗಿ ಹೊಂದಾಣಿಕೆಯಿಂದ ಸ್ಪರ್ಧೆಗಿಳಿಯಲು ಆಸಕ್ತಿ ತೋರುತ್ತಿವೆ. ಈ ಕುರಿತು ಚರ್ಚಿಸಲು ಇಂದು ಜೆಡಿಎಸ್ ಶಾಸಕಾಂಗ ಪಕ್ಷದ ಸಭೆಯನ್ನು ಕರೆದಿದೆ. ಕಾಂಗ್ರೆಸ್‍ನಲ್ಲಿ ಕೆಲವರಿಗೆ ಮತ್ತೆ ಜೆಡಿಎಸ್‍ನ ಸಖ್ಯ ಬೇಡವಾಗಿದ್ದು, ಸ್ವತಂತ್ರವಾಗಿ ಸ್ಪರ್ಧೆ ನಡೆಸುವ ಬಗ್ಗೆಯೂ ಚರ್ಚೆ ನಡೆಯುತ್ತಿದೆ.
ಮುಂದಿನ ಉಪಚುನಾವಣೆ ನಡೆಯುವ ಸಂದರ್ಭದಲ್ಲಿ ಬಿಜೆಪಿ ಅಧಿಕಾರದಲ್ಲಿರಲಿದ್ದು, ಜೆಡಿಎಸ್ ಹಾಗೂ ಕಾಂಗ್ರೆಸ್ ಪ್ರತ್ಯೇಕವಾಗಿ ಸ್ಪರ್ಧಿಸಿದರೆ 15 ಸ್ಥಾನಗಳಲ್ಲಿ ಎರಡು ಅಥವಾ ಮೂರರಲ್ಲಿ ಗೆಲ್ಲುವುದು ಕಷ್ಟ. ಹಾಗಾಗಿ ಹೊಂದಾಣಿಕೆ ಸೂಕ್ತ ಎಂದು ಕಾಂಗ್ರೆಸ್‍ನ ಕೆಲವು ನಾಯಕರು ಹೇಳುತ್ತಿದ್ದಾರೆ.
ಒಟ್ಟಿನಲ್ಲಿ ರಾಜ್ಯ ರಾಜಕಾರಣ ದಿನದಿಂದ ದಿನಕ್ಕೆ ತೀಕ್ಷ್ಣ ತಿರುವು ಪಡೆಯುತ್ತಿದ್ದು, ಮಳೆ ನಿಂತರೂ ಮರದ ಹನಿ ನಿಲ್ಲುವುದಿಲ್ಲ ಎಂಬಂತೆ ರಾಜಕಾರಣ ರಂಗೇರುತ್ತಲೇ ಇದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ