ಇಂದು ಸಿಎಂ ವಿಶ್ವಾಸಮತ ಯಾಚನೆಯಾಗದಿದ್ದರೆ, ಕಾನೂನಿನ ಬ್ರಹ್ಮಾಸ್ತ್ರ ಪ್ರಯೋಗಿಸಲು ಮುಂದಾಗಿರುವ ರಾಜ್ಯಪಾಲರು

ಬೆಂಗಳೂರು, ಜು.22- ಒಂದು ವೇಳೆ ಇಂದು ಕೂಡಾ ವಿಶ್ವಾಸಮತಯಾಚನೆಯ ಪ್ರಸ್ತಾವನೆಯನ್ನು ವಿಧಾನಸಭೆಯ ಸ್ಪೀಕರ್ ಕಾರಣ ನೀಡಿ ಮುಂದೂಡಿದರೆ, ಸಂಜೆಯೇ ರಾಜ್ಯಪಾಲರು ಕಾನೂನಿನ ಬ್ರಹ್ಮಾಸ್ತ್ರ ಪ್ರಯೋಗಿಸಲು ಮುಂದಾಗಿದ್ದಾರೆ.

ಆಡಳಿತಾರೂಢ ಸರ್ಕಾರ ಶಾಸಕರ ವಿಶ್ವಾಸ ಕಳೆದುಕೊಂಡಿದೆ.ಮೈತ್ರಿ ಸರ್ಕಾರ ಬಹುಮತ ಸಾಬೀತುಪಡಿಸುತ್ತಿಲ್ಲ ಎಂದು ರಾಜ್ಯಪಾಲರು ಕೇಂದ್ರದ ಗೃಹ ಇಲಾಖೆಗೆ ವರದಿ ಸಲ್ಲಿಸಲಿದ್ದಾರೆ ಎನ್ನಲಾಗುತ್ತಿದೆ.ರಾಜ್ಯದ ರಾಜಕೀಯ ಪರಿಸ್ಥಿತಿ ಅವಲೋಕಿಸಿ ಸಾಂವಿಧಾನಿಕ ಬಿಕ್ಕಟ್ಟನ್ನು ನಿಯಂತ್ರಿಸಲು ರಾಜ್ಯಪಾಲರು ವಿಧಾನಸಭೆಯನ್ನು ಅಮಾನತು ಮಾಡಿ ರಾಜ್ಯದಲ್ಲಿ ರಾಷ್ಟ್ರಪತಿ ಆಡಳಿತ ಜಾರಿಗೆ ತರಲು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡುವ ಸಾಧ್ಯತೆಗಳಿವೆ.
ಮುಖ್ಯಮಂತ್ರಿ ಕುಮಾರಸ್ವಾಮಿ ಇಂದು ನಡೆಯುವ ಅಧಿವೇಶನದಲ್ಲಿ ತಮ್ಮ ಸರ್ಕಾರಕ್ಕೆ ಇರುವ ವಿಶ್ವಾಸಮತ ಸಾಬೀತುಪಡಿಸದೆ ನಾಳೆಗೆ ಮುಂದೂಡಿದರೆ ರಾಜ್ಯದಲ್ಲಿ ಸಾಂವಿಧಾನಿಕ ಬಿಕ್ಕಟ್ಟು ಸೃಷ್ಟಿಯಾಗುವ ಎಲ್ಲಾ ಸಾಧ್ಯತೆಗಳಿವೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ.

ವಿಶ್ವಾಸ ಮತಯಾಚನೆಗೆ ರಾಜ್ಯಪಾಲರು ಈಗಾಗಲೇ ಎರಡು ಬಾರಿ ಗಡುವು ನೀಡಿದ್ದು, ಇಂದಿನ ವಿಧಾನಸಭೆ ಕಲಾಪವನ್ನು ಸಹ ತಾಳ್ಮೆಯಿಂದ ಗಮನಿಸಲಿದ್ದಾರೆ.ಸಿಎಂ ಅವರು ಕಳೆದ ವಾರದಂತೆ ಇಂದೂ ಕೂಡ ಚರ್ಚೆಯಲ್ಲಿಯೇ ಕಲಾಪ ತಳ್ಳಿದರೆ ರಾಜ್ಯಪಾಲರು ಕೇಂದ್ರ ಸರ್ಕಾರಕ್ಕೆ ಸಾಂವಿಧಾನಿಕ ಬಿಕ್ಕಟ್ಟು ಉಂಟಾಗಿರುವ ಬಗ್ಗೆ ವರದಿ ನೀಡುವ ಎಲ್ಲಾ ಲಕ್ಷಣಗಳು ಗೋಚರವಾಗುತ್ತಿವೆ.

ಸದಸ್ಯರು ಇದೇ ವಿಷಯದ ಮೇಲೆ ಚರ್ಚೆ ಮಾಡಬೇಕಾಗಿದೆ.ಅಲ್ಲದೆ, ಶಾಸಕರ ಅನರ್ಹತೆ ಹಾಗೂ ರಾಜ್ಯಪಾಲರ ವಿರುದ್ದ ಸಲ್ಲಿಕೆ ಮಾಡಿರುವ ಅರ್ಜಿಗಳ ವಿಚಾರಣೆ ಇಂದು ಸುಪ್ರೀಂಕೋರ್ಟ್‍ನಲ್ಲಿ ಇತ್ಯರ್ಥವಾಗದಿದ್ದರೆ ಕಲಾಪವನ್ನು ಮುಂದೂಡುವ ಸಾಧ್ಯತೆ ಇದೆ. ನ್ಯಾಯಾಲಯದಲ್ಲಿ ತೀರ್ಪು ಬರುವವರೆಗೂ ಯಾವುದೇ ರೀತಿಯ ರೂಲಿಂಗ್ ನೀಡುವುದು ಬೇಡ ಎಂದು ಆಡಳಿತ ಪಕ್ಷದ ಮುಖಂಡರು ಮನವಿ ಮಾಡಿಕೊಂಡರೆ ಅನಿವಾರ್ಯವಾಗಿ ಸ್ಪೀಕರ್ ಕಲಾಪವನ್ನು ಮುಂದೂಡದೇ ಬೇರೆ ದಾರಿ ಇಲ್ಲ.

ಹಾಗೊಂದು ವೇಳೆ ಕಲಾಪ ಮುಂದೂಡುವ ಪ್ರಯತ್ನ ಮಾಡಿದರೆ ರಾಜ್ಯಪಾಲ ವಿ.ಆರ್.ವಾಲಾ ಅವರು, ಅಧಿಕೃತವಾಗಿ ರಂಗಪ್ರವೇಶ ಮಾಡಲಿದ್ದಾರೆ. ರಾಜ್ಯ ಸರ್ಕಾರ ತಾವು ಈ ಹಿಂದೆ ನೀಡಿದ್ದ ಆದೇಶವನ್ನು ಉದ್ದೇಶಪೂರ್ವಕವಾಗಿ ಪಾಲನೆ ಮಾಡದೆ ಸಮಯ ಕಳೆಯುತ್ತಿದೆ. ಸರ್ಕಾರ ಅಲ್ಪಮತಕ್ಕೆ ಕುಸಿದಿರುವಾಗ ಕಾರ್ಯಾಂಗದ ಮುಖ್ಯಸ್ಥನಾಗಿ ನಾನು ಸುಮ್ಮನೆ ಕೈ ಕಟ್ಟಿ ಕೂರಲು ಸಾಧ್ಯವಿಲ್ಲ. ಕಾನೂನಿನ ಪ್ರಕಾರ ಕ್ರಮ ಜರುಗಿಸಲು ಸಿದ್ಧ ಎಂಬ ಸಂದೇಶವನ್ನು ಪರೋಕ್ಷವಾಗಿ ರವಾನಿಸಿದ್ದಾರೆ.

ಕಳೆದ ವಾರ ಮುಖ್ಯಮಂತ್ರಿ ಕುಮಾರಸ್ವಾಮಿಗೆ ಎರಡು ಬಾರಿ ಗಡುವು ನೀಡಿದರೂ ವಿಶ್ವಾಸ ಮತ ಸಾಬೀತುಪಡಿಸದಿರುವ ಕುರಿತು ರಾಜ್ಯಪಾಲರು ಕೇಂದ್ರ ಸರ್ಕಾರಕ್ಕೆ ವರದಿ ನೀಡಿದ್ದಾರೆ.ಮುಖ್ಯಮಂತ್ರಿ ಕುಮಾರಸ್ವಾಮಿ ಇಂದಾದರೂ ಸದನದಲ್ಲಿ ವಿಶ್ವಾಸ ಮತದ ಚರ್ಚೆ ಪೂರ್ಣಗೊಳಿಸಿ ಬಹುಮತ ಸಾಬೀತುಪಡಿಸದಿದ್ದರೆ ರಾಜ್ಯದಲ್ಲಿ ಸಾಂವಿಧಾನಿಕ ಬಿಕ್ಕಟ್ಟು ಸೃಷ್ಟಿಯಾಗಲಿದೆ.

ರಾಷ್ಟ್ರಪತಿ ಆಡಳಿತ ಜಾರಿ ನಂತರ ಕೆಲ ದಿನಗಳ ಬಳಿಕ ಬಹುಮತ ಸಾಬೀತು ಪಡಿಸಲು ಸಿದ್ಧವಿರುವ ರಾಜಕೀಯ ಪಕ್ಷವನ್ನು ಸರ್ಕಾರ ರಚಿಸಲು ರಾಜ್ಯಪಾಲರು ಆಹ್ವಾನಿಸಬಹುದಾಗಿದೆ.ಇಂದು ನಡೆಯುವ ವಿಧಾನಸಭೆ ಕಾರ್ಯ ಕಲಾಪಗಳ ಮಾಹಿತಿ ತಿಳಿದುಕೊಂಡು ವರದಿ ನೀಡಲು ರಾಜ್ಯಪಾಲರು ವಿಶೇಷ ಅಧಿಕಾರಿಯನ್ನು ಇಂದೂ ಕೂಡ ಸದನಕ್ಕೆ ಕಳುಹಿಸಲಿದ್ದಾರೆ ಎಂದು ತಿಳಿದು ಬಂದಿದೆ.

ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಕಳೆದ ಶುಕ್ರವಾರ ಹಾಗೂ ಇಂದು ಸದನದಲ್ಲಿ ವಿಶ್ವಾಸಮತ ಸಾಬೀತುಪಡಿಸುವ ಇಂಗಿತ ವ್ಯಕ್ತಪಡಿಸಿ ಹೇಳಿಕೆ ನೀಡಿದ್ದರು.ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಸಹ ಇದೇ ಅಭಿಪ್ರಾಯ ವ್ಯಕ್ತಪಡಿಸಿದ್ದರು.
ವಿಧಾನಸಭೆ ಅಧ್ಯಕ್ಷ ರಮೇಶ್ ಕುಮಾರ್ ಅವರೂ ಇಂದು ವಿಶ್ವಾಸ ಮತ ನಿರ್ಣಯ ಚರ್ಚೆ ಮತ್ತು ಮತದಾನ ಪೂರ್ಣಗೊಳ್ಳಲೇಬೇಕೆಂದು ತಿಳಿಸಿದ್ದಾರೆ.
ತೀರ್ಪಿನ ಮೇಲೆ ಅವಲಂಬಿತ:

ಸುಪ್ರೀಂನಲ್ಲಿ ನಡೆಯುವ ಅರ್ಜಿಯ ವಿಚಾರಣೆ ಹಾಗೂ ನ್ಯಾಯಾಲಯ ನೀಡುವ ಆದೇಶ ಗಮನದಲ್ಲಿಟ್ಟುಕೊಂಡು ಮುಖ್ಯಮಂತ್ರಿ ಕುಮಾರಸ್ವಾಮಿ ವಿಶ್ವಾಸಮತ ನಿರ್ಣಯದ ಚರ್ಚೆಗೆ ಮಂಗಳ ಹಾಡುವ ಬಗ್ಗೆ ನಿರ್ಧಾರ ತಗೆದುಕೊಳ್ಳಲಿದ್ದಾರೆ ಎನ್ನಲಾಗಿದೆ.
ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯವರು ಅಂಜಿಕೆಯಿಂದ ವಿಶ್ವಾಸಮತದಿಂದ ತಪ್ಪಿಸಿಕೊಳ್ಳುವ ಸಾಧ್ಯತೆ ಇದೆ ಎಂದು ಪಕ್ಷೇತರ ಶಾಸಕರಾದ ಆರ್.ಶಂಕರ್ ಮತ್ತು ಎಚ್.ನಾಗೇಶ್ ಅವರು ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗಾಯ್ ಅವರಿಗೆ ಅರ್ಜಿ ಸಲ್ಲಿಸಿದ್ದಾರೆ.

ಅಲ್ಪಮತದ ಸರ್ಕಾರ ನಡೆಸುತ್ತಿರುವ ಕರ್ನಾಟಕ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯವರು 22ರ ಕಲಾಪದ ಬಗ್ಗೆ ಭೀತಿ ಹೊಂದಿದ್ದಾರೆ. ವಿಶ್ವಾಸಮತದಿಂದ ತಪ್ಪಿಸಿಕೊಳ್ಳುವ ಹತಾಶ ಪ್ರಯತ್ನವಾಗಿ ತುರ್ತು ಸನ್ನಿವೇಶವನ್ನು ಸೃಷ್ಟಿಸುವ ಬಗ್ಗೆ ಮತ್ತು ಆಸ್ಪತ್ರೆಗೆ ದಾಖಲಾಗುವುದೂ ಸೇರಿದಂತೆ ವೈದ್ಯಕೀಯ ತುರ್ತುಸ್ಥಿತಿಯನ್ನು ಬಳಸಿಕೊಳ್ಳುವ ದಟ್ಟ ಅನುಮಾನಗಳಿವೆ ಎಂದು ಶಾಸಕರು ಅರ್ಜಿಯಲ್ಲಿ ಹೇಳಿದ್ದಾರೆ.

ಕುಮಾರಸ್ವಾಮಿ ಸರ್ಕಾರಕ್ಕೆ ನೀಡಿದ ಬೆಂಬಲವನ್ನು ನಾವು ವಾಪಸ್ ಪಡೆದಿದ್ದೇವೆ ಎಂದು ಸ್ಪಷ್ಟಪಡಿಸಿದ್ದಾರೆ.ರಾಜ್ಯ ರಾಜಕೀಯ ಬೆಳವಣಿಗೆಗಳ ಹಿನ್ನೆಲೆಯಲ್ಲಿ ವಿಶ್ವಾಸಮತ ಯಾಚಿಸುವುದಾಗಿ ಕುಮಾರಸ್ವಾಮಿ ಜು.12ರಂದು ಘೋಷಿಸಿದ್ದರು. ಇದರ ಅನ್ವಯ ಜು.18ರಂದು ವಿಶ್ವಾಸಮತ ನಡೆಯಬೇಕಿತ್ತು.ಸರ್ಕಾರ ಅಲ್ಪಮತಕ್ಕೆ ಕುಸಿದಿದ್ದರೂ ವಿಶ್ವಾಸಮತ ಯಾಚಿಸಲಿಲ್ಲ ಎಂದು ದೂರಿದ್ದಾರೆ.
ಈ ಬಿಕ್ಕಟ್ಟಿನ ಲಾಭ ಪಡೆದು ಅಲ್ಪಮತದ ಸರ್ಕಾರ ಅಧಿಕಾರಿಗಳ ವರ್ಗಾವಣೆ ಸೇರಿದಂತೆ ಹಲವು ಆಡಳಿತಾತ್ಮಕ ನಿರ್ಧಾರಗಳನ್ನು ಕೈಗೊಂಡಿದೆ ಎಂದು ಆಕ್ಷೇಪಿಸಿದ್ದಾರೆ.ವಿಶ್ವಾಸಮತ ಯಾಚನೆಗೆ ಸಂಬಂಧಿಸಿದಂತೆ ರಾಜ್ಯಪಾಲರ ನಿರ್ದೇಶನವನ್ನೂ ಧಿಕ್ಕರಿಸಲಾಗಿದೆ ಎಂದು ವಿವರಿಸಲಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ